ಕುಣಿಗಲ್: ತಾಲೂಕಿನ ಕಸಬಾ ಹೋಬಳಿ ಹಂಗರ ಹಳ್ಳಿ, ತರಿಕೆರೆ, ಹಂದಲಕುಪ್ಪೆ ಗ್ರಾಮಗಳಲ್ಲಿ ಕಲ್ಲುಗಣಿ ಗಾರಿಕೆ ದಂಧೆ, ಬಳ್ಳಾರಿ ಮೈನಿಂಗ್ ಮಾಫಿಯಾವನ್ನೂ ಮೀರಿಸುತ್ತಿರುವಂತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯದಲ್ಲಿ ದಾವೆ ಹೂಡುವುದ್ದಾಗಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹೈಕೋರ್ಟ್ ಹಿರಿಯ ವಕೀಲ ಡಾ. ಸಿ.ಎಸ್. ದ್ವಾರಕಾನಾಥ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಹಂಗರಹಳ್ಳಿ ಸರ್ವೆ ನಂ.46, ಹಂದಲಕುಪ್ಪೆ ಸರ್ವೆ ನಂ.1, ತರೀಕರೆ ಸರ್ವೆ ನಂ.80 ಹಾಗೂ 81ರಲ್ಲಿ ನಡೆಯುತ್ತಿರುವ ಎಂಟು ಗಣಿಗಾರಿಕೆ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಇಲ್ಲಿನ ಪರಿಸ್ಥಿತಿಯನ್ನು ನೋಡಿ ಅಧಿಕಾರಿ ಗಳು ತಾಲೂಕಿನಲ್ಲಿ ಇದ್ದಾರೋ, ಇಲ್ವೋ ಎಂದು ಪ್ರಶ್ನಿಸಿದರು.
ಇಷ್ಟು ಅಕ್ರಮಗಳು ನಡೆಯುತ್ತಿದ್ದರೂ ಏಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ, ಕಲ್ಲುಗಣಿ ಕಾರಿಕೆಗೆ ಭೂಮಿ ಮಟ್ಟದದಿಂದ ಎತ್ತರದಲ್ಲಿದ್ದ ಬಂಡೆಯನ್ನು ಈಗ 150, 160 ಅಡಿ ಪಾತಾಳ ಮಟ್ಟದ ಅಳಕ್ಕೆ ಕೊರೆದಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ನೋಡಿಕೊಂಡು ಅಧಿಕಾರಿಗಳು ಸುಮ್ಮನೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:- ಕೃಷಿ ಕಾರ್ಮಿಕರ ಕೊರತೆ: ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್
ಜೀವನಕ್ಕೆ ಮಾರಕ: ಕಾನೂನುಗಳನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಕಲ್ಲು ಗಣಿಗಾರಿಕೆಯಿಂದ ಅಕ್ಕಪಕ್ಕದಲ್ಲಿರುವ ಕಾಡುಗೊಲ್ಲ ಬುಡಕಟ್ಟು ಜನಾಂಗ, ಲಂಬಾಣಿ ತಾಂಡ ಹಾಗೂ ಪರಿಶಿಷ್ಟ ಜನಾಂಗದ ಕಾಲೋನಿಗಳಲ್ಲಿನ ಮನೆಗಳು ಬಿರುಕು ಬಿಟ್ಟು ತೊಂದರೆಯಾಗಿದೆ ಎಂಬ ದೂರಿನ ಹಿನ್ನೆಲ್ಲೆಯಲ್ಲಿ ಪರಿಶೀಲಿಸಿದ್ದೇವೆ.
