Advertisement

ಕುರಾರ್‌ ಶ್ರೀ ಶನೀಶ್ವರ ಪೂಜಾ ಸಮಿತಿಯ 43ನೇ ವಾರ್ಷಿಕ ಮಹಾಪೂಜೆ

12:19 PM Feb 14, 2017 | Team Udayavani |

ಮುಂಬಯಿ: ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಜೀವನ ಪಾವನಗೊಳ್ಳುವುದರಲ್ಲಿ ಸಂಶಯವಿಲ್ಲ. ದೇವಸ್ಥಾನಗಳು ಎಲ್ಲರನ್ನು ಒಂದುಗೂಡಿಸುವ ಶಕ್ತಿ ಕೇಂದ್ರವಿದ್ದಂತೆ. ನಾವೆಷ್ಟು ಬೆಳೆದರೂ ಧಾರ್ಮಿಕ ಮನೋಭಾವನೆಯನ್ನು ನಿರಂತರವಾಗಿ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಮಕ್ಕಳಿಗೆ ಎಳವೆಯಿಂದಲೇ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಿದಾಗ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯಗಳು ಉಳಿದು ಬೆಳೆಯಲು ಸಾಧ್ಯವಿದೆ ಎಂದು ಮಲಾಡ್‌ ಶ್ರೀ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಅವರು ಹೇಳಿದರು.

Advertisement

ಫೆ. 11ರಂದು  ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನ ಶ್ರೀ ಶನೀಶ್ವರ ದೇವಸ್ಥಾನದ ಶ್ರೀ ಶನೀಶ್ವರ ಪೂಜಾ ಸಮಿತಿಯ 43ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ 43 ವರ್ಷಗಳಿಂದ ಧಾರ್ಮಿಕಕಾರ್ಯಕ್ರಮಗಳೊಂದಿಗೆ ತುಳು-ಕನ್ನಡಿ ಗರೊಂದಿಗೆ ಒಂದುಗೂಡಿಸಿ, ಧಾರ್ಮಿಕ ಪ್ರಜ್ಞೆಯನ್ನು ದೇವಸ್ಥಾನವು ಮೂಡಿಸುತ್ತಿದೆ. ಶ್ರೀಕ್ಷೇತ್ರದಲ್ಲಿ ನಾವೆಲ್ಲರು ಒಂದೇ ತಾಯಿಯ ಮಕ್ಕಳಂತಿದ್ದು, ಧಾರ್ಮಿಕತೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದೇವೆ. ಶ್ರೀ ಕ್ಷೇತ್ರದ ಹಿರಿಯ ಸದಸ್ಯ ರನ್ನು ಗೌರವಿಸಲು ಸಂತೋಷವಾಗುತ್ತಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿ, ದೇವರ ಸೇವೆ ಮತ್ತು ಸಮಾಜ ಸೇವೆಯು ನಮ್ಮ ಮನಸ್ಸಿಗೆ ಸದಾ ಶಾಂತಿಯನ್ನು ನೀಡುತ್ತದೆ. ಇದನ್ನು ಮನಗಂಡು ನಮ್ಮ ಹಿರಿಯರು ಮುಂಬಯಿಯಲ್ಲಿ ಅತೀ ಹೆಚ್ಚು ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇದು ನಿಜವಾಗಿಯೂ ಅಭಿನಂದನೀಯ ಎಂದು ಹೇಳಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ ನಡಿಬೆಟ್ಟು ಅವರು ಮಾತನಾಡಿ, ದೇವರ ಕಾರ್ಯ ಮಾಡುವುದರೊಂದಿಗೆ ಸಮಾಜಪರ, ಶೈಕ್ಷಣಿಕ ಚಟುವಟಿಕೆಗಳಲ್ಲೂ ನಿರಂತರವಾಗಿ ನಡೆಸುವುದರಿಂದ ಆ ಕ್ಷೇತ್ರವು ಬೆಳೆಯುತ್ತದೆ. ಜನಪರ ಕಾರ್ಯದಿಂದ ದೇವರ ಆಶೀರ್ವಾದ ಲಭಿಸುತ್ತದೆ ಎಂದು ನುಡಿದರು.

