Advertisement

ಕುರುಬರ ಸಂಘ ಮಹಾರಾಷ್ಟ್ರ: “ಕನಕ ಜಯಂತಿ ಉತ್ಸವ’ 

10:48 AM Dec 12, 2017 | |

ಮುಂಬಯಿ: ರಾಜ್ಯ ಅಥವಾ ಹೊರದೇಶಕ್ಕೆ ಹೋದಾಗ ತಮ್ಮತನದ ಅಭಿಮಾನ ಸಹಜವಾಗಿ ಹೆಚ್ಚುತ್ತದೆ. ಸ್ವನಾಡಿನ ಅಭಿಲಾಷೆಯೂ ಹೆಚ್ಚಾಗುತ್ತದೆ. ಹೊರನಾಡಿನ ಜನತೆಗೆ ಒಳನಾಡ ಅಭಿಮಾನ ಸ್ವಾಭಾವಿಕವಾದದ್ದು. ಆದರೆ ಕನ್ನಡಿಗರಿಗೆ ಕನ್ನಡ ಮೊದಲು  ಆಮೇಲೆ ಜಾತಿಯ ವ್ಯಾಮೋಹ ಎನ್ನುವುದೇ ಅಭಿನಂದನೀಯ. ಕನಕದಾಸ, ಬಸವಣ್ಣ, ಅನೇಕ ಸಂತರು, ಮಹಾತ್ಮರು, ಕುವೆಂಪು ಇವರೆಲ್ಲರೂ ಸಮಾಜದಲ್ಲಿ ಬದಲಾವಣೆ ಬಯಸಿದ ಮಹಾತ್ಮರು. ಸಂತರು, ಶರಣರು, ದಾಸರು, ಸಾಧುಗಳು ಸಮಾಜದಲ್ಲಿ ಬದಲಾವಣೆ ಬಯಸಿದ ಚೇತನರು. ಇಂತಹ ಮಹಾತ್ಮರ  ಮಾನವೀಯ ಮೌಲ್ಯಗಳಿಂದ ಜಾತಿ ವ್ಯವಸ್ಥೆಗೆ ಕಡಿವಾಣ ಸಾಧ್ಯವಾಗಿದೆ. ಇಲ್ಲವಾದರೆ ಯಾವುದೇ ಧರ್ಮ ನಿಂತ ನೀರಾಗುತ್ತಿತ್ತು. ಜಾತೀಕರಣದಲ್ಲಿ ಜಡತ್ವ ಇರುತ್ತಿತ್ತು ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಡಿ. 10ರಂದು ಚೆಂಬೂರಿನ  ಜವಾಹರ್‌ ಮೈದಾನದಲ್ಲಿ ಕುರುಬರ ಸಂಘ ಮಹಾರಾಷ್ಟ್ರ ವತಿಯಿಂದ ನಡೆದ “530 ನೇ ಕನಕ ಜಯಂತ್ಯುತ್ಸವ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆದ ಮೇಲೆ ಇದೇ ಮೊದಲಬಾರಿ ಮುಂಬಯಿಗೆ ಬಂದಿದ್ದೇನೆ. ಈ ಹಿಂದೆ ಬರ ಬೇಕಾದ ಸಂದರ್ಭಗಳೂ ಒದಗಿಲ್ಲ. ಅವಕಾಶಕ್ಕಾಗಿ ಸಂಘಟಕರ ಮತ್ತು ಆಹ್ವಾನಿತ ಕನ್ನಡಿಗರ ಅಭಿಮಾನಕ್ಕೆ ವಂದಿಸುವೆ. ಸ್ವಾರ್ಥಿ ಗಳಿಂದ ಜಾತಿಗಳು ಸೃಷ್ಟಿಯಾಗಿವೆ.  