Advertisement

ಮಲೆನಾಡಿನ ಕುಂದಾದ್ರಿ ಬಸದಿ

12:22 PM Nov 04, 2017 | |

 ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ ಆಗುಂಬೆಗೆ ಸಾಗುವ ಮಾರ್ಗದಲ್ಲಿ ಮುಖ್ಯ ರಸ್ತೆಯಿಂದ 7 ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಈ ಬೆಟ್ಟದಲ್ಲಿರುವ ಪಾರ್ಶ್ವನಾಥ ಜಿನಾಲಯ ಅತ್ಯಂತ ಪ್ರಸಿದ್ಧಿ.

Advertisement

    ಸಮುದ್ರಮಟ್ಟದಿಂದ ಸುಮಾರು ಮೂರುವರೆ ಸಾವಿರ ಅಡಿ ಎತ್ತರದಲ್ಲಿರುವ  ಕುಂದಾದ್ರಿ ಬೆಟ್ಟ ಜೈನರ ಪ್ರಾಚೀನ ಪವಿತ್ರ ಕ್ಷೇತ್ರವಾಗಿದೆ. ಬೆಟ್ಟದ ಶೃಂಗ ಸ್ಥಳದಲ್ಲಿ ಪಾರ್ಶ್ವನಾಥ ಜಿನಾಲಯ, ಕುಂದ ಮಂಟಪ, ಆಚಾರ್ಯ ಕುಂದ ಕುಂದಾಚಾರ್ಯರ ಪವಿತ್ರ ಚರಣ ಚಿಹ್ನೆ ಇದೆ. ಬಸದಿಯ ಮುಂಭಾಗದ ಅಷ್ಟಮೂಲೆಯ ಮಾನಸ್ತಂಭ ಆಕರ್ಷಕವಾಗಿದೆ. ಬಸದಿಯ ಎಡಭಾಗದಲ್ಲಿ ವರ್ಷದ ಎಲ್ಲಾ ಋತುಗಳಲ್ಲಿ ನೀರಿನಿಂದ ಕೂಡಿರುವ  ಪಾಪಚ್ಛೇದಿನಿ ಕೊಳ ಭಕ್ತರ ಪಾಪ ಕಳೆಯುತ್ತದೆ ಎಂಬ ಪ್ರತೀತಿ ಇದೆ. ಈ ಬಸದಿಯ ಹೊಸನಗರ ತಾಲೂಕಿನ ಹೊಂಬುಜದ ಜೈನ ಮಠದ ಆಡಳಿತಕ್ಕೆ ಒಳಪಟ್ಟಿದೆ.

 ತೈಲಪ ದೊರೆ ಇಲ್ಲಿನ ಬಸದಿಯನ್ನು ಜೀರ್ಣೋದ್ಧಾರಗೊಳಿಸಿದ ಬಗ್ಗೆ ಶಾಸನವಿದೆ. ಶಿಲಾಮಯವಾಗಿರುವ ಈ ಬಸದಿ ಒಳಭಾಗ ಕೆತ್ತನೆಯ ಕಂಬಗಳಿಂದ ಕೂಡಿದೆ. ಗರ್ಭಗೃಹದ ಖಡ್ಗಾಸನದಲ್ಲಿ 4 ಅಡಿ ಎತ್ತರದ ಜಿನ ಮೂರ್ತಿಯಿದ್ದು 5 ಹೆಡೆಯ ಸರ್ಪದ ಕೆತ್ತನೆ ಇರುವುದರಿಂದ ಪಾರ್ಶ್ವನಾಥ ಸ್ವಾಮಿಯ ಮೂರ್ತಿ ಇದು ಎಂದು ಆರಾಧಿಸಲಾಗುತ್ತಿದೆ. ನಿತ್ಯ ಬೆಳಗ್ಗೆ ಸೂರ್ಯನ ಕಿರಣಗಳು  ಗರ್ಭಗೃಹದಲ್ಲಿರುವ ಪಾರ್ಶ್ವನಾಥ ಸ್ವಾಮಿಯ ಪಾದಗಳನ್ನು ಸ್ಪರ್ಶಿಸುವುದು ಇಲ್ಲಿನ ವಿಶೇಷ. ಪ್ರಾಚೀನ ಕಾಲದಲ್ಲಿ ಆಚಾರ್ಯ ಪದ್ಮನಂದಿ ಭಟ್ಟಾರಕ ಮುನಿಗಳು ತಪಸ್ಸುಗೈದ ಸ್ಥಳ ಇದು ಎಂದು ಶಾಸನದಿಂದ ತಿಳಿದುಬರುತ್ತದೆ.

