ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ ಘಟನೆ ಜರುಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ 7 ಅಭ್ಯರ್ಥಿಗಳಲ್ಲಿ ಯಾರೋ ಒಬ್ಬರು ಈ ಕೃತ್ಯ ಎಸಗಿದ್ದು, ಮಾಟ ಮಂತ್ರ ಮಾಡಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಶಂಕಿಸಲಾಗಿದೆ.
ಮನೆಗಳ ಬಾಗಿಲಿಗೆ ಕುಂಕುಮ ಎರಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಏಳೂ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ಮಂಗಳವಾರ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಘಟನೆ ಬೆಳಕಿಗೆ ಬರುತ್ತಲೇ ಸ್ಥಳಕ್ಕೆ ಧಾವಿಸಿದ ಮುದ್ದೇಬಿಹಾಳ ಪಿಎಸೈ ಮಲ್ಲಪ್ಪ ಮಡ್ಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳವಾರ ಮತದಾನ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಇದರಿಂದಾಗಿ ಘಟನೆ ಹೆಚ್ಚು ಮಹತ್ವ ಪಡೆದುಕೊಂಡಿದೆ.