ಕನ್ನಡಕ್ಕೆ ಪರಭಾಷೆಯ ಕಲಾವಿದರ ಆಗಮನ ಹೊಸದೇನಲ್ಲ. ಪ್ರತಿವರ್ಷ ನೂರಾರು ಪರಭಾಷಾ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಲೇ ಇರುತ್ತಾರೆ. ಆದರೆ ಕಲಾವಿದರ ಸಂಖ್ಯೆಗೆ ಹೋಲಿಸಿದರೆ, ಕನ್ನಡಕ್ಕೆ ಪರಭಾಷೆಯಿಂದ ಬರುವ ನಿರ್ದೇಶಕರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಈಗ “ಕುಂತಿಪುತ್ರ’ ಚಿತ್ರದ ಮೂಲಕ ತೆಲುಗು ನಿರ್ದೇಶಕ ರಾಜು ಬೋನಗಾನಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
1980ರ ದಶಕದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾದ “ಕುಂತಿಪುತ್ರ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದ್ದು, ಬಹುತೇಕ ಹೊಸ ಪ್ರತಿಭೆಗಳೇ ಸೇರಿ “ಕುಂತಿಪುತ್ರ’ ಚಿತ್ರ ನಿರ್ಮಿಸಿದ್ದಾರೆ. ಈಗಾಗಲೇ “ಕುಂತಿಪುತ್ರ’ದ ಹಾಡುಗಳು, ಟೀಸರ್ ಒಂದಷ್ಟು ಸೌಂಡ್ ಮಾಡುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇನ್ನು ಚಿತ್ರಕಥೆ ಬರಹಗಾರನಾಗಿ, ವಿಎಫ್ಎಕ್ಸ್, ಆ್ಯಕ್ಷನ್ಸ್ ಸ್ಪೆಷಲ್ ಎಫೆಕ್ಟ್ ತಂತ್ರಜ್ಞನಾಗಿ ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ “ಕುಂತಿಪುತ್ರ’ ಚಿತ್ರದ ನಿರ್ದೇಶಕ ರಾಜು ಬೋನಗಾನಿ ಮಂಡ್ಯ ಮೂಲದವರು. ಅವರ ತಾತನ ಕಾಲಿದಲ್ಲಿಯೇ ಇಡೀ ಕುಟುಂಬ ಮಂಡ್ಯದಿಂದ ಆಂಧ್ರದ ಕಡೆಗೆ ವಲಸೆ ಹೋಗಿದ್ದರಿಂದ, ರಾಜು ಬೋನಗಾನಿ ಅವರ ಬಾಲ್ಯ, ಶಿಕ್ಷಣ ಎಲ್ಲವೂ ಆಂಧ್ರದಲ್ಲಿಯೇ ನಡೆಯಿತು. ಬಳಿಕ ಅಲ್ಲೇ ಟಾಲಿವುಡ್ ನಂಟು ಬೆಳೆದಿದ್ದರಿಂದ, ತೆಲುಗು ಚಿತ್ರರಂಗದ ಮೂಲಕವೇ ರಾಜು ಬೋನಗಾನಿ ಸಿನಿಮಾ ಜಗತ್ತಿಗೆ ಅಡಿಯಿಟ್ಟರು.
ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ : ವಿನಯಕುಮಾರ್ ಸೊರಕೆ
ತೆಲುಗು ಮತ್ತು ಹಿಂದಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್ ಸ್ಪೆಷಲ್ ಎಫೆಕ್ಟ್, ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಿಗೆ ವಿಎಫ್ಎಕ್ಸ್ ತಂತ್ರಜ್ಞನಾಗಿ ಕೆಲಸ ಮಾಡಿರುವ ರಾಜು ಬೋನಗಾನಿ ಈಗ ನಿರ್ದೇಶಕನಾಗಿ “ಕುಂತಿಪುತ್ರ’ನ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.
“ಕುಂತಿಪುತ್ರ’ ಚಿತ್ರದ ಬಗ್ಗೆ ಮಾತನಾಡುವ ರಾಜು ಬೋನಗಾನಿ, “ಇದೊಂದು ಸಂಪೂರ್ಣ ಗ್ರಾಮೀಣ ಕಥಾಹಂದರದ ಸಿನಿಮಾ. ಕನ್ನಡ ಮತ್ತು ತೆಲುಗು ಪ್ರೇಕ್ಷರಿಗೆ ಇಷ್ಟವಾಗುವಂಥ ಕಾಮನ್ ಸಬ್ಜೆಕ್ಟ್ ಇಟ್ಟುಕೊಂಡು “ಕುಂತಿಪುತ್ರ’ ಸಿನಿಮಾ ಮಾಡಿದ್ದೇವೆ. ನೇರ ನುಡಿಯ ನಾಯಕ, ಅನ್ಯಾಯವನ್ನು ಖಂಡಿಸುತ್ತಾ ಬರುತ್ತಾನೆ. ಆದರೆ, ಘಟನೆಯೊಂದರಲ್ಲಿ ಹಳ್ಳಿ ಜನ ಆತನನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಇದರಿಂದ ದೊಡ್ಡ ಅವಾಂತರ ಸೃಷ್ಟಿಯಾಗುತ್ತದೆ. ಇದರಿಂದ ಮುಂದೆ ಏನೇನಾಗುತ್ತದೆ ಎಂಬುದು ಚಿತ್ರದ ಕಥೆ. ಇಲ್ಲಿ ಲವ್, ಆ್ಯಕ್ಷನ್, ಎಮೋಶನ್ಸ್, ಸೆಂಟಿಮೆಂಟ್ ಎಲ್ಲವೂ ಇದೆ’ ಎನ್ನುತ್ತಾರೆ.
“ಕುಂತಿಪುತ್ರ’ ಚಿತ್ರದಲ್ಲಿ ಗೋಪಿಕೃಷ್ಣ ನಾಯಕನಾಗಿ, ಪ್ರಿಯಾಂಕ ಚೌಧರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.