ಕುಣಿಗಲ್ : ತಾಲೂಕಿನ ಅಮೃತೂರು ಗ್ರಾಮದಲ್ಲಿ ಬಡ್ಡಿ ಹಣ ನೀಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿರ್ಯೋವ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಅಮೃತೂರು ಗ್ರಾಮದ ವಾಸಿ ಅಬ್ದುಲ್ ಖಲೀಲ್ (55) ಮೃತ ವ್ಯಕ್ತಿ. ತೌಸಿಫ್ ಪಾಷ, ಆಸೀಪ್‌ಪಾಷ, ಶಬಾನಾ ಬಾನು, ಸನ್ಮಾಸುಲ್ತಾನ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಅವರ ವಿರುದ್ದ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಖಲೀಲ್ ಅವರ ಮಗಳು ಎ.ಅಮ್ರೀನ್ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ ಮದುವೆಗೆ ಅಮೃತೂರು ಗ್ರಾಮದ ಪೇಟೆ ಬೀದಿ, ಅಖ್ತರ್ ಮೊಹಲ್ಲಾದ ಕೋಳಿ ಅಂಗಡಿ ವ್ಯಾಪಾರಿ ತೌಸೀಫ್ ಪಾಷ ಅವರಿಂದ ನನ್ನ ತಂದೆ 50 ಸಾವಿರ ರೂ. ಸಾಲ ಪಡೆದು, ಪ್ರತಿ ತಿಂಗಳು ಐದು ಸಾವಿರ ರೂ.ಗಳನ್ನು ಬಡ್ಡಿ ಹಣ ಕಟ್ಟುತ್ತಿದ್ದರು, ಆದರೆ ಈ ತಿಂಗಳು ಬಡ್ಡಿ ಹಣವನ್ನು ಕೊಡಲು ಒಂದು ದಿನ ತಡವಾಗಿದಕ್ಕೆ, ಅ 2 ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಅವರ ಅಂಗಡಿ ಮುಂದೆ ನಡೆದುಕೊಂಡು ಹೊಗುತ್ತಿದ್ದ ನನ್ನ ತಂದೆಯವನ್ನು ಕರೆದು, ಬಡ್ಡಿ ಹಣ ಕೊಡಲು ಯೋಗ್ಯತೆ ಇಲ್ಲದ ಮೇಲೆ ದುಡ್ಡು ಏಕೆ ತಗೆದುಕೊಳ್ಳುತ್ತಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏಕೆ ಹೀಗೆ ಮಾತನಾಡುತ್ತಿದ್ದೀಯ ಎಂದು ನನ್ನ ತಂದೆ ಕೇಳಿದಕ್ಕೆ ಅವರ ಜತೆಯಲ್ಲಿ ಇದ್ದ ಅವರ ತಮ್ಮ ಅಸಿಪ್ ಪಾಷ ಕೋಳಿ ಕಟ್ ಮಾಡುವ ಚಾಕು ಹಿಡಿದು ತಂದೆಯ ತಲೆಗೆ ಹೊಡೆದು ಬಳಿಕ ಚಾಕುವಿನಿಂದ ಕೈ, ಮುಂಗೈಗೆ ಬಲವಾಗಿ ಇರಿದಿದ್ದಾರೆ. ನನ್ನ ತಂದೆ ಕಿರುಚಿಕೊಂಡಾಗ ಅಲ್ಲೆ ಪಕ್ಕದ ಮನೆಯಲ್ಲಿ ಇದ್ದ ನನ್ನ ತಾಯಿ ಬಂದಿದ್ದು, ಆಗ , ಶಬಾನಾ ಬೇಗಂ, ಅವರ ಸೊಸೆ ನಗ್ಮಾಸುಲ್ತಾನ್ ಅತ್ತಿಹಾರ್ ನಮ್ಮ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಗಾಯಗೊಂಡ ಅಬ್ದುಲ್ ಖಲೀಲ್ ಹಾಗೂ ಪತ್ನಿಯನ್ನು ಅಮೃತೂರು ಹಾಗೂ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅಬ್ದುಲ್ ಖಲೀಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.