ಈ ಬಸದಿಯಲ್ಲಿ 1026, 1061, 1926, 2016 ರಲ್ಲಿ ಕಲಾಶಾಂತಿ, ಪಂಚಕಲ್ಯಾಣ ಮಹೋತ್ಸವ ನಡೆದ ಐತಿಹಾಸಿಕ ದಾಖಲೆ ಇದೆ.  ಕುಂದ ಕುಂದಾಚಾರ್ಯ ಮುನಿಗಳು ತಪೋನಿರತರಾಗಿ ಕೊನೆಗೆ ಇಲ್ಲಿಯೇ ಮುಡುಪಿದ ಕಾರಣ ಈ ಬೆಟ್ಟಕ್ಕೆ ಕುಂದಾದ್ರಿ ಬೆಟ್ಟ ಎಂಬ ಹೆಸರು ಬಂದಿದೆ.   ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲೂಕಿನ ಕೊನೆಕೊಂಡ್ಲು ಎಂಬಲ್ಲಿ ಕ್ರಿ.ಶ.ಪೂರ್ವ 108 ರಲ್ಲಿ   ಕುಂದಕುಂದಾಚಾರ್ಯರ ಜನಿಸಿದರು.  ತಮ್ಮ 11 ನೇ ವಯಸ್ಸಿನಲ್ಲಿಯೇ ವೈರಾಗ್ಯ ತಾಳಿ ಮುನಿದೀಕ್ಷೆ ಪಡೆದ ಇವರು 33 ವರ್ಷಗಳ ಕಾಲ ಅದೇ ಪದವಿಯಲ್ಲಿ ಮುಂದುವರೆದರು. 44 ನೇ ವಯಸ್ಸಿಗೆ ಚತುಸಂಘವು ಅವರಿಗೆ ಆಚಾರ್ಯ ಪದವಿ ನೀಡಿತು. ಅಲ್ಲಿಂದ 52 ವರ್ಷಗಳ ಕಾಲ ಆಚಾರ್ಯ ಪದವಿ ಅಲಂಕರಿಸಿದ್ದರು.  ಇಲ್ಲಿನ ಪಾಪಚ್ಚೇದಿನೀ ಕೊಳದ ಪಕ್ಕದ ಬಂಡೆಯಲ್ಲಿ ಕುಳಿತು ಸಮಯಸಾರ ಮತ್ತು ನಿಯಮಸಾರ ಎಂಬ ಎರಡು ಬೃಹತ್‌ ಗ್ರಂಥ ರಚಿಸಿದರು.  ಭದ್ರಬಾಹು ಗುಹೆಯಲ್ಲಿ ಕೆಲ ಕಾಲ ಘೋರ ತಪಸ್ಸು ಮಾಡಿದ ಕುಂದಕುಂದಾಚಾರ್ಯರು ಕೊನೆಗೆ ಎತ್ತರದ ಕುಂದಾದ್ರಿ ಬೆಟ್ಟಕ್ಕೆ ಬಂದು ನೆಲೆಸಿದರು. ಇಲ್ಲಿಯೇ ತಪಸ್ಸು ಮಾಡುತ್ತಾ ಸಲ್ಲೇಖನ ವ್ರತ ಕೈಗೊಂಡು ತಮ್ಮ 96 ನೇ ವಯಸ್ಸಿನಲ್ಲಿ ಸಮಾಧಿಯಾದರು ಎನ್ನಲಾಗಿದೆ. ಈ ಮೊದಲು ಬೆಟ್ಟಕ್ಕೆ ಕುಂದಕುಂದಾಚಾರ್ಯ ಬೆಟ್ಟ ಎಂದು ಕರೆಯುತ್ತಿದ್ದ ಜನರು ಕೊನೆಗೆ ಕುಂದಾದ್ರಿ ಬೆಟ್ಟ ಎಂಬ ಚಿಕ್ಕ ಹೆಸರಿಗೇ ಒಲವು ತೋರಿಸಿದರು. ಹಾಗಾಗಿ, ಕುಂದಾದ್ರಿ ಬೆಟ್ಟ ಎಂಬ ಹೆಸರೇ ಗಟ್ಟಿಯಾಗಿ ಉಳಿದುಕೊಂಡಿತು. ಇಲ್ಲಿನ ಬೆಟ್ಟದ ತುದಿಯಿಂದ ಸುತ್ತಲಿನ ನೈಸರ್ಗಿಕ ನೋಟ ರಮಣೀಯವಾಗಿದೆ. ಸೂಯಾಸ್ತ ಮತ್ತು ಸೂರ್ಯೋದಯ ಎರಡನ್ನೂ ವೀಕ್ಷಿಸಿ ಆನಂದಿಸುವ ತಾಣ ಇದು. ಬೆಟ್ಟದ ತುದಿಯಿಂದ ಸುತ್ತಲೂ ಕಾಣುವ ನದಿ, ಹೊಳೆ, ಕೆರೆ, ಭತ್ತದ ಗದ್ದೆ, ಅಡಿಕೆ ತೋಟ ಇತ್ಯಾದಿ ದೃಶ್ಯ ವರ್ಣನಾತೀತ. 

ಎನ್‌.ಡಿ.ಹೆಗಡೆ ಆನಂದಪುರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next