Advertisement

ಕುರ್ಲಾ ಪೂ.ಬಂಟರ ಭವನದಲ್ಲಿ ರಂಜಿಸಿದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ

02:50 PM Mar 30, 2017 | Team Udayavani |

ಮುಂಬಯಿ: ಮಹಾನಗರದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುವುದನ್ನು ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ನಗರದ ವಿವಿಧ ಸಂಘ-ಸಂಸ್ಥೆಗಳ ನೃತ್ಯ ಸ್ಪರ್ಧೆಯಲ್ಲಿ ಸಾಭೀತವಾಗಿದೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರ ಅಭಿನಂದನ ಸಮಿತಿಯು ಯುವ ಸಂಘಟಕ, ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಅಭಿನಂದನ ಸಮಾರಂಭದ ಸಂದರ್ಭದಲ್ಲಿ ನಡೆದ ನೃತ್ಯ ಸ್ಪರ್ಧೆಯು ಹಲವು ವಿಶೇಷತೆಗಳಿಂದ ಕೂಡಿತ್ತು.

Advertisement

ಮುಖ್ಯವಾಗಿ ನೃತ್ಯ ಸ್ಪರ್ಧೆಯಲ್ಲಿ ಗಂಡುಕಲೆ ಎಂದೇ ಬಿಂಬಿತವಾಗಿರುವ ಯಕ್ಷಗಾನದ ಹಾಡುಗಳಿಗೆ ಎಳೆಯ ಮಕ್ಕಳು ಗೆಜ್ಜೆಕಟ್ಟಿ ಕುಣಿರುವುದು ವಿಶೇಷತೆಯಾಗಿತ್ತು. ಜಾನಪದ, ಭರತನಾಟ್ಯ, ಫ್ಯೂಷನ್‌, ಕರ್ನಾಟಕದ ವಿವಿಧ ಕಲೆ-ಸಂಸ್ಕಾರಗಳನ್ನು ಬಿಂಬಿಸುವ ನೃತ್ಯಗಳು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮುಂಬಯಿ ಹಾಗೂ ಇನ್ನಿತರ ಉಪನಗರಗಳ ಗಣ್ಯಾತಿಗಣ್ಯರು ಈ ನೃತ್ಯಸ್ಪರ್ಧೆಗೆ ಸಾಕ್ಷಿಯಾಗಿದ್ದರು. ಪ್ರಸ್ತುತ ಯಕ್ಷಗಾನವು ಮುಂಬಯಿ ಮಹಾನಗರದ ಎಳೆಯ ಮಕ್ಕಳನ್ನು ಸೆಳೆಯುತ್ತಿದ್ದು ಅಭಿನಂದನೀಯ ಅಂಶವಾಗಿದೆ.

 ತೆಂಕು ಹಾಗೂ ಬಡಗುತಿಟ್ಟಿನ ವೇಷ-ಭೂಷಣಗಳನ್ನು ಧರಿಸಿ ಎಳೆಯ ಮಕ್ಕಳು ತುಳು ಚಲನಚಿತ್ರದ ಯಕ್ಷಗಾನ ಹಾಡು ಗಳಿಗೆ ಹೆಜ್ಜೆ ಹಾಕಿರುವುದು ಅಭಿಮಾನದ ಸಂಗತಿಯಾಗಿದೆ.

 ಇದು ಇಲ್ಲಿಯ ಯುವ ಪೀಳಿಗೆಯು ಕಲೆಯ ಬಗ್ಗೆ ಬೆಳೆಸಿಕೊಂಡಿರುವ ಗೌರವ, ಅಭಿಮಾನವನ್ನು ತೋರಿಸುತ್ತದೆ. ನೃತ್ಯ ಸ್ಪರ್ಧೆಯಲ್ಲಿ ನಗರದ ಘಟಾನುಘಟಿ ಸಂಘ- ಸಂಸ್ಥೆಗಳು, ನೃತ್ಯ ತರಭೇತಿ ತಂಡಗಳು ಭಾಗವಹಿಸಿದ್ದವು.

