ಕಟಪಾಡಿ: ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಉತ್ತರ ಭಾಗದ ತಪ್ಪಲಿನ ನೆಡುತೋಪು ಪ್ರದೇಶದಲ್ಲಿ ರಾತ್ರಿಯಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಮತ್ತು ಜಿಲ್ಲಾ ಆಗ್ನಿಶಾಮಕದಳ ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಕುಂಜಾರುಗಿರಿಯ ಬಾಣತೀರ್ಥ ಪ್ರದೇಶದ ಮೇಲ್ಭಾಗದಲ್ಲಿನ ನೆಡು ತೋಪು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಧ್ಯಾಹ್ನ 3.30ರ ಸುಮಾರಿಗೆ ಗಮನಕ್ಕೆ ಬಂದಿತ್ತು. ಕೂಡಲೇ ಸ್ಥಳೀಯರ ಸಹಕಾರ ಮತ್ತು ಜಿಲ್ಲಾ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿಯನ್ನು ತಹಬಂದಿಗೆ ತರಲಾಗಿತ್ತು.
ಆದರೆ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬಂದಿಗಳು ಮತ್ತೆ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಸಮರ್ಪಕವಾದ ರಸ್ತೆ ಸಂಪರ್ಕ ಇಲ್ಲದ ಕಾರಣ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ತೊಡಕುಂಟಾಗುತ್ತಿದ್ದು, ಹತೋಟಿಗೆ ಬಾರದಿದ್ದಲ್ಲಿ ಕುಂಜಾರುಗಿರಿ ದೇಗುಲದ ಪ್ರದೇಶಕ್ಕೆ ಅಪಾಯ ಸಂಭವಿಸುವ ಆತಂಕವಿದೆ ಎಂದು ದೇಗುಲದ ಮ್ಯಾನೇಜರ್ ರಾಜೇಂದ್ರ ರಾವ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: BJP ಮಾಮನೊ.. ನಿಮ್ ಅತ್ತೇನೊ 30%.. ; ಸುದೀಪ್ ಗೆ ಟಾಂಗ್ ನೀಡಿದ ಪ್ರಕಾಶ್ ರಾಜ್