Advertisement

Kundapura ಪ್ರವಾಸಿ ಬಂಗಲೆ: 4.5 ಕೋಟಿ ರೂಪಾಯಿಗಳ ಅಂದಾಜು ಪಟ್ಟಿ ಸಿದ್ಧ

01:07 PM Sep 30, 2024 | Team Udayavani |

ಕುಂದಾಪುರ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇನ್ನೂ ಹಳೆಯ ಪ್ರವಾಸಿ ಬಂಗಲೆ ಉಳಿದಿರುವುದು ಕುಂದಾಪುರದಲ್ಲಿ ಮಾತ್ರ. ಬೇರೆಲ್ಲ ಕಡೆ ಹೊಸ ಪ್ರವಾಸಿ ಬಂಗಲೆಗಳು ನಿರ್ಮಾಣವಾಗಿವೆ. ಇಲ್ಲೂ ಹೊಸದಾಗಿ ನಿರ್ಮಿಸಬೇಕೆಂಬ ಬೇಡಿಕೆಗೆ ಕೊನೆಗೂ ಸರಕಾರ ಸ್ಪಂದಿಸಿದೆ. 4.5 ಕೋ.ರೂ.ಗಳ ಅಂದಾಜುಪಟ್ಟಿ ತಯಾರಾಗಿದ್ದು, 3 ಕೋ.ರೂ. ಮಂಜೂರಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಜಂಟಿ ಪ್ರಯತ್ನದಿಂದ ಪ್ರವಾಸಿ ಮಂದಿರ ಹೊಸ ರೂಪ ಪಡೆಯಲಿದೆ. ಈ ಮೂಲಕ ಕುಂದಾಪುರದ ರಾಜಕೀಯ ಅಭಿವೃದ್ಧಿಯ ದೃಷ್ಟಿಯಲ್ಲಿ ಹೊಸಭಾಷ್ಯ ಬರೆಯಲಿದೆ.

Advertisement

ಈ ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟರು ಶಾಸಕರಾಗಿದ್ದಾಗ ಈ ಬಗ್ಗೆ ಪ್ರಯತ್ನಗಳು ನಡೆದಿದ್ದವು. ಅಂದಾಜು ಪಟ್ಟಿಯೂ ಆಗಿತ್ತು. 3 ಕೋ.ರೂ.ಗಳ ಪ್ರವಾಸಿ ಬಂಗಲೆ ನಿರ್ಮಾಣವಾಗಲಿದೆ ಎಂಬ ಮಾಹಿತಿಯೂ ಹಬ್ಬಿತ್ತು. ಆದರೆ ಸರಕಾರದಿಂದ ಮಂಜೂರಾತಿ ದೊರೆಯಲಿಲ್ಲ, ಸರಕಾರದ ಅವಧಿ ಮುಗಿಯಿತು, ಚುನಾವಣೆ ಬಂತು, ಹಾಲಾಡಿಯವರು ಸ್ಪರ್ಧಿಸಲಿಲ್ಲ ಹೀಗೆ ಬೇರೆ ಬೇರೆ ಕಾರಣಗಳು ಹೊಸ ಪ್ರವಾಸಿ ಬಂಗಲೆ ನಿರ್ಮಾಣ ಬಾಕಿಯಾಗಲು ಕೂಡಿಕೊಂಡವು.

ಹಳೆಯ ಕಟ್ಟಡ
ಈಗ ಕುಂದಾಪುರದಲ್ಲಿ ಇರುವ ಪ್ರವಾಸಿ ಬಂಗಲೆ ಅತ್ಯಂತ ಹಳೆಯ ಪ್ರವಾಸಿ ಬಂಗಲೆಯಾಗಿದೆ. ಬೇರೆ ತಾಲೂಕು ಕೇಂದ್ರಗಳಲ್ಲಿ ಇದ್ದಂತೆಯೇ ಬ್ರಿಟಿಷ್‌ ಕಾಲದ ಮಾದರಿಯ ಬಂಗಲೆ. ಇದರ ಪಕ್ಕದಲ್ಲಿ ಸಣ್ಣ ಹೊಸ ಕಟ್ಟಡ ಇದ್ದರೂ ಹಳೆಯ ಕಟ್ಟಡದ ಬದಲು ನೂತನ ಬಂಗಲೆ ನಿರ್ಮಾಣದ ಬೇಡಿಕೆ ಈ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಸಚಿವರು, ಅಧಿಕಾರಿಗಳು ಬಂದಾಗ ಬಂಗಲೆಯ ಅಗತ್ಯ ಇರುತ್ತದೆ. ಕುಂದಾಪುರವು ಉಪ ವಿಭಾಗದ ಕೇಂದ್ರವಾಗಿದ್ದು ಅನೇಕ ಉಪವಿಭಾಗ ಮಟ್ಟದ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಉಪವಿಭಾಗದ ಕೇಂದ್ರವಾಗಿರುವ ಕುಂದಾಪುರದಲ್ಲಿ ಮಾತ್ರ 2 ಕೊಠಡಿಯ ಹಳೆಯ ಪ್ರವಾಸಿ ಮಂದಿರವಿದೆ.