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪ್ರಸ್ತುತಪಡಿಸಿದ ನೃತ್ಯವು ಜಾನಪದ ಲೋಕವನ್ನು ಸೃಷ್ಟಿಸಿತು. ಸಮಿತಿಯ ಯುವಕ-ಯುವತಿಯವರು ಬಾಯಿ ಯಿಂದಲೇ ಹಾಡುಗಳನ್ನು ಹಾಡಿ, ಸಹ ಸಂಗಡಿಗರ ಕಂಸಾಳೆ ಹಾಡಿಗೆ ನೃತ್ಯಗೈಯುವುದರ ಮೂಲಕ ಗಮನ ಸೆಳೆದರು. ಇದೊಂದು ಅಪೂರ್ವ ಪ್ರದರ್ಶನವಾಗಿತ್ತು. ಅಲ್ಲದೆ ಮೀರಾರೋಡ್‌ನ‌ ಅಮಿತಾ ಅವರ ನೃತ್ಯ ತಂಡದ ಮಕ್ಕಳ ಹಚ್ಚೇವೂ ಕನ್ನಡ ದೀಪ ಹಾಡು ಮಕ್ಕಳಲ್ಲಿ ಭಾಷಾಭಿಮಾನವನ್ನು ಮೂಡಿಸುತ್ತಿತ್ತು. ಆದರೆ ಈ ನೃತ್ಯವು ತಾಂತ್ರಿಕ ಕಾರಣಗಳಿಂದ ಅರ್ಧಕ್ಕೆ ನಿಂತಿರುವುದು ವಿಷಾದ ನೀಯ. ನೃತ್ಯ ಸ್ಪರ್ಧೆಗಳಿಗೆ ಬರುವಾಗ ತಂಡಗಳು ತಮ್ಮ ಹಾಡಿನ ಕ್ಯಾಸೆಟ್‌ಗಳನ್ನು ಸರಿಯಾಗಿದೆಯೆ ಎಂಬುದನ್ನು ಪರೀಕ್ಷಿಸಿ ಅನಂತರ ಸಂಘಟಕರ ಕೈಗೆ ನೀಡುವುದು ಉತ್ತಮ ಎಂಬುವುದು ಇದರಿಂದ ಮನದಟ್ಟಾಗುತ್ತದೆ.

Advertisement

ನೃತ್ಯ ಸ್ಪರ್ಧೆಯಲ್ಲಿ ನಾಡಿನ ಸಂಸ್ಕೃತಿ, ಸಂಸ್ಕಾರಗಳು, ಆಚಾರ-ವಿಚಾರಗಳು ಮೇಳೈಸಿ ರುವುದು ಸಂತೋಷದ ಸಂಗತಿ ಯಾಗಿದೆ. ಸ್ಪರ್ಧೆಯಲ್ಲಿ ಭಾಗವ
ಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ ಸಂಘಟಕರು ಹುರಿದುಂ
ಬಿಸಿರುವುದು ಇತರರಿಗೆ ಮಾದರಿ ಯಾಗಿದೆ. ಇದು ಸ್ಪರ್ಧಿಗಳ ಮನೋಬಲವನ್ನು ವೃದ್ಧಿಸುತ್ತದೆ ಎಂಬುವುದನ್ನು ನಾವು ಅರಿಯಬೇಕು.

ಸ್ಪರ್ಧೆಯಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಅಮಿತಾ ಕಲಾ ತಂಡ ಮೀರಾರೋಡ್‌, ತುಳುಕೂಟ ಐರೋಲಿ, ವೀರಕೇಸರಿ ಕಲಾತಂಡ, ಅಸಲ್ಫಾ ಗೀತಾಂಬಿಕಾ ಮಂದಿರ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ,  ಪೊವಾಯಿ ಕನ್ನಡ ಸಂಘ, ದೇವಾಡಿಗ ಸಂಘ ಮುಂಬಯಿ ಸೇರಿದಂತೆ ಸುಮಾರು 16 ತಂಡಗಳು ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ನೃತ್ಯ ಸ್ಪರ್ಧೆಗಳು ನಿರಂತರವಾಗಿ ನಡೆದಾಗ ಇಲ್ಲಿಯ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಸ್ಪರ್ಧೆಯನ್ನು ಆಯೋಜಿಸಿದ ಸಂಘಟಕರು ಅಭಿನಂದನಾರ್ಹರು. 
ರೋನ್ಸ್‌ ಬಂಟ್ವಾಳ್‌
 

Advertisement

Udayavani is now on Telegram. Click here to join our channel and stay updated with the latest news.

Next