ಎಡಪದವು: ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಪೊರೈಕೆ ಆಗಿಲ್ಲ ಎಂದು ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ನಡುಪಳ್ಳ, ಮಾಣಿಪಳ್ಳ ಮತ್ತು ಕುಪೆಪದವು ಪೇಟೆಯ ಸಾರ್ವಜನಿಕರು ಪಂಚಾಯತ್‌ಗೆ ಆಗಮಿಸಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಸಾರ್ವಜನಿಕರು ನೀರಿನ ವಿಚಾರದಲ್ಲಿ ಮಾತಾಡಲು ಪಂಚಾಯತ್‌ಗೆ ಬಂದಾಗ ಪಿಡಿಒ, ಅಧ್ಯಕ್ಷರು ಇಲ್ಲದಿರುವುದನ್ನು ಗಮನಿಸಿ ಕೋಪಗೊಂಡು, ದಿಢೀರ್ ಪ್ರತಿಭಟಿಸಿದರು.
ಮಧ್ಯಾಹ್ನ 1 ಗಂಟೆಗೆ ಪಂಚಾಯತ್‌ಗೆ ಆಗಮಿಸಿದ ಪಿಡಿಓ ಮತ್ತು ಅಧ್ಯಕ್ಷರು ನೀರು ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿ ನೀರು ಸರಬರಾಜಿನ ಭರವಸೆ ನೀಡಿದರು.
ಕುಪ್ಪೆಪದವು ಪಂಚಾಯತ್ ಪಂಪ್ ಆಪರೇಟರ್ ನಾಲ್ಕು ದಿನಗಳ ಹಿಂದೆ ಪಂಪ್ ಆಪರೇಟ್ ಮಾಡಲು ಸಾಧ್ಯವಿಲ್ಲ ಎಂದು ಪಂಪ್ ಹೌಸ್‌ನ ಬೀಗದ ಕೀಗಳನ್ನು ಪಂಚಾಯತ್‌ಗೆ ಒಪ್ಪಿಸಿ ತೆರಳಿದ್ದರು. ಆನಂತರವೂ ಇದೇ ಪಂಪ್ ಆಪರೇಟರ್ ಕೆಲವೊಂದು ಭಾಗಗಳಿಗೆ ನೀರು ಪೊರೈಕೆ ಮಾಡಿರುವುದರ ಬಗ್ಗೆ ಪ್ರಶ್ನಿಸಿ, ಪಂಪ್ ಆಪರೇಟರ್ ಬದಲಾವಣೆಗೆ ಒತ್ತಾಯಿಸಿ ಲಿಖೀತ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ತಾಪಂ ಇಒ ರಘು ಸ್ಥಳಕ್ಕೆ ಆಗಮಿಸಿದಾಗ ಪಿಡಿಒ ಬದಲಾವಣೆಗೆ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರು ಒತ್ತಾಯಿಸಿದರು. ಸ್ಥಳದಲ್ಲಿ ಗದ್ದಲ ಉಂಟಾದ ಪರಿಣಾಮ ತಾಪಂ ಇಒ ರಘು ಅವರು ಬೇಸರಗೊಂಡು ವಾಪಾಸ್ಸಾದರು.
ಸೂಕ್ತ ಕ್ರಮ
ಅನಂತರ ಪಿಡಿಓ ಸವಿತಾ ಮಂದೋಳಿಕರ್ ಅವರು ಮಾತನಾಡಿ, ಮೇ 31 ರಂದು ನೀರು ಬಳಕೆದಾರರ ಸಭೆಯನ್ನು ಕರೆದು ಹೊಸತಾಗಿ ಪಂಪ್ ಆಪರೇಟರ್‌ನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಸದ್ಯ ಇರುವ ಪಂಪ್ ಆಪರೇಟರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.