ಮುಂಬಯಿ: ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಆಶ್ರಯದಲ್ಲಿ ಅ. 7 ರಂದು ಬೆಳಗ್ಗೆ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ಕಿಕ್ಕಿರಿದು ಸೇರಿದ ಭಕ್ತ ಜನಸಾಗರದ ಒಕ್ಕೊರಲಿನ ಗೋವಿಂದಾ…ಶ್ರೀನಿವಾಸ…ಗೋವಿಂದಾ, ವೆಂಕಟರಮಣ ಗೋವಿಂದಾ ಎಂಬ ವೇದಘೋಷದೊಂದಿಗೆ ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಅತ್ಯಂತ ವೈಭವದೊಂದಿಗೆ ನಡೆಯಿತು.
ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರ ಸಮಕ್ಷಮದಲ್ಲಿ ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ಗೌರವಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಸಂಚಾಲಕ ಕರುಣಾಕರ ಎಂ. ಶೆಟ್ಟಿ, ವಿಶ್ವಸ್ತ ಹಾಗೂ ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಹಾಗೂ ಪದಾಧಿಕಾರಿಗಳ ಸಂಯೋಜನೆಯೊಂದಿಗೆ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕಲ್ಯಾಣೋತ್ಸವವು ಶ್ರೀನಿವಾಸ ಪದ್ಮಾವತಿ ತಿರು ಕಲ್ಯಾಣ ಮಹೋತ್ಸವ ರಾಜರಾಜೇಶ್ವರಿ ನಗರ ಮೇಲ್ಕೋಟೆ ಬೆಂಗಳೂರಿನಿಂದ ಆಗಮಿಸಿದ ಆಗಮ ವೃಂದದ ಪ್ರಧಾನ ಅರ್ಚಕ ಮೋಹನ್‌ಬಾಬಾ ಭಟ್ಟಾಚಾರ್ಯ, ನರಸಿಂಹ ಐಯ್ಯಂಗಾರ್, ರಾಘವ ಭಟ್ಟಾಚಾರ್ಯ, ಅರುಣ್ ಭಟ್ಟಾಚಾರ್ಯ ಹಾಗೂ ಗೋಪಾಲ್‌ಕೃಷ್ಣ ಭಟ್ ಇವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು.
ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಎಸ್. ಶೆಟ್ಟಿ, ಡಾ| ಸಂಗೀತಾ ಎಸ್. ಶೆಟ್ಟಿ ದಂಪತಿ, ಆಧ್ಯಾತ್ಮಿಕ ವೇದಿಕೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ಸತ್ಯಾ ಎಸ್. ಶೆಟ್ಟಿ, ಸೀತಾರಾಮ ಶೆಟ್ಟಿ ದಂಪತಿ, ಉಪಾಧ್ಯಕ್ಷ ಅಪ್ಪಣ್ಣ ಎಂ. ಶೆಟ್ಟಿ, ಹರ್ಷಲತಾ ಎ. ಶೆಟ್ಟಿ ದಂಪತಿ, ನಿರ್ದೇಶಕ ಜಯರಾಮ ಎನ್. ಶೆಟ್ಟಿ, ಲತಾ ಜೆ. ಶೆಟ್ಟಿ ದಂಪತಿ, ಎನ್. ಸಿ. ಶೆಟ್ಟಿ, ಶಶಿಕಲಾ ಎನ್. ಶೆಟ್ಟಿ ದಂಪತಿ, ರಮೇಶ್ ಶೆಟ್ಟಿ, ಲತಾ ಆರ್. ಶೆಟ್ಟಿ ದಂಪತಿ ಬೆಳಗ್ಗೆ ಸುಪ್ರಭಾತ ಸೇವೆ, ಅಭಿಷೇಕ ಸೇವೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಕಲ್ಯಾಣೋತ್ಸವದ ದಿಬ್ಬಣವು ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರಕ್ಕೆ ಬಂದು ಅಲ್ಲಿ ಶ್ರೀ ಮಹಾವಿಷ್ಣು, ಶ್ರೀನಿವಾಸ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಆಶೀರ್ವಚನ ನೀಡಿ, ಮಾನವರಾಗಿ ಹುಟ್ಟಿದರಷ್ಟೇ ಸಾಲದು. ಜೀವನದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುವುದು ಮುಖ್ಯ. ಬದುಕಿನ ಕ್ಷಣಗಳ ನೆನಪು ಅಳಿದ ಮೇಲೆಯೂ ಉಳಿದರೆ ಆಗ ನಮ್ಮ ಜೀವನ ಪಾವನವಾಗುತ್ತದೆ. ನಾವು ಶ್ರೀನಿವಾಸನನ್ನು ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನದಲ್ಲಿ ತೆರಳುತ್ತೇವೆ ಎಂಬುದನ್ನು ಮರೆಯಬಾರದು. ಭಾರತ ಬಿಟ್ಟರೆ ಬೇರಾವ ದೇಶದಲ್ಲೂ ದೇವರ ಅವತಾರ ಕಾಣಸಿಗುವುದಿಲ್ಲ. ದೇವರ ಅವತಾರ ಆಗಿರುವ ನಮ್ಮ ದೇಶ ಜಂಬೂದ್ವೀಪವಾಗಿತ್ತೆಂಬುವುದನ್ನು ನಿದರ್ಶನ ಸಹಿತ ವಿವರಿಸಿದರು.
ಬಳಿಕ ಮಹಾಮಂಗಳಾರತಿ ನಡೆಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಸಮಿತಿಯ ಗೌರವ ಕಾರ್ಯಾಧ್ಯಕ್ಷೆ ಲತಾ ಪಿ. ಶೆಟ್ಟಿ ದಂಪತಿ, ಜ್ಞಾನಭಾರತಿಯ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಮತ್ತು ಡಾ| ಸಂಗೀತ ಶೆಟ್ಟಿ ದಂಪತಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಮೊದಲಾದವರು ದೇವರಿಗೆ ಮಹಾಮಂಗಳಾರತಿ ಬೆಳಗಿದರು. ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಬಂಟರ ಸಂಘ ಪ್ರಾದೇಶಿಕ ವಿಭಾಗಗಳ ಕಾರ್ಯಾಧ್ಯಕ್ಷರುಗಳು, ಸದಸ್ಯರು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.
ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು.