Advertisement

Fire: ಕುಂಜಾರುಗಿರಿ ದುರ್ಗಮ ನೆಡುತೋಪು ಪ್ರದೇಶದಲ್ಲಿ ಮತ್ತೆ ವ್ಯಾಪಿಸಿದ ಬೆಂಕಿ

09:46 PM Apr 06, 2023 | Team Udayavani |

ಕಟಪಾಡಿ: ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಉತ್ತರ ಭಾಗದ ತಪ್ಪಲಿನ ಕಾಡು ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 15 ಎಕರೆಗೂ ಮಿಕ್ಕಿದ ಪ್ರದೇಶದಲ್ಲಿ ಬೆಂಕಿಯು ವ್ಯಾಪಿಸಿದ ಘಟನೆಯು ಎ.6ರಂದು ಸಂಭವಿಸಿದೆ.

Advertisement

ಕುಂಜಾರುಗಿರಿಯ ಬಾಣತೀರ್ಥ ಪ್ರದೇಶದ ಮೇಲ್ಭಾಗದಲ್ಲಿನ ನೆಡು ತೋಪು ಪ್ರದೇಶದಲ್ಲಿ ಬೆಂಕಿಯು ಕಾಣಿಸಿಕೊಂಡಿದ್ದು ಮಧ್ಯಾಹ್ನ 3.30ರ ಸುಮಾರಿಗೆ ಗಮನಕ್ಕೆ ಬಂದಿತ್ತು. ಕೂಡಲೇ ಸ್ಥಳೀಯರ ಸಹಕಾರ ಮತ್ತು ಜಿಲ್ಲಾ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿಯನ್ನು ತಹಬಂದಿಗೆ ತರಲಾಗಿತ್ತು.
ಆದರೆ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಮತ್ತೆ ಬೆಂಕಿಯು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ದುರ್ಗಮ ಪ್ರದೇಶವಾಗಿರುವ ಕಾರಣದಿಂದ ಕಾಡು ಪ್ರಾಣಿಗಳ ಹಾವಳಿಗೆ ಹೆದರುವ ಸ್ಥಳೀಯರು ನೆಡುತೋಪು ಪ್ರದೇಶಕ್ಕೆ ತೆರಳಲು ಹಿಂಜರಿಯುತ್ತಿದ್ದು, ಬೆಂಕಿಯು ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬಂದಿಗಳು ಮತ್ತೆ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಸಮರ್ಪಕವಾದ ರಸ್ತೆ ಸಂಪರ್ಕ ಇಲ್ಲದ ಕಾರಣ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ತೊಡಕುಂಟಾಗುತ್ತಿದ್ದು, ಸ್ಥಳೀಯರ ಜೊತೆ ಸೇರಿಕೊಂಡು ಬೆಂಕಿಯನ್ನು ನಂದಿಸುವ ಪ್ರಯತ್ನ ಸಾಗುತ್ತಿದೆ. ಬೆಂಕಿಯು ಹತೋಟಿಗೆ ತರಲು ಕಷ್ಟವಾದಲ್ಲಿ ಮತ್ತಷ್ಟು ಜಟಿಲ ಸಮಸ್ಯೆಗೊಂಡು ಶ್ರೀ ದೇಗುಲದ ಪ್ರದೇಶಕ್ಕೆ ಅಪಾಯ ಸಂಭವಿಸುವ ಭೀತಿಯನ್ನು ದೇಗುಲದ ಮ್ಯಾನೇಜರ್‌ ರಾಜೇಂದ್ರ ರಾವ್‌ ಅವರು ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next