ಕಲ್ಲುಗಣಿಗಾರಿಕೆಯಿಂದ ಬರುವ ದೂಳು ಮನುಷ್ಯನಿಗೆ ಮಾತ್ರವಲ್ಲದೇ ಪ್ರಾಣಿ ಸಂಕು ಲಕ್ಕೆ ಮಾರಕವಾದ ರೋಗ ಹರಡುತ್ತವೆ. ಮೊದಲೇ ಇಲ್ಲಿ ಹಿಂದು ವರ್ಗಗಳ ಬುಡಕಟ್ಟು ಜನಾಂಗಗಳೇ ಹೆಚ್ಚು ವಾಸುತ್ತಿರುವುದರಿಂದ ಆರ್ಥಿಕವಾಗಿ ಹಿಂದಿಳಿದಿರುವ ಇವರಿಗೆ ಆರೋಗ್ಯ ತೋರಿಸಿಕೊಳ್ಳುವ ಶಕ್ತಿ ಇಲ್ಲ. ಜೊತೆಗೆ ಇವರ ಜೀವನಾಡಿಯಾಗಿರುವ ಕುರಿ ಸಾಕಾಣಿಕೆಯ ಮೇಲೆ ಪರಿಣಾಮ ಬಿದ್ದು, ಕಳೆದ ಒಂದು ತಿಂಗಳಿಂದ 20 ಕುರಿಗಳು ಸಾವನಪ್ಪಿವೆ. ಇದರಿಂದ ಇಲ್ಲಿನ ಜನರ ಜೀವನ ನರಕವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ತೆರಿಗೆ ವಂಚನೆ: ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸಿದ ರಾಜಧನವನ್ನು ಪಾವತಿಸದೇ, ಸರ್ಕಾರಕ್ಕೆ ಕೋಟ್ಯಂತರ ರೂ., ವಂಚನೆ ಮಾಡಿದ್ದಾರೆ. ಕಲ್ಲುಗಣಿ ಗುತ್ತಿಗೆ ಪಡೆಯುವ ಮಾಲೀಕರಿಗೆ ವಿಧಿಸಿರುವ ಷರತ್ತುಗಳ ಅನ್ವಯ ಸದರಿ ಜಾಗದಲ್ಲಿ ಕಲ್ಲುಗಣಿಗಾರಿಕೆ ಮಾಡುತ್ತಿಲ್ಲ. ಸರ್ಕಾರ ನಿಗದಿ ಪಡಿಸಿರುವ ಪ್ರಮಾಣ ಮೀರಿ ಕಲ್ಲು ಸಂಪತ್ತನ್ನು ಅಕ್ರಮವಾಗಿ ಹೊರ ತೆಗೆದು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಹೇಳಿದರು.
ಸುರಕ್ಷತ ಕ್ರಮಕೈಗೊಂಡಿಲ್ಲ: ಕಲ್ಲುಗಣಿಗಾರಿಕೆ ಸ್ಥಳದಲ್ಲಿ ಬಂಡೆಯನ್ನು ಸ್ಫೋಟ ಮಾಡುವಾಗ, ಸರ್ಕಾರಿ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಅಗತ್ಯ ಸುರಕ್ಷತ ಕ್ರಮಗಳನ್ನು ಕೈಗೊಂಡಿಲ್ಲ, ಗಣಿಗಾರಿಕೆ ಸ್ಥಳಕ್ಕೆ ಸ್ಫೋಟಕಗಳನ್ನು ಸಾಗಿಸುವಾಗಿ ಸುರಕ್ಷತ ಕ್ರಮಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಯಾವುದೇ ಪರಿಣಿತಿ ಪಡೆಯದೇ ಇರುವ ವ್ಯಕ್ತಿಗಳನ್ನು ಇದಕ್ಕೆ ನೇಮಕ ಮಾಡಿಕೊಂಡಿದ್ದಾರೆ.
ಬಂಡೆ ಸ್ಫೋಟ ಮಾಡುವ ಸಲುವಾಗಿ 30ರಿಂದ 40 ಅಡಿ ಬಂಡೆ ಕೊರೆದು ಸ್ಫೋಟ ಮಾಡುವುದರಿಂದ ಹೆಚ್ಚು ಭೂಮಿ ಕಂಪನವಾಗಿ ಅಕ್ಕಪಕ್ಕದ ಗ್ರಾಮದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಮನೆಗಳು ಸಂಪೂರ್ಣವಾಗಿ ಬಿದ್ದಿವೆ ಎಂದು ದೂರಿದರು.
ಅರಣ್ಯ ಪ್ರದೇಶದ ಸಮೀಪ ಗಣಿಗಾರಿಕೆ: ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸರ್ವೆ ನಂ ಹೊಂದಿ ಕೊಂಡು ಮೀಸಲು ಅರಣ್ಯವಿದೆ. ಇಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಧೂಳು ಮತ್ತು ಶಬ್ದದಿಂದ ಜೀವ ಜಂತುಗಳು ವಿನಾಶಕ್ಕೆ ಕಾರಣವಾಗಿದೆ. ಕಾಡು ಪ್ರಾಣಿಗಳು ಶಬ್ದ ಮತ್ತು ಧೂಳಿನಿಂದ ಅಕ್ಕಪಕ್ಕದ ಗ್ರಾಮಗಳಿಗೆ ಬಂದು ಸಾಕು ಪ್ರಾಣಿಗಳಾದ ಆಡು, ಕುರಿ, ಧನಗಳನ್ನು ಎಳೆದುಕೊಡು ಹೋಗಿ ತಿಂದು ಹಾಕುತ್ತಿವೆ ಎಂದು ಹೇಳಿದರು.