ಮನವಿ
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕುಂದಾಪುರದಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣ ಕುರಿತು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಹೊರತುಪಡಿಸಿ ಉಳಿದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಳೆ ಪ್ರವಾಸಿ ಮಂದಿರರ ಜತೆ ಹೊಸ ಪ್ರವಾಸಿ ಮಂದಿರಗಳು ನಿರ್ಮಾಣವಾಗಿದೆ. ಇಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಿಸಲು ಸ್ಥಳಾವಕಾಶವಿದ್ದು ಸಾರ್ವಜನಿಕರ ಬೇಡಿಕೆಯಿರುವುದಾಗಿ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ ಶೆಟ್ಟಿಯವರು ಮನವಿ ಮಾಡಿದ್ದು, ಆದ್ಯತೆಯ ಮೇರೆಗೆ ಕುಂದಾಪುರಕ್ಕೆ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಂಜೂರಾತಿಯನ್ನು ನೀಡಿ ಸೂಕ್ತ ಆದೇಶ ಮಾಡಬೇಕೆಂದು ಭಂಡಾರಿ ಅವರು ಮನವಿ ಮಾಡಿದ್ದರು. ಇದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಸ್ಪಂದಿಸಿದ್ದು 3 ಕೋ.ರೂ. ಅನುದಾನ ಮಂಜೂರಾಗಿದೆ.

ಮೊತ್ತ ಹೆಚ್ಚಳ
3 ಕೋಟಿ ರೂ. ಮಂಜೂರಾಗಿದ್ದು ಒಟ್ಟು ಮೊತ್ತ ಹೆಚ್ಚಳವಾಗುವುದರಿಂದ 4.5 ಕೋಟಿ ರೂ. ಮಂಜೂರು ಮಾಡುವಂತೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಮಾಡಿದ್ದಾರೆ. ಎರಡು ಮಾಳಿಗೆಗಳ ಕಟ್ಟಡ ಕರಾವಳಿಯ ವಾತಾವರಣಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು. ಇದಕ್ಕಾಗಿ 4.5 ಕೋ.ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ಆದ್ದರಿಂದ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕರು ಮಾಡಿದ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Advertisement

ಅವಶ್ಯವಿದೆ
ಅಧಿಕಾರಿಗಳ ಭೇಟಿ ಸಂದರ್ಭ, ಸಚಿವರ ಭೇಟಿ ಸಂದರ್ಭ ಪ್ರವಾಸಿ ಬಂಗಲೆಯ ಅವಶ್ಯವಿದೆ. ಸಚಿವರು, ಅಧಿಕಾರಿಗಳು ಬಂದಾಗ, ಸಭೆ ಇದ್ದರೆ, ಅಹವಾಲು  ಸ್ವೀಕಾರ ಇದ್ದರೆ ಜನರ ಒತ್ತಡ ಹೆಚ್ಚಿರುತ್ತದೆ. ಅದಿಲ್ಲದೇ ಇದ್ದರೂ ಅವರ ಭೇಟಿಗಾಗಿ ಬರುವ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಸಂಖ್ಯೆ ಹೆಚ್ಚಿರುತ್ತದೆ. ಇವರೆಲ್ಲರಿಗಾಗಿ ವಿಶಾಲವಾದ ಪ್ರವಾಸಿ ಬಂಗಲೆಯ ಅಗತ್ಯವಿದೆ. ಹೆಚ್ಚು ಕೊಠಡಿಗಳ ಅವಶ್ಯವೂ ಇದೆ. ಇಲ್ಲದೇ ಇದ್ದರೆ ಖಾಸಗಿ ಹೊಟೇಲ್‌, ಸಭಾಂಗಣದ ಮೊರೆ ಹೋಗಬೇಕಾಗುತ್ತದೆ. ಸರಕಾರಿ ಬೊಕ್ಕಸಕ್ಕೆ ನಷ್ಟ ಅಥವಾ ಅದನ್ನು ಏರ್ಪಾಡು ಮಾಡುವ ಅಧಿಕಾರಿಗೆ ನಷ್ಟ. ಯಾವುದೇ ಅಧಿಕಾರಿ ಇಂತಹ ದೊಡ್ಡ ಮಟ್ಟದ ಏರ್ಪಾಟಿಗೆ ಕೈಯಿಂದ ಅಥವಾ ತನ್ನ ವೇತನದಿಂದ ಖರ್ಚು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅದು ಇನ್ಯಾರಿಗೋ ಪರೋಕ್ಷ ಬೇಡಿಕೆಯೇ ಆಗಿರುತ್ತದೆ. ಇದರ ತಡೆಗಾಗಿಯಾದರೂ ಹೊಸ ಪ್ರವಾಸಿ ಬಂಗಲೆ ನಿರ್ಮಾಣದ ಅಗತ್ಯವಿದೆ.

ಅಂದಾಜು ಪಟ್ಟಿ
ಕುಂದಾಪುರದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ 3 ಕೋ.ರೂ. ಅನುದಾನ ಮಂಜೂರಾಗಿದ್ದು 4.5 ಕೋ.ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ.
-ರಾಮಣ್ಣ ಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next