ಕುಂದಾಪುರ: ಸರಕಾರ ಮಾಡಬೇಕಾದ ಕೆಲಸಕಾರ್ಯ, ಸಹಾಯಗಳನ್ನು ಯಕ್ಷಗಾನ ಕಲಾರಂಗ ಪರಿಣಾಮಕಾರಿಯಾಗಿ ಮಾಡುತ್ತಿದೆ. ಇದು ಉಡುಪಿ ಜಿಲ್ಲೆಯ ದೊಡ್ಡ ಆಸ್ತಿ. ಇದರ ಸಹಾಯ ಪಡೆದ ವಿದ್ಯಾರ್ಥಿಗಳು ಸ್ವಾತಂತ್ರÂದ ಶತಮಾನೋತ್ಸವ ಸಂದರ್ಭ ದೇಶ ನಂ. 1 ಸ್ಥಾನಕ್ಕೇರಲು ಶ್ರಮಿಸಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಕುಂದಾಪುರದಲ್ಲಿ ರವಿವಾರ ನಡೆದ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್, ಕುಂದಾಪುರದ ಬಂಟರ ಯಾನೆ ನಾಡವರ ಸಂಘದ ಸಹಕಾರದೊಂದಿಗೆ ನಡೆದ ವಿನಮ್ರ ಸಹಾಯಧನ ವಿತರಣ ಸಮಾರಂಭದಲ್ಲಿ ಮಾತನಾಡಿದರು. 1,117 ವಿದ್ಯಾರ್ಥಿಗಳಿಗೆ 95.78 ಲಕ್ಷ ರೂ. ವಿತರಿಸಲಾಯಿತು. ಐವರಿಗೆ ಲ್ಯಾಪ್‌ಟಾಪ್ ನೀಡಲಾಯಿತು. ನಾಲ್ವರು ಶಾಸಕರನ್ನು ಸಮ್ಮಾನಿಸಲಾಯಿತು.
ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ ಮತ್ತು ಕಿರಣ್ ಕುಮಾರ್ ಕೊಡ್ಗಿ ಶುಭ ಹಾರೈಸಿದರು.
ಕೋಟ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್, ಮಂಗಳೂರು ಇನ್ಫೋಸಿಸ್ ಸಂಸ್ಥೆಯ ವಾಸುದೇವ ಕಾಮತ್, ಉದ್ಯಮಿ ಕೃಷ್ಣಪ್ರಸಾದ್ ಅಡ್ಯಂತಾಯ, ಬೆಂಗಳೂರಿನ ಟೆಕ್ಸೆಲ್ ಸಂಸ್ಥೆಯ ಎಂಡಿ ಹರೀಶ್ ರಾಯಸ್, ಉದ್ಯಮಿಗಳಾದ ಬಿಲ್ಲಾಡಿ ಸೀತಾರಾಮ ಶೆಟ್ಟಿ, ಸಜಿತ್ ಹೆಗ್ಡೆ, ಪಿ. ಪುರುಷೋತ್ತಮ ಶೆಟ್ಟಿ, ವಿಶ್ವನಾಥ ಶೆಣೈ, ಪ್ರೇರಣ ಇನ್ಫೋಸಿಸ್ ಫೌಂಡೇಶನ್‌ನ ರವಿರಾಜ ಬೆಳ್ಮ, ನಿವೃತ್ತ ಪ್ರಾಚಾರ್ಯ ಎ. ರಘುಪತಿ ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಮಾಜಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ವಿ.ಜಿ.ಶೆಟ್ಟಿ , ಮೈಲೈಫ್ ಹುಬ್ಬಳ್ಳಿಯ ಪ್ರವೀಣ್ ವಿ. ಗುಡಿ, ಅರುಣ್ ಕುಮಾರ್, ಬಂಟರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ , ಉಮೇಶ್ ಭಟ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವಿಸಿ, ಪ್ರತಿಭೆ, ಬಡತನ ಮಾತ್ರ ಮಾನದಂಡವಾಗಿದ್ದು ಈವರೆಗೆ ವಿದ್ಯಾನಿಧಿಯಲ್ಲದೇ ಸೋಲಾರ್ ಲೈಟ್, ಮೊಬೈಲ್, ಗ್ಯಾಸ್ ಇತ್ಯಾದಿ ನೀಡಲಾಗಿದೆ. 44 ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಈ ವರ್ಷ 9 ವಿದ್ಯಾರ್ಥಿಗಳಿಗೆ 47 ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಲಾಗಿದೆ ಎಂದರು. ಭುವನ್‌ಪ್ರಸಾದ್ ಹೆಗ್ಡೆ ದೃಢಸಂಕಲ್ಪ ಬೋಧಿಸಿದರು.