Advertisement

Kunthur ಶಾಲೆ:ಕೆಲವೇ ವರ್ಷದಲ್ಲಿ ಬಿರುಕುಬಿಟ್ಟ ಗೋಡೆ;ನಿರುಪಯುಕ್ತವಾದ ಮುಖ್ಯಶಿಕ್ಷಕರ ಕೊಠಡಿ

04:33 PM Aug 30, 2024 | Team Udayavani |

ಕಡಬ: ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ಸರ್ವಶಿಕ್ಷಣ ಅಭಿಯಾನದಡಿ 2011-12ನೇ ಸಾಲಿನಲ್ಲಿ 4.46 ಲಕ್ಷ ರೂ.ಸರಕಾರದ ಅನುದಾನ ಹಾಗೂ ದಾನಿಯೊಬ್ಬರ 75 ಸಾವಿರ ರೂ. ದೇಣಿಗೆ ಸೇರಿ ಮುಖ್ಯಶಿಕ್ಷಕರ ಕೊಠಡಿ ನಿರ್ಮಾಣಗೊಂಡಿತ್ತು. ಆದರೆ ಆ ಕಟ್ಟಡದ ಗೋಡೆ ಕೆಲವೇ ವರ್ಷದಲ್ಲಿ ಬಿರುಕು ಬಿಟ್ಟು ನಿರುಪಯುಕ್ತವಾಗಿದೆ.

Advertisement

ದುರಸ್ತಿ ಕಾಮಗಾರಿಯ ವೇಳೆ ಕುಸಿದಿರುವ ಶಾಲೆಯ ಹಳೆಯ ಕಟ್ಟಡ ವನ್ನು ತೆರವುಗೊಳಿಸುವ ಸಂದರ್ಭ ನಿರುಪ ಯುಕ್ತಗೊಂಡಿರುವ ಈ ಕಟ್ಟಡವನ್ನೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ. 50 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಹೆಂಚಿನ ಕಟ್ಟಡದ ಜತೆ ಕೆಲವೇ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕಾಂಕ್ರೀಟ್‌ ಕಟ್ಟಡವನ್ನೂ ತೆರವುಗೊಳಿಸಬೇಕಾಗಿ ಬಂದಿರುವುದು ವಿಪರ್ಯಾಸ.

ಕಾಂಕ್ರಿಟ್‌ ಕಟ್ಟಡವೊಂದು ಐದೇ ವರ್ಷದಲ್ಲಿ ನಿರುಪಯುಕ್ತವಾಗಿ ಬಾಗಿಲು ಮುಚ್ಚಿಕೊಂಡಿರುವುದಕ್ಕೆ ಯಾರು ಹೊಣೆ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಅದಕ್ಕೆ ಅಧಿಕಾರಿಗಳು, ಗುತ್ತಿಗೆದಾರರು ಉತ್ತರಿಸಬೇಕಾಗಿದೆ.

ಬುಧವಾರ ಶಾಸಕರ ಭೇಟಿಯ ಸಂದರ್ಭದಲ್ಲಿ ಈ ವಿಚಾರವನ್ನೂ ಪ್ರಸ್ತಾಪಿಸಿದ ಸ್ಥಳೀಯರು ಕಳಪೆ ಕಾಮಗಾರಿಗೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಆಗದ ಬದಲಿ ವ್ಯವಸ್ಥೆ
ಶಾಲೆಯ 7 ತರಗತಿ ಕೊಠಡಿಗಳು ಸುರಕ್ಷಿತವಾಗಿಲ್ಲ. ತರಗತಿ ನಡೆಸಲು ಬದಲಿ ವ್ಯವಸ್ಥೆಯೂ ಇರುವುದಿಲ್ಲ ಎಂದು ಕಳೆದ ಮೇ ತಿಂಗಳಿನಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಜಿಲ್ಲಾ ಪಂಚಾಯತ್‌ಗೆ ವರದಿ ನೀಡಲಾಗಿತ್ತು. ಆದರೂ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ ಎಂಬ ಆರೋಪ ಈಗ ಕೇಳಿಬಂದಿದೆ.

