Advertisement

ಪುರಸಭೆ ನಾಮಿನಿ ಸದಸ್ಯತ್ವಕ್ಕೆ ಬಿಗ್‌ ಫೈಟ್‌

04:34 PM Jun 06, 2023 | Team Udayavani |

ಕುಣಿಗಲ್‌: ಪುರಸಭೆಯ ನಾಮಿನಿ ಸದಸ್ಯರ ಸ್ಥಾನಕ್ಕಾಗಿ ಮೂಲ ಕಾಂಗ್ರೆಸ್‌ ಹಾಗೂ ವಲಸೆ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತೆರೆ ಮರೆಯಲ್ಲಿ ಫೈಟ್‌ ಪ್ರಾರಂಭವಾಗಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರು ಆಡಳಿತ ಯಂತ್ರ ಚುರುಕುಗೊಳಿಸುವಲ್ಲಿ, ಇನ್ನೂ ಟೇಕ್‌ ಆಫ್‌ ಆಗಿಲ್ಲ. ಆಗಲೇ ಕುಣಿಗಲ್‌ ಪುರಸಭೆ ನಾಮಿನಿ ಸದಸ್ಯರ ಸ್ಥಾನಕ್ಕೆ ಮುಸುಕಿನ ಗುದ್ದಾಟ ಪ್ರಾರಂಭಗೊಂಡಿದ್ದು, ನಾಮಿನಿ ಸದಸ್ಯರಾಗಲು ಶಾಸಕ ಡಾ. ಎಚ್‌.ಡಿ.ರಂಗನಾಥ್‌ ಅವರ ಮೇಲೆ ಕಾರ್ಯ ಕರ್ತರು ಒತ್ತಡ ಹೇರುತ್ತಿದ್ದಾರೆ.

ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್‌ ಜನರಿಗೆ ನೀಡಿದ 5 ಗ್ಯಾರೆಂಟಿ ಯೋಜನೆ ಇನ್ನೂ ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರ ಎಣಗಾಡುತ್ತಿರುವಾಗ ಇತ್ತ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮನ್ನು ಪುರಸಭೆಗೆ ಸರ್ಕಾರದ ನಾಮಿನಿ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಸ್ಥಳೀಯ ಪಕ್ಷದ ಮುಖಂಡರ ಮೂಲಕ ವರಿಷ್ಠರ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೇಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದ ಕಾರಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದುಗೂಡಿ ಸಮಿಶ್ರ ಸರ್ಕಾರ ರಚಿಸಿಕೊಂಡವು. ಈ ಅವಧಿ ಯಲ್ಲಿ ಕುಣಿಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಾ.ಹೆಚ್‌.ಡಿ ರಂಗನಾಥ್‌ ಶಾಸಕರಾಗಿದ್ದರು. ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಒಂದು ವರ್ಷ ಅಧಿಕಾರದಲ್ಲಿದ್ದರು ಕಾಂಗ್ರೆಸ್‌ ನಿಂದಾಗಲಿ ಅಥವಾ ಜೆಡಿಎಸ್‌ ನಿಂದಾಗಲಿ ಯಾವೊಬ್ಬ ಕಾರ್ಯಕರ್ತರನ್ನು ಪುರಸಭೆಗೆ ನಾಮಿನಿ ಸದಸ್ಯರನ್ನು ನೇಮಕ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಅ ಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕುಣಿಗಲ್‌ ಪುರಸಭೆಗೆ 5 ಮಂದಿ ಆ ಪಕ್ಷದ ಕಾರ್ಯಕರ್ತರನ್ನು ನಾಮಿನಿ ಸದಸ್ಯರನ್ನಾಗಿ ನೇಮಕ ಮಾಡಿತ್ತು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬಂದಿದೆ. ಮತ್ತೆ ಕಾಂಗ್ರೆಸ್‌ ನಿಂದ ಡಾ.ಎಚ್‌.ಡಿ ರಂಗನಾಥ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಮುನ್ನ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಬಂದ ಕಾರ್ಯಕರ್ತರು ಡಾ.ರಂಗನಾಥ್‌ ಅವರ ಗೆಲುವಿಗೆ ಶ್ರಮಿಸಿದ್ದಾರೆ, ಜತೆಗೆ ಮೂಲತಃ ಕಾಂಗ್ರೆಸ್ಸಿಗರೂ ಪಕ್ಷದ ಗೆಲುವಿಗೆ ಶ್ರಮಿಸಿದ ಫಲವಾಗಿ ಎರಡನೇ ಭಾರಿ ದಾಖಲೆ ಮತಗಳ ಅಂತರದಲ್ಲಿ ರಂಗನಾಥ್‌ ಜಯಗಳಿಸದ್ದರು.

ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳ, ಆಶ್ರಯ ಸಮಿತಿ, ಎಪಿಎಂಸಿ, ಆರಾಧನಾ ಸಮಿತಿ, ಬಗರ್‌ ಹುಕ್ಕುಂ, ಆರೋಗ್ಯ, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಸಮಿತಿಗಳಿಗೆ ನಾಮಿನಿ ನಿರ್ದೇಶಕರನ್ನು ಮಾಡುವ ಅವಕಾಶವಿದೆ ಈ ನಿಟ್ಟಿನಲ್ಲಿ ಕುಣಿಗಲ್‌ ಪುರಸಭೆಗೆ ನಾಮಿನಿ ಸದಸ್ಯರಾಗಲು ಮೂಲತಃ ಕಾಂಗ್ರೆಸ್‌ ಹಾಗೂ ವಲಸೆ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಾಮಿನಿ ಸದಸ್ಯರಾಗಲು ತೆರೆಮರೆಯಲ್ಲಿ ತೀವ್ರ ಕಸರತ್ತು ಶುರುವಾಗಿದೆ. ವಲಸೆ ಕಾಂಗ್ರೆಸ್‌ಗರಿಗೆ ನಾಮಿನಿ ಸದಸ್ಯರು ಕೊಡಬಾರ ದೆಂದು ಕಾಂಗ್ರೆಸ್‌ನ ಪುರಸಭೆಯ ಮಾಜಿ ಅಧ್ಯಕ್ಷರು ಬಹಿರಂಗವಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಪ್ರಮುಖರು ವಲಸೆ ಕಾಂಗ್ರೆಸ್‌ಸಿಗರಿಗೆ ನಾಮಿನಿ ಸದಸ್ಯರನ್ನಾಗಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಸ್ಯೆಯನ್ನು ಶಾಸಕರು ಯಾವ ರೀತಿ ಬಗ್ಗೆ ಹರಿಸಲಿದ್ದಾರೆ ಎಂಬುದು ಮುನ್ನೆಲೆಯಲ್ಲಿರುವ ಪ್ರಶ್ನೆಯಾಗಿದೆ.

Advertisement

ಪುರಸಭೆ ಸದಸ್ಯ ಸ್ಥಾನದ ಮೇಲೆ ಕಣ್ಣು : ನಾಮಿನಿ ಸದಸ್ಯರಾದರೇ ಮುಂಬರುವ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸಿದರೇ ಜಯಗಳಿಸಬಹುದೆಂಬ ಲೆಕ್ಕಚಾರ ಹಾಕಿಕೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು ನಾಮಿನಿ ಸದಸ್ಯರ ನೇಮಕದ ಮೇಲೆ ಕಣ್ಣಿಟ್ಟಿದ್ದು ಶಾಸಕರ ಹೆಸರನ್ನು ಬಳಸಿಕೊಂಡು ಅಧಿಕಾರಿಗಳಿಗೆ ಪೋನ್‌ ಮೂಲಕ ಸಂರ್ಪಕಿಸಿ ನಾಗರಿಕರಿಗೆ ಆಗಬೇಕಾಗಿರುವ ಕೆಲಸಗಳನ್ನು ಅಧಿಕಾರಿಗಳ ಮೂಲಕ ಮಾಡಿಸಿ ವಾರ್ಡ್‌ ಗಳಲ್ಲಿ ಹೆಸರು ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಪುರಸಭಾ ಮಾಜಿ ಸದಸ್ಯರು ನಾಮಿನಿ ಸದಸ್ಯರಾಗಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

-ಕೆ.ಎನ್‌. ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next