Advertisement

ಕುಪ್ಪೆಟ್ಟಿ –ಪದ್ಮುಂಜ -ಬಂದಾರು ರಸ್ತೆ : ವಾಹನ ಓಡಿಸಲು ಹಿಂದೇಟು

02:10 AM Aug 04, 2017 | Karthik A |

5 ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿದ್ದ ರಸ್ತೆಯಲ್ಲೀಗ ಭಾರೀ ಹೊಂಡ-ಗುಂಡಿ

Advertisement

ವಿಶೇಷ ವರದಿ
ಬೆಳ್ತಂಗಡಿ: ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿ ಸೇತುವೆಯಿಂದ ಪ್ರವೇಶಿಸುವ ಕುಪ್ಪೆಟ್ಟಿ – ಬಂದಾರು ಜಿಲ್ಲಾ ಪಂಚಾಯತ್‌ ರಸ್ತೆಯು ಏಳೆಂಟು ವರ್ಷಗಳ ಹಿಂದೆಯಷ್ಟೇ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ಅಭಿವೃದ್ಧಿಗೊಂಡಿದ್ದು ಇದೀಗ ಹೊಂಡ, ಗುಂಡಿಗಳೇ ರಸ್ತೆಯನ್ನು ನುಂಗಿ ಹಾಕಿವೆ. ಪರಿಣಾಮವಾಗಿ ಈ ಪ್ರದೇಶದ  ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳನ್ನೊಳಗೊಂಡಂತೆ  ಸಾವಿರಾರು ನಾಗರಿಕರು ತೀವ್ರ ತೊಂದರೆ ಪಡುವಂತಾಗಿದೆ.

ಈ ಬಾರಿಯ ಮಳೆಗಾಲದಲ್ಲಂತೂ ಕುಪ್ಪೆಟ್ಟಿ – ಬಂದಾರು ರಸ್ತೆಯ ಹೆಸರು ಹೇಳಿದಾಕ್ಷಣ ಯಾವುದೇ ವಾಹನಗಳ ಚಾಲಕರು ಮತ್ತು ಮಾಲಕರು ಇಲ್ಲಿಗೆ ಬರಲು ಹಿಂಜರಿಯುವಷ್ಟು ಹದಗೆಟ್ಟು ಹೋಗಿದೆ. ಗ್ರಾಮಸಡಕ್‌ ಯೋಜನೆಯ ಕಾಮಗಾರಿ ಮುಗಿಸಿದ ಗುತ್ತಿಗೆದಾರರು ಐದು ವರ್ಷಗಳ ನಿರ್ವಹಣೆಯನ್ನು ಪೂರ್ಣಗೊಳಿಸಿರುವುದರಿಂದ ಮುಂದಿನ ಅಭಿವೃದ್ಧಿ ಅಥವಾ ದುರಸ್ತಿಗೆ ಪ್ರತ್ಯೇಕ ಅನುದಾನವನ್ನು ಅವಲಂಬಿಸಬೇಕಾಗಿದೆ. 

6.5 ಕೋ.ರೂ. ವೆಚ್ಚವಾಗಿತ್ತು 
ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ 6.5 ಕೋ.ರೂ. ವೆಚ್ಚದಲ್ಲಿ 18.27 ಕಿ.ಮೀ. ಕುಪ್ಪೆಟ್ಟಿ -ಪದ್ಮುಂಜ -ಬಂದಾರು – ಪೆರ್ಲ ಜಿ.ಪಂ.  ರಸ್ತೆಯು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಗೊಂಡಿತ್ತು. ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಗೆ ಕುಪ್ಪೆಟ್ಟಿ ಸೇತುವೆ ಮೂಲಕ ಸೇರಿಕೊಳ್ಳುವ ಕುಪ್ಪೆಟ್ಟಿ -ಬಂದಾರು ರಸ್ತೆಯು ಕಣಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉರುವಾಲು ಮತ್ತು ಕಣಿಯೂರು ಗ್ರಾಮದ ಮೂಲಕ ಬಂದಾರು – ಪಾಣೆಕಲ್ಲು ಎಂಬಲ್ಲಿ ಕೊನೆಗೊಳ್ಳುತ್ತದೆ. ಇದೇ ರಸ್ತೆಯು ಕೊಪ್ಪದಡ್ಕ ಎಂಬಲ್ಲಿ ತಿರುವು ಪಡೆದುಕೊಂಡು ಬೈಪಾಡಿ – ಬೆಳಾಲು ಮೂಲಕ ಧರ್ಮಸ್ಥಳದವರೆಗೂ ತಲುಪುತ್ತದೆ. ಇನ್ನೊಂದೆಡೆ ಕಲ್ಲಮಾಡ ಎಂಬಲ್ಲಿಂದ ಆರಂಭಗೊಂಡು ಮೊಗ್ರು ಸೇರುತ್ತದೆ.

ನಿರೀಕ್ಷೆಯಲ್ಲಿ ಜನ ಕುಪ್ಪೆಟ್ಟೆ, ಬನಾರಿ, ಉರುವಾಲು – ಪದವು, ಗಾಡಕೋಡಿ, ಕೆರೆಕೋಡಿ, ಬಂದಾರು ಪ್ರದೇಶಗಳಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವೆನಿಸಿದ್ದು ಮಳೆಗಾಲ ಮುಗಿಯುವಷ್ಟರಲ್ಲಿ ಹದಗೆಟ್ಟು ಹೋಗಿರುವ ರಸ್ತೆಯ ಡಾಮರು ಅವಶೇಷವಷ್ಟೇ ಉಳಿಯಬಹುದೇನೋ ಎಂಬ ಆತಂಕ ಸ್ಥಳೀಯ ನಾಗರಿಕರನ್ನು ಕಾಡುತ್ತಿದ್ದು ಕನಿಷ್ಠ ತಾತ್ಕಾಲಿಕ ದುರಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಈ ಪ್ರದೇಶದ ನಾಗರಿಕರ ನಿರೀಕ್ಷೆಯನ್ನು ಪೂರೈಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ. 

Advertisement

‘ವ್ಯವಹಾರಗಳಿಗೆಲ್ಲ ಪಬೈಜವೇ ಕೇಂದ್ರ’
ಈ ರಸ್ತೆಯಲ್ಲಿ ಕುಪ್ಪೆಟ್ಟಿ – ಬಂದಾರು ಮಧ್ಯೆ ಪಬೈಜದಲ್ಲಿ ಸರಕಾರಿ ಪ್ರೌಢಶಾಲೆ/ ಜೂನಿಯರ್‌ ಕಾಲೇಜು, ಗ್ರಾಮಪಂಚಾಯತ್‌ ಕಾರ್ಯಾಲಯ, ಕೆನರಾ ಬ್ಯಾಂಕ್‌ ಸಹಕಾರಿ ಬ್ಯಾಂಕ್‌, ನ್ಯಾಯಬೆಲೆ ಅಂಗಡಿ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿ ನಿಲಯ, ಸಮುದಾಯ ಆರೋಗ್ಯ ಕೇಂದ್ರ, ಹಾಲು ಉತ್ಪಾದಕರ ಸಂಘ ಮತ್ತಿತರ ಸಾರ್ವಜನಿಕ ಸಂಘ -ಸಂಸ್ಥೆಗಳಿದ್ದು ಸುತ್ತಮುತ್ತಲಿನ ಸಾವಿರಾರು ನಾಗರಿಕರು ದಿನನಿತ್ಯವೂ ಇದೇ ರಸ್ತೆಯಲ್ಲಿ ವಿವಿಧ ವಾಹನಗಳಲ್ಲಿ ಪ್ರಯಾಣಿಸುತ್ತಾರೆ.

‘ಮೇಲ್ದರ್ಜೆಗೇರಿಸಲು ಪ್ರಸ್ತಾವನೆ’
ಕುಪ್ಪೆಟ್ಟಿ – ಬಂದಾರು ಜಿ.ಪಂ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸಾಕಾಗುವಷ್ಟು ಗರಿಷ್ಠ ಮೊತ್ತ ವಿನಿಯೋಗಿಸಲು ಜಿ.ಪಂ. ಬಳಿ ಅನುದಾನವಿಲ್ಲ. ಈ ರಸ್ತೆಯನ್ನು ಲೋಕೋಪಯೋಗಿ ಇಲಾಖಾ ರಸ್ತೆ ಯನ್ನಾಗಿ ಮೇಲ್ದರ್ಜೆಗೇರಿಸಲು ಶಾಸಕ ಕೆ.ವಸಂತ ಬಂಗೇರ ಅವರ ಮೂಲಕ ಸಂಬಂಧಪಟ್ಟ ಸಚಿವರು ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  
– ಕೆ. ಶಾಹುಲ್‌ ಹಮೀದ್‌, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next