Advertisement

Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್‌ ಪರದಾಟ!

06:23 PM Sep 26, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯು ಶೈಕ್ಷಣಿಕ ಜಿಲ್ಲೆಯಾಗಿ ಬರೋಬರಿ 18 ವರ್ಷ ಕಳೆಯುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ. ಆದರೆ, ಕಾಲಕಾಲಕ್ಕೆ ಶಿಕ್ಷಣ ಕ್ಷೇತ್ರದ ಬದಲಾವಣೆ, ಶಿಕ್ಷಣ ಕ್ರಮಗಳ ಬಗ್ಗೆ ಶಿಕ್ಷಕರನ್ನು ತರಬೇತಿ ಮೂಲಕ ಸಜ್ಜುಗೊಳಿಸುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರಕ್ಕೆ ಮಾತ್ರ ಇಂದಿಗೂ ಸ್ವಂತ ಕಟ್ಟಡ ಇಲ್ಲ.

Advertisement

ಹೌದು, ಶೈಕ್ಷಣಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯು ಸಾಕಷ್ಟು ಸಾಧನೆಗಳನ್ನು ಮಾಡಿದೆ. ಅನೇಕ ಸಾಧಕರನ್ನು ಹುಟ್ಟುಹಾಕಿದೆ. ಆದರೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡು 18 ವರ್ಷ ಕಳೆದಿದೆ. ಆದರೆ ಅಂದಿನಿಂದ ಇಂದಿನವರೆಗೂ ಡಯಟ್‌ಗೆ ಒಂದು ಸ್ವಂತ ಕಟ್ಟಡ ಇಲ್ಲದೇ ತರಬೇತಿ ಕಾರ್ಯಗಳಿಗೆ ಪರದಾಡಬೇಕಿದೆ.

ಕಿರಿದಾದ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ: ರಾಜ್ಯ ಮಟ್ಟದಲ್ಲಿ ಶಿಕ್ಷಣ ತರಬೇತಿ ಹಾಗೂ ಸಂಶೋಧನಾ ಕೇಂದ್ರ ಇದ್ದರೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಶಿಕ್ಷಣ ತರಬೇತಿ ಕೇಂದ್ರ (ಡಯಟ್‌) ಕಾರ್ಯನಿರ್ವಹಿಸುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪಾಠ, ಪ್ರವಚನ ಮಾಡುವ ಶಿಕ್ಷಕರಿಗೆ ಸರ್ಕಾರದ ಮಾರ್ಗದರ್ಶನದಂತೆ ಶೈಕ್ಷಣಿಕ ವ್ಯವಸ್ಥೆಯ ಬದಲಾದ ಕ್ರಮಗಳ ಬಗ್ಗೆ ತರಬೇತಿ ಇದ್ದೇ ಇರುತ್ತದೆ. ಆದರೆ ಡಯಟ್‌ಗೆ ಸ್ವಂತ ಕಟ್ಟಡ ಇಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದಾಗನಿಂದ ಮೂಲ ಸೌಕರ್ಯಗಳು ಇಲ್ಲದೇ ಕಿಷ್ಕಿಂದೆ ಯಂತಹ ಕಟ್ಟಡಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಡಯಟ್‌ ಉಪನ್ಯಾಸಕರದಾಗಿದೆ.

ಚಿಕ್ಕಬಳ್ಳಾಪುರ ಡಯಟ್‌ ಈ ಮೊದಲು ನಗರದ ಹೊರ ವಲಯದ ಅಗಲಗುರ್ಕಿ ಸಮೀಪ ಇದ್ದ ಸರ್ಕಾರಿ ದೈಹಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಇತ್ತು. ಅಲ್ಲಿಂದ ಚಿಕ್ಕಬಳ್ಳಾಪುರ ನಗರಕ್ಕೆ ವರ್ಗಾವಣೆಗೊಂಡ ಬಳಿಕ ನಗರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಹಳೆಯ ಸರ್ಕಾರಿ ಶಾಲಾ ಕೊಠಡಿಗಳಲ್ಲಿ ಮೂಲ ಸೌಕರ್ಯ ವಂಚಿತ ಕಟ್ಟಡದಲ್ಲಿ ಸದ್ಯ ಡಯಟ್‌ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ಇಲ್ಲದ ಕಾರಣ ಡಯಟ್‌ನ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.

30ಕ್ಕೂ ಹೆಚ್ಚು ಉಪನ್ಯಾಸಕರು, ಸಿಬಂದಿಗೆ 3 ಕೊಠಡಿ! : ಚಿಕ್ಕಬಳ್ಳಾಪುರ ಶಿಕ್ಷಣ ತರಬೇತಿ ಕೇಂದ್ರ (ಡಯಟ್‌) ಜಿಲ್ಲೆಯ ಶಿಕ್ಷಕರಿಗೆ ತರಬೇತಿ ಕೊಡಲು ಬರೋಬ್ಬರಿ 9 ಮಂದಿ ಹಿರಿಯ ಉಪನ್ಯಾಸಕರು, 16 ಮಂದಿ ಉಪನ್ಯಾಸಕರು ಇದ್ದಾರೆ. ಜೊತೆಗೆ ಪ್ರಾಂಶುಪಾಲರು, ಗ್ರಂಥಪಾಲಕರು, ಡಿ ಗ್ರೂಪ್‌ ನೌಕರರು ಹೀಗೆ ಸುಮಾರು 30 ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಜಿಲ್ಲಾ ಡಯಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ತಾತ್ಕಲಿಕವಾಗಿ ಒದಗಿಸಿರುವ ಕಟ್ಟಡದಲ್ಲಿ ಕೇವಲ 3 ಕೊಠಡಿಗಳು ಮಾತ್ರ ಇದ್ದು, ಡಯಟ್‌ ಉಪನ್ಯಾಸಕರು ತರಬೇತಿ ಸೇರಿದಂತೆ ವಿವಿಧ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಜಾಗದ ಕೊರತೆಯಿಂದ ನಿತ್ಯ ಪರದಾಡಬೇಕಿದೆ.

Advertisement

ಜಿಲ್ಲೆಯ ಶಿಕ್ಷಕರಿಗೆ ನಿತ್ಯ ತರಬೇತಿ ನೀಡುವ ಡಯಟ್‌ ಕೇಂದ್ರಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ತುಂಬ ಇದ್ದು, ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಅವರಿಗೆ ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಾದ ಜಮೀನು ಒದಗಿಸಿ ಕೊಡುವಂತೆ ಮನವಿ ಮಾಡಿದ್ದೇವೆ. ಸಚಿವರು ಸಕಾರತ್ಮಾಕವಾಗಿ ಸ್ಪಂದಿಸಿದ್ದಾರೆ. ●ಸುಬ್ಬಾರೆಡ್ಡಿ, ಡಯಟ್‌ ಉಪನ್ಯಾಸಕರು, ಚಿಕ್ಕಬಳ್ಳಾಪುರ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next