ಮೊದಲು ಮಾನವ ಧರ್ಮ ಗಳಾಗಬೇಕೇ ಹೊರತು ಜಾತೀಕರಣದಿಂದ ದ್ವೇಷಿಸುವಂತೆ ಆಗಬಾರದು. ಜಾತಿಯಿಂದ ಶ್ರೀಮಂತಿಕೆ ಅಸಾಧ್ಯ. ನಮ್ಮ ಸದ್ಗುಣ ನಡವಳಿಕೆಯಿಂದ ಮಾತ್ರ ಶ್ರೀಮಂತರಾಗಲು ಸಾಧ್ಯ. ಆದ್ದರಿಂದ ರಾಜಕಾರಣದಿಂದ ಧರ್ಮ ಮಾಡಬೇಕೇ ಹೊರತು ಧರ್ಮದಿಂದ ರಾಜಕಾರಣ ಸಲ್ಲದು. ದ್ವೇಷದ ಜಾತೀಕರಣ ತಿರಸ್ಕರಿಸಿದ್ದ ಕನಕದಾಸರು ಭಕ್ತಿ ವ್ಯವಸ್ಥೆಗೆ ಸೀಮಿತರಾಗಿರಲಿಲ್ಲ. ಆದುದರಿಂದ‌ ಇಂತಹ ಮಹಾನುಭವಿಗಳ ಜೀವನ ನಡೆ ಮೈಗೂಡಿಸಿರಿ. ಅವರ ವಿಚಾರಗಳನ್ನು ಅರಿತು ನಡೆಯುವುದೇ ಅವರಿಗೆ ಕೊಡುವ ಗೌರವ. 2000 ವರ್ಷಗಳ ಇತಿಹಾಸದ ಕನ್ನಡ ಭಾಷೆಯನ್ನು ಮರೆಯದಿರಿ. ಮಹಾರಾಷ್ಟ್ರದಲ್ಲಿದ್ದರೂ ವ್ಯವಹಾರಕ್ಕೆ  ಪ್ರಾದೇಶಿಕ ಭಾಷೆ ಜೊತೆಗೆ ಮಕ್ಕಳಲ್ಲಿ ಕನ್ನಡಾಭ್ಯಾಸವನ್ನು ರೂಢಿಸಿ. ಮಕ್ಕಳಿಗೆ ಮಾತೃ ಭಾಷೆಯ ಜತೆ ಸ್ವಸಂಸ್ಕೃತಿಯನ್ನು ಕಲಿಸಿಕೊಡಬೇಕು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ಪತ್ರ ಬರೆದು ಒಂದು ಸೈಟು ನೀಡುವರೆ ಕೋರುತ್ತಾ ಕುರುಬರ ಭವನ, ಕನ್ನಡ ಶಾಲೆಗೆ ಜಾಗ ಕೊಡಿಸಲು ಪ್ರಯತ್ನಿಸುತ್ತೇನೆ.  ಜಾಗ ಸಿಕ್ಕಿದ್ದರೆ ದುಡೂx ಕೊಡ್ತಿನಿ. ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡೋಣ. ನಿಮ್ಮ ಪ್ರೀತಿ ಅಭಿಮಾನ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಕುರುಬರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಮಂಜೇ ಚಿಕ್ಕೇ ಗೌಡರ ಘನಾಧ್ಯಕ್ಷತೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಾಮನಕೇರಿ ಅರಳಿಚಂಡಿ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ ಶ್ರೀ  ಪರಮಾನಂದ ಮಹಾರಾಜ ಮತ್ತು ಶ್ರೀ ಶನೀಶ್ವರ ದೇವಸ್ಥಾನ ಚೆಂಬೂರು ಇದರ ಧರ್ಮಾಧಿಕಾರಿ ಕೆ. ಎಂ. ರಾಮಸ್ವಾಮಿ ಉಪಸ್ಥಿತರಿದ್ದು ಅನುಗ್ರಹಿಸಿದರು. ಕರ್ನಾಟಕದ ಸಾರಿಗೆ ಸಚಿವ ಎಚ್‌. ಎಂ. ರೇವಣ್ಣ ಅವರು ಕನಕದಾಸರ ಭಾವಚಿತ್ರ ಅನಾವರಣಗೊಳಿಸಿದರು.

 ಗೌರವ ಅತಿಥಿಗಳಾಗಿ ಶಾಸಕರಾದ ಚೆಲುವರಾಯ ಸ್ವಾಮಿ, ಡಾ| ನಾರಾಯಣ ಆರ್‌. ಗೌಡ, ಸಿ. ಎನ್‌. ಬಾಲಕೃಷ್ಣ, ಮಾಜಿ ಶಾಸಕ ಕೆ. ಬಿ. ಚಂದ್ರಶೇಖರ್‌, ಕುರುಬರ ಸಮಾಜದ ಕೆ. ಆರ್‌. ರಮೇಶ ಚನ್ನರಾಯಪಟ್ಟಣ, ಸಂಗಮೇಶ ಪಿ. ಓಲೇಕಾರ ಬಾಗೇವಾಡಿ, ಒಕ್ಕಲಿಗರ ಸಮಾಜದ ಮುಂದಾಳುಗಳಾದ ರಾಮಚಂದ್ರ ಗೌಡ ಬೆಂಗಳೂರು, ರಂಗಪ್ಪ ಸಿ. ಗೌಡ, ಜಿತೇಂದ್ರ ಎಲ್‌. ಗೌಡ, ಮೋಹನ ಕುಮಾರ್‌ ಜೆ. ಗೌಡ, ವಿಕಾಸ್‌ ಕುಮಾರ್‌ ಗೌಡ, ಸಿದ್ದಣ್ಣ ಎಸ್‌. ಮೇಟಿ ಗೋವಾ, ಪುಟ್ಟrಸ್ವಾಮಿ ಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಅತಿಥಿ-ಗಣ್ಯರನ್ನು ಗೌರವಿಸಿದರು. ಕುರುಬರ ಸಂಘ ಮಹಾರಾಷ್ಟ್ರದ ಉಪಾಧ್ಯಕ್ಷ ಯೋಗೀಶ್‌ ಸಣ್ಣಪ್ಪ ಗೌಡ, ಕಾರ್ಯದರ್ಶಿ ರವಿ ಕುಮಾರ್‌ ಕಾಳೇಗೌಡ, ಕೋಶಾಧಿಕಾರಿ ಹುಚ್ಚೇ ಗೌಡ ನಂಜಪ್ಪ ಗೌಡ, ಜತೆ ಕಾರ್ಯದರ್ಶಿ ಶಿವೇ ಪುಟ್ಟೇ ಗೌಡ, ಜತೆ ಕೋಶಾಧಿಕಾರಿ ಗಂಗಾಧರ ಕಾಳೇ ಗೌಡ, ಸಲಹೆಗಾರ ರವಿ ರಾಜು ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸದಸ್ಯರುಗಳಾದ ರಾಜು ನಂಜಪ್ಪ ಗೌಡ, ಉಮೇಶ್‌ ಕಾಳೇ ಗೌಡ, ದೇವರಾಜ ಬೀರೇ ಗೌಡ‌, ಉಮೇಶ್‌ ರಾಜೇ ಗೌಡ, ಮಂಜು ಚಿಕ್ಕೇ ಗೌಡ, ಮಂಜೇಗೌಡ ಕುಳ್ಳೆ ಗೌಡ ಮತ್ತಿತರರು ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಸಂದಭೋìಚಿತವಾಗಿ ಮಾತನಾಡಿ ಕುರುಬರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸೇವೆ ಯನ್ನು ಪ್ರಶಂಸಿಸಿ ಆಯೋಜಿಸಿದ್ದ ಸಮಾರಂಭಕ್ಕಾಗಿ ಶುಭಹಾರೈಸಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಾಮಿಡಿ ಕಿಲಾಡಿ ಶಿವರಾಜ್‌ ಕೆ. ಆರ್‌. ಪೇಟೆ ಮತ್ತು ನಯನಾ ಬಳಗದಿಂದ ವಿವಿಧ ವಿನೋದಾವಳಿಗಳು ನಡೆಯಿತು. ಕುರುಬರ ಸಂಘ ಮಂಡ್ಯ ಇದರ ಕಾರ್ಯದರ್ಶಿ ಎಲ್‌. ದೇವರಾಜ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿ. ಪಿ. ವಿದ್ಯಾಶಂಕರ್‌ ನಾಡಗೀತೆಯನ್ನು ಹಾಡಿದರು. ರವೀಂದ್ರ ಎನ್‌. ಗೌಡ ಅತಿಥಿಗಳನ್ನು ಪರಿಚಯಿಸಿದರು. ಕಲಾದೇಗುಲ ಶ್ರೀನಿವಾಸ್‌ ಮತ್ತು ಶೃತಿ ಬೆಂಗಳೂರು ಅವರು ಕಾರ್ಯಕ್ರಮ ನಿರೂಪಿಸಿದರು. ರವಿ ಕುಮಾರ್‌ ಕಾಳೇಗೌಡ ವಂದಿಸಿದರು. ಸಮಾಜ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ ಪಕ್ಕದ ಸುಮಾರು ಐದು ರಾಜ್ಯಗಳಲ್ಲೂ ನಮ್ಮವರು ಇದ್ದರೂ, ಮಹಾರಾಷ್ಟ್ರದಲ್ಲಿ ನೆಲೆಯಾಗಿರುವ ನಮ್ಮವರು ಸಂಘಟಿಸಿರುವ ಈ ಅಭೂತಪೂರ್ವ ಸುಂದರ ಕಾರ್ಯಕ್ರಮ ಪ್ರಶಂಸನೀಯ. ಈ ಮೂಲಕ ಮುಖ್ಯಮಂತ್ರಿಗಳ ಮತ್ತು ನಮ್ಮೆಲ್ಲರ ಮನ ಪ್ರಸನ್ನವಾಗಿದೆ. ಆದ್ದರಿಂದ ಸಮಾಜದ ಮುಖಂಡರ ಶ್ರಮ ಫಲದಾಯಕವಾಗಿದೆ. ಕರ್ಮ ಭೂಮಿಯಲ್ಲಿ ದುಡಿಯೋಕೆ ಬಂದವರು ಸಂಘಟನೆಯಲ್ಲೂ ಶ್ರೀಮಂತರಾಗಿರುವಂತಿದೆ. ತಮ್ಮೆಲ್ಲರ ಆಶಯದ ಕನಕ ಭವನ ಶೀಘ್ರವೇ ನಿರ್ಮಾಣವಾಗಲಿ 
– ಎಚ್‌. ಎಂ. ರೇವಣ್ಣ ( ಕರ್ನಾಟಕ ಸಾರಿಗೆ ಸಚಿವರು).

ಮಾನವೀಯ ಧರ್ಮಕ್ಕೆ ಹೆಚ್ಚು ಆಧ್ಯತೆ ಮತ್ತು ಪ್ರೋತ್ಸಾಹ ಕೊಟ್ಟ ಕನಕದಾಸರ ಜೀವನ ನಮ್ಮೆಲ್ಲರಿಗೂ ಮಾದರಿ. ಆದ್ದರಿಂದ  ದಾಸರ ಬದುಕನ್ನು  ರೂಢಿಸಿಕೊಳ್ಳಿರಿ. ಜೊತೆಗೆ ಕನ್ನಡಾಂಬೆಯ ಮಾನ್ಯತೆಗೆ ಪಾತ್ರರಾಗಿರಿ 
– ಚೆಲುವರಾಯ ಸ್ವಾಮಿ (ಕರ್ನಾಟಕ ಶಾಸಕರು).

ನಮ್ಮ ಹಿರಿಯರು ಮಹಾರಾಷ್ಟ್ರದಲ್ಲಿ ಶತಮಾನದಿಂದಲೂ ನೆಲೆಯಾಗಿದ್ದಾರೆ.  ಕಾರ್ಮಿಕರಾಗಿ ದುಡಿಸಿಕೊಂಡು  ಇಂದು ಯಜಮಾನರಾಗಿ ಉನ್ನತಿ ಸಾಧಿಸಿದ ನಮ್ಮವರು ಸಾಕಷ್ಟು ಮಂದಿ ಇಲ್ಲಿದ್ದಾರೆ. ಅಲ್ಲದೆ ಸಮಾಜ ಸೇವೆಯಂತಹ ಗುರುತರ ಸೇವೆಯಲ್ಲಿ ತೊಡಗಿಸಿಕೊಂಡು ಒಂದು ಸ್ಥಾನಮಾನಕ್ಕೆ ಬಂದಿರುವುದು ಸ್ತುತ್ಯರ್ಹ. ಶಕ್ತಿಮೀರಿ ಸಮಾಜಕ್ಕೆ ಶ್ರಮಿಸುತ್ತಿರುವ ಕುರುಬರ ಸಂಘದ ಭವನಕ್ಕೆ ತನ್ನ ಅಮೂಲ್ಯವಾದ ಯೋಗದಾನ ನೀಡುವೆ 
– ಡಾ| ನಾರಾಯಣ ಆರ್‌.  ಗೌಡ (ಕರ್ನಾಟಕ ಶಾಸಕರು).

ಇದು ಮಹಾರಾಷ್ಟ್ರಾದ್ಯಂತ ನೆಲೆಯಾಗಿರುವ ಸ್ವ ಸಮಾಜ ಬಾಂಧವರನ್ನು ಒಗ್ಗೂಡಿಸುವ ಪ್ರಯತ್ನ ವಾಗಿದೆ. ಕನಕದಾಸರಂತಹ ಮಹಾನುಭಾವರ  ಜೀವನಕ್ಕೆ ಬದ್ಧರಾಗಿ ನಮ್ಮಲ್ಲಿನ ಏಕತೆಯನ್ನು ವೃದ್ಧಿಸಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಸೇವೆಯಾಗಿದೆ. ಭವಿಷ್ಯದಲ್ಲಿ ನಮ್ಮದೇ ಆದ ಭವನವನ್ನು ನಿರ್ಮಿಸುವ ಆಶಯ ನಮ್ಮದಾಗಿದ್ದು. ಅದಕ್ಕಾಗಿ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ 
– ಮಂಜೇ ಚಿಕ್ಕೇಗೌಡ (ಅಧ್ಯಕ್ಷರು : ಕುರುಬರ ಸಂಘ ಮಹಾರಾಷ್ಟ್ರ).

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next