Advertisement

ಆಶೀರ್ವಚನ ನೀಡಿದ ಶ್ರೀ ಉಮಾ ಮಹೇಶ್ವರಿ ಮಂದಿರದ ಜೆರಿಮರಿ ಇದರ ಪ್ರಧಾನ ಅರ್ಚಕ ಶ್ರೀನಿವಾಸ ಎನ್‌. ಉಡುಪ ಅವರು, ನಮ್ಮನ್ನು ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯನ್ನಾಗಿಸುವಲ್ಲಿ ಭಕ್ತಿ, ಶ್ರದ್ಧಾ ಕೇಂದ್ರಗಳ ಪಾತ್ರ ಮಹತ್ತವಾಗಿರುತ್ತದೆ. ಒಂದು ಪ್ರದೇಶದಲ್ಲಿ ಒಂದು ಮಂದಿರವಿದ್ದರೆ, ಆ ಕ್ಷೇತ್ರ ಹಾಗೂ ಪರಿಸರದ ಜನರನ್ನು ಶಾಂತಿ, ಸೌಹಾರ್ದತೆಯಿಂದ ಬಾಳುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀಧರ ಆರ್‌. ಶೆಟ್ಟಿ, ಸಮಿತಿಯ ಹಿರಿಯ ಸದಸ್ಯರುಗಳಾದ ಸುಭಾಷ್‌ ಅಮೀನ್‌ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕ ಗಿರೀಶ್‌ ಶೆಟ್ಟಿ ತೆಳ್ಳಾರು ಅವರು ಮಾತನಾಡಿ, ಸಮಾಜ ಸೇವೆ ಮಾಡುವುದರಿಂದ ದೇವರ ಅನುಗ್ರಹ ಸದಾಯಿರುತ್ತದೆ. ಸಮಾಜ ಸೇವೆ ಮಾಡುವ ಸೌಭಾಗ್ಯವನ್ನು ದೇವರು ನಮಗೆ ಕರುಣಿಸಲಿ ಎಂದು ಆಶಿಸಿದರು. ಪೂಜಾ ಸಮಿತಿಯ ಅಧ್ಯಕ್ಷ ಸಂತೋಷ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮಂದಿರದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಪತ್ರಕರ್ತ ದಿನೇಶ್‌ ಕುಲಾಲ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಲಹೆಗಾರ ಬಿ. ಎನ್‌. ಚಂದನ್‌  ವಂದಿಸಿದರು.

ಉಪಾಧ್ಯಕ್ಷರಾದ ನಾರಾಯಣ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಪೇತ್ರಿ, ಗೌರವ ಪ್ರಧಾನ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಕೋಶಾಧಿಕಾರಿ ಹರೀಶ್‌ ಸಾಲ್ಯಾನ್‌, ಜತೆ ಕಾರ್ಯದರ್ಶಿಗಳಾದ ನಿತ್ಯಾನಂದ ಕೋಟ್ಯಾನ್‌ ಮತ್ತು ಸಂತೋಷ್‌ ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ದಿನೇಶ್‌ ಕುಂಬ್ಳೆ ಮತ್ತು ಶಿವಾನಂದ ಎನ್‌. ದೇವಾಡಿಗ, ಸಲಹೆಗಾರರಾದ ಶ್ರೀಧರ ಆರ್‌. ಶೆಟ್ಟಿ, ಬಿ. ಎನ್‌. ಚಂದನ್‌, ಮಹಿಳಾ ಮಂಡಳಿಯ ಮುಖ್ಯಸ್ಥೆ ಶೀತಲ್‌ ಎನ್‌. ಕೋಟ್ಯಾನ್‌, ಆಡಳಿತ ಸಮಿತಿಯ ಸದಸ್ಯರಾದ ರಾಮಕೃಷ್ಣ ಶೆಟ್ಟಿಯಾನ್‌, ಹರೀಶ್‌ ಕುಂದರ್‌, ಪ್ರಭಾಕರ ಶೆಟ್ಟಿ, ಸದಾನಂದ ಕೆ. ನಾಯಕ್‌, ಸಂತೋಷ್‌ ರಾವ್‌, ಶಾಲಿನಿ ಆರ್‌. ಶೆಟ್ಟಿ, ಸಹ ಸದಸ್ಯರಾದ ಮಧುಸೂದನ್‌ ಪಾಲನ್‌, ಸ್ನೇಹಲತಾ ಎಸ್‌. ನಾಯಕ್‌, ಯಶೋದಾ ಡಿ. ಕುಂಬ್ಳೆ, ಗಿರಿಜಾ ಎಸ್‌. ಮರಕಲ, ರಾಜಶ್ರೀ ಎಸ್‌. ಪೂಜಾರಿ, ಜಯಂತಿ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.  

ಸ್ಥಳೀಯ ಮಕ್ಕಳಿಂದ  ವಿವಿಧ ನೃತ್ಯಾವಳಿ,  ರಂಗಮಿಲನ ತಂಡದಿಂದ ಮನೋಹರ ಶೆಟ್ಟಿ ನಂದಳಿಕೆಯವರ ನಿರ್ದೇಶನದಲ್ಲಿ ಸಾಮಾಜಿಕ ಹಾಸ್ಯ ನಾಟಕ “ಆಯಿನ ಆಂಡ ಬುಡುದು ಬುಡ್ಲೆ’ ಪ್ರದರ್ಶನಗೊಂಡಿತು. 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next