Advertisement

ಕುರುಬ ಮುಖಂಡರು ಪರಸ್ಪರ ಒಂದಾಗಲಿ: ಕಾಗಿನೆಲೆ ಸ್ವಾಮೀಜಿ

11:26 PM Aug 25, 2019 | Lakshmi GovindaRaj |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ದಿಕ್ಕಿಗೆ, ಹಾಗೆಯೇ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸೇರಿ ಸಮುದಾಯದ ಇನ್ನಿತರ ರಾಜಕೀಯ ಮುಖಂಡರು ಮತ್ತೂಂದು ದಿಕ್ಕಿಗೆ ಸಾಗಿದರೆ ಕುರುಬ ಸಮುದಾಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ಶ್ರೀ ಸಿದ್ದರಾಮನಂದ ಮಹಾಸ್ವಾಮೀಜಿ ಪ್ರತಿಪಾದಿಸಿದರು.

Advertisement

ಭಾನುವಾರ ನಗರದಲ್ಲಿ ನಡೆದ ಅಹಲ್ಯಾಬಾಯಿ ಹೋಳ್ಕರ್‌ ಪತ್ತಿನ ಮಹಿಳಾ ಸಹಕಾರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದ ಹೆಸರಿನಲ್ಲಿ ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯ ಹಿಂದೆ ಬೀಳುತ್ತಾರೆ. ಇದರಿಂದಾಗಿ ಸಮುದಾಯದ ಏಳ್ಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಅಧಿಕಾರ ಪಡೆಯುವ ಮೊದಲು ಸಮುದಾಯದ ಶಕ್ತಿ ಪ್ರದರ್ಶಿಸುವ ಜನಪ್ರತಿನಿಧಿಗಳು ಬಳಿಕ ತಾವು ಬಂದ ಹಾದಿಯನ್ನು ಮರೆತು ಬಿಡುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ರೇವಣ್ಣ, ವಿಶ್ವನಾಥ್‌ ನಮ್ಮದೇ ಸಮುದಾಯದವರಾಗಿದ್ದರೂ ಅವರ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣುತ್ತಿದೆ. ಇದು ಹೀಗೇ ಮುಂದುವರಿದರೆ ಸಮುದಾಯದವರು ಅನಾಥರಾಗುತ್ತಾರೆಂದು ಹೇಳಿದರು.

ಪುರುಷರಿಗಿಂತ ಮಹಿಳೆಯರು ಪ್ರಾಮಾಣಿಕರು: ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಾಮಾಣಿಕವಾಗಿ ಹಣಕಾಸಿನ ವ್ಯವಹಾರ ನಡೆಸುತ್ತಾರೆ. ಹೆಣ್ಣು ಮಕ್ಕಳು ಆರ್ಥಿ ಕವಾಗಿ ಸ್ವಾವಲಂಬಿಗಳಾದರೆ ಸಹಜವಾಗಿಯೇ ಸಮಾಜ ನೋಡುವ ದೃಷ್ಟಿ ಸಹ ಬದಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಕಲ್ಯಾಣದುರ್ಗ ಕ್ಷೇತ್ರದ ಶಾಸಕಿ ಕೆ.ವಿ.ಉಷಾಶ್ರೀ ಚರಣ್‌, ಆಂಧ್ರಪ್ರದೇಶ ಕುರುಬ ಹಣಕಾಸು ನಿಗಮದ ಅಧ್ಯಕ್ಷೆ ಎಸ್‌.ಸವಿತ, ಶಾಸಕಿ ಕುಸುಮ ಶಿವಳ್ಳಿ ಮತ್ತಿತರರನ್ನು ಸನ್ಮಾನಿಸಲಾಯಿತು.

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಲ್ಲ
ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ಬೀಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣರಲ್ಲ. ಮೈತ್ರಿ ಸರ್ಕಾರದಲ್ಲಿನ ಗೊಂದಲಗಳು ಇದಕ್ಕೆ ಕಾರಣವಾಗಿವೆ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಾಗಿದ್ದಾರೆಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

Advertisement

ಯಾರನ್ನೂ ಕೂಡ ಸಿದ್ದರಾಮಯ್ಯ ಮುಂಬೈಗೆ ಕಳುಹಿಸಿಕೊಟ್ಟಿಲ್ಲ. ಸಿದ್ದರಾಮಯ್ಯ ಅವರ ಶಿಷ್ಯರಷ್ಟೇ ಮುಂಬೈಗೆ ಹೋಗಿಲ್ಲ. ಶಾಸಕ ಎಸ್‌.ಟಿ.ಸೋಮಶೇಖರ್‌ ಸೇರಿ ಅನೇಕರು ಹೋಗಿದ್ದರು. ಇವರೆಲ್ಲರೂ ಕೂಡ ಬಹಳ ವರ್ಷಗಳಿಂದ ಕಾಂಗ್ರೆಸ್‌ನಲ್ಲಿಯೇ ಇದ್ದವರು. ಇವರ ಜತೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರ ಶಿಷ್ಯ ಮುನಿರತ್ನ ಕೂಡ ಹೋಗಿದ್ದರು.

ಅಷ್ಟೇ ಅಲ್ಲ, ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ವಿಶ್ವನಾಥ್‌, ಶಾಸಕ ಗೋಪಾಲಯ್ಯ, ನಾರಾಯಣ ಗೌಡ ಕೂಡ ಮುಂಬೈಗೆ ಹೋಗಿದ್ದರು. ಇವರನ್ನು ಕೂಡ ಸಿದ್ದರಾಮಯ್ಯ ಅವರು ಕಳಿಸಿದರಾ ಎಂದು ಪ್ರಶ್ನಿಸಿದ ಅವರು, ಮೈತ್ರಿ ಸರ್ಕಾರದಲ್ಲಿ ಅನೇಕ ಗೊಂದಲಗಳಿದ್ದವು. ಅವು ಸರ್ಕಾರ ಬೀಳಲು ಕಾರಣವಾದವು ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಉರುಳಿ ಬಿದ್ದ ಮೇಲೆ ಆರೋಪ ಮಾಡುವುದು ಒಳ್ಳೆಯದಲ್ಲ. ಗುಪ್ತಚರ ಇಲಾಖೆ ಕುಮಾರಸ್ವಾಮಿ ಅವರ ಕೈಯಲ್ಲಿತ್ತು. ಅವರು ಈ ಬಗ್ಗೆ ಗಮನ ಹರಿಸಬೇಕಾಗಿತ್ತು. ಮೈತ್ರಿ ಸರ್ಕಾರದ ಗೊಂದಲಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next