Advertisement

ಕುರ್ಲಾ ಬಾಲಾಜಿ ಮಂದಿರ: ಕಾಶೀ ಮಠಾಧೀಶರಿಂದ ಆಶೀರ್ವಚನ

04:25 PM Jul 05, 2018 | Team Udayavani |

ಮುಂಬಯಿ: ದೇವರ ಅನುಗ್ರಹ ಜೀವನದಲ್ಲಿ ಪ್ರಧಾನವಾದುದು. ಭಕ್ತರ ಶ್ರೇಯೋಭಿವೃದ್ಧಿಗೆ ದೇವರ, ಗುರುಹಿರಿಯ ಅನುಗ್ರಹ ಆವಶ್ಯಕವಾಗಿದೆ. ಭಕ್ತಿಯಿಂದ ದೇವರಿಗೆ ಶರಣಾದರೆ ದೇವರು ಅನುಗ್ರಹಿಸಿ ಕಾಪಾಡುವುದು ಖಂಡಿತ. ನಿರ್ಮಲವಾದ ಪ್ರೀತಿ, ವಾತ್ಸಲ್ಯದ ಭಕ್ತಿಯ ಮೂಲಕ ದೇವರಿಂದ ಮನುಷ್ಯನು ತನ್ನ ಜೀವನದಲ್ಲಿ ಅನುಗ್ರಹವನ್ನು ಪ್ರಾಪ್ತಿಸಿಕೊಳ್ಳಬಹುದು. ಸುಖ, ಸಮಾಧಾನ, ಉತ್ತಮ ಆರೋಗ್ಯ ಸಂಪಾದನೆ, ಲಕ್ಷ್ಮೀ ಪ್ರಾಪ್ತಿ ಅಥವಾ ಜೀವನದ ಅಮೂಲ್ಯ ವಿವಿಧ ಇಷ್ಟಾಭಿಸಿ ದ್ಧಿಗಳನ್ನು ದೊರಕಿಸಿಕೊಳ್ಳಲು ದೇವರಿಗೆ ಶರಣು ಹೋಗುವುದು ಉಚಿತವಾಗಿದೆ ಎಂದು ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ನುಡಿದರು.

Advertisement

ಕುರ್ಲಾ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿದ ಶ್ರೀಗಳು ಸಮಾಜ ಬಾಂಧವರಿಗೆ ಆಶೀರ್ವಚನ ನೀಡಿ, ಕುಬೇರನ ಕಥಾರೂಪಕವನ್ನು ಆಧಾರವಾಗಿಟ್ಟುಕೊಂಡು ಶ್ರೀ ಗಣಪತಿ ದೇವರು, ಶ್ರೀ ವೆಂಕಟರಮಣ, ಪದ್ಮಾವತಿ ದೇವಿಯ ಸ್ತುತಿಗೈದರು. ಜಿಎಸ್‌ಬಿ ಸಭಾ ಕುರ್ಲಾ, ಚೆಂಬೂರು, ಘಾಟ್‌ಕೋಪರ್‌, ಕುರ್ಲಾ ಬಾಲಾಜಿ ಮಂದಿರದಲ್ಲಿ 2017ನೇ ಸೆಪ್ಟೆಂಬರ್‌ನಿಂದ ಸೆಪ್ಟೆಂಬರ್‌ 2018ರ ವರೆಗೆ  ಸುವರ್ಣ ಗಣೇಶೋತ್ಸವ ವರ್ಷವನ್ನಾಗಿ ಆಚರಿಸಿ ಮಹಾಗಣಪತಿಯ ಅನುಗ್ರಹವನ್ನು ಪಡೆದಾಗ ಮಾತ್ರ ಸಮಾಜ ಬಾಂಧವರು ಜೀವನದಲ್ಲಿ ಶ್ರೇಯೋಭಿವೃದ್ಧಿ ಪಡೆಯಲು ಸಾಧ್ಯವಿದೆ ಎಂದರು.

ವಾಲ್ಕೇಶ್ವರ ಕಾಶೀಮಠದಿಂದ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಸ್ವಾಮೀಜಿಯವರು ಬಾಲಾಜಿ ದೇವರ ದಿವ್ಯ ದರ್ಶನಗೈದರು. ಪ್ರಧಾನ ಅರ್ಚಕ ಗಜಾನನ ಶಾನ್‌ಭಾಗ್‌ ಮಹಾ ಮಂಗಳಾರತಿಗೈದರು. ವೇದಮೂರ್ತಿ ತ್ರಿವಿಕ್ರಮ ಆಚಾರ್ಯರಿಂದ ವೇದಘೋಷದ ಆನಂತರ ಪರಮಪೂಜ್ಯರ ಪಾದಪೂಜೆಯ ಬಳಿಕ ಜಿಎಸ್‌ಬಿ ಸಭಾ-ಕೆಸಿಜಿ ಅಧ್ಯಕ್ಷ ಗಣೇಶ್‌ ಬಿ. ಕಾಮತ್‌ ಅವರು ಸ್ವಾಗತಿಸಿ ಮಾತನಾಡಿ, ಹರಿದ್ವಾರದಲ್ಲಿ ವೃಂದಾವನಾಸ್ಥ ಪೂಜ್ಯ ಗುರುಗಳಾದ ಶ್ರೀಮದ್‌ ಸುಧೀಂದ್ರ ತೀರ್ಥ ಶ್ರೀಪಾದಂಗಳವರನ್ನು ಸ್ಮರಿಸಿ, ಅಂತ:ಕರಣಪೂರ್ಣಕವಾಗಿ ಬಾಲಾಜಿ ಮಂದಿರದ ಏಳ್ಗೆಗೆ ಗುರುಗಳ ಅಪಾರ ಮಾರ್ಗದರ್ಶನ ಹಾಗೂ ಅನುಗ್ರಹದ ಕುರಿತು ಕೊಂಡಾಡಿದರು. ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ಹಾರಾರ್ಪಣೆಗೈಯಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ವಿವೇಕ್‌ ಭಂಡಾರಿ ಅವರು ಸಂಸ್ಥೆಯ ಧ್ಯೇಯೋದ್ಧೇಶಗಳು, ಸಂಸ್ಥೆಯು ನಡೆದು ಬಂದ ಬಗೆಯನ್ನು ವಿವರಿಸಿದರು. ಗೌರವ ಕಾರ್ಯದರ್ಶಿ ಗಣೇಶ್‌ ಕಾಮತ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಕುರ್ಲಾ ಬಾಲಾಜಿ ದೇವರ ಸಾನಿಧ್ಯದಲ್ಲಿ ಶ್ರೀದೇವಿ-ಭೂದೇವಿ ಮೂರ್ತಿಯ ಚಿನ್ನದ ಕವಚವನ್ನು ಕಾಶೀ ಮಠಾಧೀಪತಿಗಳು ಸಮರ್ಪಿಸಿದರು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next