Advertisement

2024ರ ಮುಂಗಾರು ಮಳೆ ಪ್ರಾರಂಭ ವಾಗುವ ಮೊದಲು ಅಂಗನವಾಡಿ, ಶಾಲೆ ಹಾಗೂ ಕಾಲೇಜು ಕಟ್ಟಡಗಳ ಸುರಕ್ಷತೆಯ ಬಗ್ಗೆ ದೃಢೀಕರಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸಲ್ಲಿಸುವಂತೆ ಮೇ 3 ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಕುಂತೂರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯ ಕಟ್ಟಡಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಆ ಶಾಲೆಯಲ್ಲಿನ 10 ಕೊಠಡಿಗಳ ಪೈಕಿ 3 ಕೊಠಡಿಗಳು ಮಾತ್ರ ಸುರಕ್ಷಿತವಾಗಿವೆ. 7 ಕೊಠಡಿಗಳು ಸುರಕ್ಷಿತ ವಾಗಿಲ್ಲ. ಆ ಕೊಠಡಿಗಳ ಅಡಿಪಾಯ ಮತ್ತು ಗೋಡೆಗಳು ಬಿರುಕು ಬಿಟ್ಟಿವೆ ಎಂದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಪುತ್ತೂರು ಉಪವಿಭಾಗದ ಕಿರಿಯ ಎಂಜಿನಿಯರ್‌, ಪೆರಾಬೆ ಪಿಡಿಒ ಹಾಗೂ ಶಾಲಾ ಮುಖ್ಯಶಿಕ್ಷಕರ ರುಜು ಹಾಕಿ ಶಾಲಾ ಕಟ್ಟಡದ ಸುರಕ್ಷತೆಯ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವರದಿ ನೀಡಿದ್ದರು. ಆಗಲೇ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಶಾಲಾ ತರಗತಿ ಪುನರಾರಂಭ
ಶಾಲಾ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ ಒಂದು ದಿನದ ರಜೆಯ ಬಳಿಕ ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಗುರುವಾರ (ಆ.29) ದಿಂದ ಎಂದಿನಂತೆ ತರಗತಿ ಪುನರಾರಂಭಗೊಂಡಿದೆ.

ಆ.27ರಂದು ಮಧ್ಯಾಹ್ನ ಶಾಲೆಯ ಹಳೆಯ ಕಟ್ಟಡದ ಒಂದು ಭಾಗ ಕುಸಿತಗೊಂಡ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ.28ರಂದು ಶಾಲೆಗೆ ರಜೆ ನೀಡಲಾಗಿತ್ತು. ಶಿಥಿಲಗೊಂಡಿರುವ ಹಳೆಯ ಕಟ್ಟಡ ಹೊರತುಪಡಿಸಿ ಉಳಿದಂತೆ ನಲಿಕಲಿ ತರಗತಿ ನಡೆಯುತ್ತಿದ್ದ ಕಟ್ಟಡ, ಶಾಲಾ ಶಿಕ್ಷಕರ ಕಚೇರಿಯಿದ್ದ ಕಟ್ಟಡ ಹಾಗೂ ರಂಗಮಂದಿರ ಉಪಯೋಗಿಸಿಕೊಂಡು ತರಗತಿ ನಡೆಸಲಾಗಿದೆ. ಆ.30ರಿಂದ 6,7 ಹಾಗೂ 8ನೇ ತರಗತಿಗಳು ಶಾಲಾ ಪಕ್ಕದಲ್ಲೇ ಇರುವ ಸಫ್ವಾನ್‌ ಎಂಬವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ನಡೆಯಲಿದ್ದು, ಕಟ್ಟಡದ ಸುತ್ತ ಶಾಲಾ ಪೋಷಕರು ಹಾಗೂ ಸಾರ್ವಜನಿಕರು ಸೇರಿಕೊಂಡು ಆ.29ರಂದು ಸ್ವತ್ಛತೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.