ಕುರುಗೋಡು: ಸಮೀಪದ ಶ್ರೀಧರಗಡ್ಡೆ ಗ್ರಾಮದಲ್ಲಿ ಸುಮಾರು 25 ಅಡಿ ಎತ್ತರದ ಶ್ರೀ ಗಿಡ್ಡ ಆಂಜನೇಯ ಸ್ವಾಮಿ ಮೂರ್ತಿ ಲೋಕಾರ್ಪಣೆಗೊಂಡ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕುರುಗೋಡು ತಾಲೂಕಿನ ವ್ಯಾಪ್ತಿಯಲ್ಲಿಯೇ ಎರಡನೇ ಆತಿ ದೊಡ್ಡ ವೈಭವದ ಮೂರ್ತಿ ಇದಾಗಿದೆ.
ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಂಪ್ಲಿಯ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಭಾಗವಹಿಸಿ ಒಂದು ಲಕ್ಷ ದೇಣಿಗೆಯನ್ನು ನೀಡಿದರು.
ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಮಾತನಾಡಿದ ಅವರು, ಈ ಕಾರ್ತಿಕ ಮಾಸದಲ್ಲಿ ಬರುವ ವ್ರತಗಳನ್ನು ಆಚರಣೆ ಮಾಡುವುದರ ಮೂಲಕ ಪಾಪಗಳಿಂದ ಮುಕ್ತಾರಾಗಬಹುದು ಎನ್ನುವ ನಂಬಿಕೆ ನಮ್ಮ ಸಂಪ್ರದಾಯವಾಗಿದೆ ಎಂದರು.
ಗ್ರಾಮದ ಪ್ರತಿಯೊಬ್ಬರು ವಿಶೇಷವಾಗಿ ಮಹಿಳೆಯರು ಸಂಭ್ರಮದಿಂದ ದೇವಸ್ಥಾನದ ಸುತ್ತಮುತ್ತ ಸಾವಿರಾರು ದೀಪಗಳನ್ನು ಬೆಳಗಿಸುವುದರ ಮೂಲಕ ಶ್ರೀ ಗಿಡ್ಡ ಆಂಜನೇಯ ಸ್ವಾಮಿ ಮೂರ್ತಿ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ನಮ್ಮ ಗ್ರಾಮಗಳಲ್ಲಿ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಯಕ್ತಿಕವಾಗಿ ನನ್ನಿಂದ ಆಗುವ ಸಹಕಾರವನ್ನು ನಾನು ನೀಡಲು ಬದ್ಧನಾಗಿರುತ್ತೇನೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ದೇವಸ್ಥಾನದ ಭಕ್ತಾದಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಇತರರಿದ್ದರು.