ಅಡಳಿತ ನಡೆಸುವ ವಿಧಾನಸೌಧದಿಂದ ಕೇವಲ 80 ಕಿ.ಮೀ ಸಮೀಪದಲ್ಲೇ ಇಷ್ಟೋಂದು ಮಾನವ ಹಕ್ಕು ಉಲ್ಲಂಘನೆಯಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದರೂ, ಆಡಳಿತ ನಡೆಸುವವರು ಇಲ್ಲವೇ ಅಧಿಕಾರಿ ಶಾಹಿಗಳು ಗಮನ ಹರಿಸದೇ ಇರುವುದು ದುರಂತವಾಗಿದೆ ಎಂದು ತಿಳಿಸಿದರು.
ಕುರಿಗಾಹಿಯ ಕಷ್ಟ ಕೇಳಿದರು: ಕಲ್ಲುಗಣಿಗಾರಿಕೆ ಸ್ಥಳ ಪರಿಶೀಲನೆ ನಡೆಸಿ ಬರುತ್ತಿದ್ದ ಡಾ.ಸಿ.ಆರ್. ದ್ವಾರಕ ನಾಥ್ ಅವರಿಗೆ ಕುರಿಗಾಹಿ ಜಯಮ್ಮ ಅಡ್ಡಲಾಗಿ ಸಿಕ್ಕರು. ಎಷ್ಟು ಕುರಿ ಜಯಮ್ಮ ಎಂದು ಕೇಳಿದಾಗ, ಸಾರ್ 80 ಕುರಿ ಇದ್ದವು. ಈಗ ಕಲ್ಲುಗಣಿಗಾರಿಕೆಯಿಂದ ಧೂಳು ಹಾಗೂ ಕಲುಷಿತು ನೀರು ಕುಡಿದ 20 ಕುರಿ ಒಂದು ತಿಂಗಳಲ್ಲಿ ಸತ್ತು ಹೋಗಿವೆ ಎಂದು ಕಷ್ಟ ಹೇಳಿಕೊಂಡ ಮಹಿಳೆಗೆ, ಸಮಾಧಾನ ಹೇಳಿ ಒಳ್ಳೆ ಕಾಲ ಬರುತ್ತದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ಕಾಡುಗೊಲ್ಲ ಆಶ್ಮತೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ, ಗ್ರಾಮದ ಮುಖಂಡ ಧನಂಜಯ್ಯ, ರಾಜಣ್ಣ, ಮಾರೇಗೌಡ, ಜಯಮ್ಮ, ಶಂಕರ್ ನಾಯ್ಕ, ಶಿವಕುಮಾರ್ ನಾಯ್ಕ, ನವೀನ, ದೊಡ್ಡಯ್ಯ ಹಾಜರಿದ್ದರು.
ಇಲ್ಲಿನ ಭೀಕರತೆ ನನಗೆ ಸಂಪೂರ್ಣ ಅರ್ಥವಾಗಿದೆ
ಇಲ್ಲಿನ ಗಣಿಗಾರಿಗೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಎಲ್ಲಾ ನ್ಯೂನ್ಯತೆಗಳನ್ನು ಪಟ್ಟಿ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದೇವೆ. ನಾನೂ ಅಲ್ಲೇ ಕುಳಿತು ಕೇವಲ ಪೇಪರ್‌ನಲ್ಲಿ ಮಾತ್ರ ನೋಡಿದರೇ ಇಲ್ಲಿ ಭೀಕರತೆ ನನಗೆ ಅರ್ಥ ವಾಗುತ್ತಿರಲಿಲ್ಲ. ಈಗ ನನಗೆ ಸಂಪೂರ್ಣ ಅರ್ಥವಾಗಿದೆ.
ಮಾನವ ಹಕ್ಕು ಆಯೋಗ ಸೇರಿದಂತೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವ ಜೊತೆಗೆ ಅಲೆಮಾರಿ ಹಾಗೂ ಅದಿವಾಸಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನು ಪ್ರಕಾರ ನ್ಯಾಯಾಲಯದಲ್ಲಿಯೂ ಹೋರಾಟ ನಡೆಸುತ್ತೇನೆ. ಸಾಧ್ಯವಾದರೇ ವಿರೋಧ ಪಕ್ಷದ ನಾಯಕರ ಗಮನಕ್ಕೆ ಪರಿಸ್ಥಿತಿ ವಿವರಿಸಿ, ಸದನ ಸಮಿತಿಯಿಂದ ತನಿಖೆ ನಡೆಸುವ ನಿಟ್ಟಿನಲ್ಲಿಯೂ ಹೋರಾಟ ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ತಿಳಿಸಿದರು