Advertisement
ಕಳೆದ 2 ದಿನಗಳಿಂದ ಉಂಟಾದ ಕಡಲ್ಕೊರೆತದಿಂದಾಗಿ ಮರವಂತೆಯ ಹೊರ ಬಂದರು ಪ್ರದೇಶದ ವಿರುದ್ಧ ದಿಕ್ಕಿನಲ್ಲಿ ಸುಮಾರು 150ರಿಂದ 200 ಮೀ.ನಷ್ಟು ಭೂಪ್ರದೇಶದಷ್ಟು ಭಾಗವನ್ನು ಕಡಲು ಆಕ್ರಮಿಸಿದ್ದು, ರವಿವಾರ ಇದು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿತ್ತು. ಆದರೆ ರವಿವಾರ ಇಲ್ಲಿನ 200-250 ಮಂದಿ ಮೀನು ಗಾರರು ಸೇರಿ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ನಿರಂತರವಾಗಿ 1 ಟನ್ ತೂಕದ ಬೃಹತ್ ಗೋಣಿಚೀಲಗಳಿಗೆ ಎರಡು ಜೆಸಿಬಿಗಳ ಸಹಾಯದಿಂದ ಮರಳನ್ನು ತುಂಬಿಸಿ, ಇನ್ನಷ್ಟು ಕುಸಿಯದಂತೆ ತಡೆಗೋಡೆ ನಿರ್ಮಿಸಿದರು.
ಮರವಂತೆಯ ಚಂದ್ರ ಖಾರ್ವಿ ಅವರ ಮನೆಯಿಂದ ಆರಂಭಗೊಂಡು, ಎಂ.ಎಸ್. ಖಾರ್ವಿ ಅವರ ಮನೆಯವರೆಗೆ (ಸುಮಾರು 250 ಮೀ. ನಷ್ಟು ದೂರ) ಗೋಣಿ ಚೀಲಗಳನ್ನು ಉದ್ದಕ್ಕೆ ಇಡಲಾಗಿದ್ದು, ಇದರಿಂದ ಇನ್ನಷ್ಟು ಹಾನಿ ಸಂಭವಿಸುವುದು ತಪ್ಪಿದಂತಾಗಿದೆ. ಎಡೆಬಿಡದೆ ಸುರಿಯುತ್ತಿದ್ದ ಮಳೆ, ಅಬ್ಬರದಿಂದ ಅಪ್ಪಳಿಸುತ್ತಿದ್ದ ಅಲೆಗಳನ್ನು ಲೆಕ್ಕಿಸದೆ ಯುವಕರು ಕ್ಷಣಮಾತ್ರದಲ್ಲಿ ಒಗ್ಗಟ್ಟಾಗಿ ಸೇರಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ. ಮೀನುಗಾರ ಯುವಕರ ಈ ಸಮಯಪ್ರಜ್ಞೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ನಿರಂತರ ಮಳೆಯಿಂದಾಗಿ ಚಪ್ಪಡಿ ಕಲ್ಲು ಒಡೆಯುವ ಕಾರ್ಯಕ್ಕೆ ಅಡ್ಡಿಯಾಗಿದ್ದು, ಇದ ರಿಂದಾಗಿ ರವಿವಾರ ಮರವಂತೆಗೆ ಕುಸಿಯುತ್ತಿರುವ ಕಡೆಗೆ ಹಾಕಲು ಕಲ್ಲು ಬಂದಿರಲಿಲ್ಲ. ಇದನ್ನರಿತ ಇಲ್ಲಿನ ಸ್ಥಳೀಯ ಯುವಕರೆಲ್ಲ ಸೇರಿ ಗೋಣಿ ಚೀಲಗಳನ್ನು ಇಟ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
– ಮೋಹನ್ ಖಾರ್ವಿ, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮರವಂತೆ