ಕುಣಿಗಲ್: ವಿಷದ ಗಾಳಿ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ಸೀನಪ್ಪನಹಳ್ಳಿಯ ಪ್ರೌಢ ಶಾಲೆಯೊಂದರಲ್ಲಿ ಫೆ. 8ರ ಗುರುವಾರ ಸಂಭವಿಸಿದೆ.
ಶಾಲೆಯ ಶಿಕ್ಷಕರಾದ ಶಿವಗಂಗಯ್ಯ, ಚೇತನ್ ಸೇರಿದಂತೆ 30ಕ್ಕೂ ಅಧಿಕ ವಿದ್ಯಾರ್ಥಿಗಳು ವಿಷಗಾಳಿ ಸೇವನೆ ಮಾಡಿ ಅಸ್ತವ್ಯಸ್ಥಗೊಂಡು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ: ಶಾಲೆ ಪಕ್ಕದಲ್ಲಿ ಚಿಕ್ಕಕಲ್ಲುವೀರಯ್ಯ ಎಂಬವರಿಗೆ ಸೇರಿದ ಜಮೀನಿನಲ್ಲಿ ಮಾವಿನ ಸಸಿ ಹಾಕಲಾಗಿದೆ. ಈ ಸಸಿಗಳಿಗೆ ಬುಧವಾರ ಔಷಧಿ ಸಿಂಪಡಿಸಿದರು ಎನ್ನಲಾಗಿದ್ದು, ಈ ಔಷಧಿಯು ವಿಷಗಾಳಿಯಾಗಿ ಪರಿವರ್ತನೆಗೊಂಡು, ಇದನ್ನು ಸೇವಿಸಿದ ವಿದ್ಯಾರ್ಥಿಗಳಿಗೆ ತಲೆ ನೋವು, ಹೊಟ್ಟೆ ನೋವು, ಭೇದಿ ಪ್ರಾರಂಭವಾಗಿದೆ.
ಹಲವು ವಿದ್ಯಾರ್ಥಿಗಳು ಕಳೆದ ರಾತ್ರಿಯೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳು ಗುರುವಾರ ಶಾಲೆಗೆ ಬಂದ ಬಳಿಕ ತಲೆ ನೋವು, ಹೊಟ್ಟೆ ನೋವು, ಭೇದಿ, ಹೋಟೆ ನುಲಿ ಕಾಣಿಸಿಕೊಂಡು ಅಸ್ವಸ್ಥಗೊಂಡರು.
ತಕ್ಷಣ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.