Advertisement

Kundapura :ಕಂಚುಗೋಡು ತೀರವಾಸಿಗಳ ಗೋಳು ಕೇಳ್ಳೋರಿಲ್ಲ

05:38 PM Oct 20, 2024 | Team Udayavani |

ಕುಂದಾಪುರ: ಹೊಸಾಡು ಗ್ರಾಮದ ಕಂಚುಗೋಡಿನ ಕಡಲ ತೀರದ ನಿವಾಸಿಗಳು ಅಲೆಗಳ ಅಬ್ಬರದಲ್ಲಿ ನೆಲ – ನೆಲೆ ಕೊಚ್ಚಿ ಹೋಗಬಹುದೆಂಬ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ದಶಕಗಳಿಂದ ಕಾಡುತ್ತಿರುವ ಇಲ್ಲಿನ ಕಡಲ್ಕೊರೆತ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಶಾಶ್ವತ ತಡೆಗೋಡೆ ಬೇಡಿಕೆ ಅನ್ನುವುದು ಇಲ್ಲಿನ ಜನರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಮಳೆ ಬಿರುಸಾದರೆ, ಚಂಡಮಾರುತ, ತೂಫಾನ್‌ ಮುನ್ಸೂಚನೆ ಬಂದರೆ ಇಲ್ಲಿನ ನಿವಾಸಿಗರಲ್ಲಿ ಭಯ ಶುರುವಾಗುತ್ತದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಕಡಲು ರುದ್ರನರ್ತನ ಮಾಡುತ್ತಿದ್ದು, ಕೆಲವು ಮನೆಗಳು ಅಪಾಯದಲ್ಲಿವೆ.

Advertisement

ಕಂಚುಗೋಡು ಪ್ರದೇಶದಲ್ಲಿ ಕಳೆದ 7-8 ವರ್ಷಗಳಿಂದ ಶಾಶ್ವತವಾದ ತಡೆಗೋಡೆ ನಿರ್ಮಿಸಬೇಕು ಅನ್ನುವ ಬೇಡಿಕೆಯನ್ನು ಯಾರೂ ಈವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಸುಮಾರು 500 ಮೀ. ದೂರದವರೆಗೆ ತಡೆಗೋಡೆ ಆದರೆ, ಇಲ್ಲಿನ ನಿವಾಸಿಗರ ಬಹುದೊಡ್ಡ ಬೇಡಿಕೆಯೊಂದು ಈಡೇರಲಿದ್ದು, ಮಾತ್ರವಲ್ಲದೆ ಜನ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಬಹುದು.

45 ಮನೆಗಳಿಗೆ ಆತಂಕ ತಪ್ಪಿದ್ದಲ್ಲ
ಕಂಚುಗೋಡು ಕಡಲ ತೀರದಲ್ಲಿ ನೆಲೆಸಿರುವ ಸುಮಾರು 45 ಮನೆಗಳಿಗೆ ಇಲ್ಲಿ ತಡೆಗೋಡೆ ಆಗದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಒಂದಲ್ಲ ಒಂದು ದಿನ ಅಲೆಗಳ ಅಬ್ಬರಕ್ಕೆ ಬದುಕೇ ಕೊಚ್ಚಿ ಹೋಗಬಹುದು ಅನ್ನುವ ಆತಂಕ ಇಲ್ಲಿನವರದು. ಅದರಲ್ಲೂ 7-8 ಮನೆಗಳಂತೂ ತೀರ ಸನಿಹದಲ್ಲಿದ್ದು, ರಾತ್ರಿ ವೇಳೆ ನಿದ್ದೆ ಬಿಟ್ಟು ಕುಳಿತು ಕಾಯಬೇಕಾದ ಸ್ಥಿತಿಯಿದೆ.

ಬೇರೆಡೆ ತಡೆಗೋಡೆ; ಇಲ್ಲಿ ಸಮಸ್ಯೆ ಸೃಷ್ಟಿ
ಕಡಲತಡಿಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆ, ಸಮುದ್ರವೂ ಅದಕ್ಕೆ ಪ್ರತಿರೋಧ ತೋರುತ್ತದೆ. ತ್ರಾಸಿ – ಮರವಂತೆ ಬೀಚ್‌ ಅಭಿವೃದ್ಧಿಗೆ ನಿರ್ಮಿಸಿದ ಟಿ ಆಕಾರದ ಬ್ರೇಕ್‌ವಾಟರ್‌, ಗುಜ್ಜಾಡಿಯ ಬೆಣ್ಗೆರೆ ಪ್ರದೇಶದಲ್ಲಿ ನಿರ್ಮಿಸಿದ ತಡೆಗೋಡೆಯಿಂದಾಗಿ ಮಧ್ಯ ಉಳಿದ ಪ್ರದೇಶವಾದ ಹೊಸಾಡು ಗ್ರಾಮದ ಕಂಚುಗೋಡಿನಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇಲ್ಲಿ ಕಡಲು ಸುಮಾರು 50 ಮೀ. ನಷ್ಟು ಮುಂದೆ ಬಂದಿದೆ. ತ್ರಾಸಿ, ಮರವಂತೆ, ಬೆಣ್ಗೆರೆಯ ಅಲೆಗಳ ಒತ್ತಡ ಜಾಸ್ತಿಯಾಗಿ, ಕಳೆದ 7- 8 ವರ್ಷಗಳಿಂದ ಕಂಚುಗೋಡಿನ ತೀರಕ್ಕೆ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಇದರಿಂದ ತೂಫಾನ್‌, ಅಬ್ಬರದ ಮಳೆ ಬಂದರೆ ಸಾಕು ಇಲ್ಲಿನ ಜನರಿಗೆ ಭಯ ಶುರುವಾಗುತ್ತದೆ.

Advertisement

ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ
ಉಡುಪಿ ಜಿಲ್ಲೆಯ ಕಡಲ್ಕೊರೆತ ಸಂಭವಿಸುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ 5 ಕೋ.ರೂ. ಅನುದಾನ ನೀಡುವುದಾಗಿ ಸಚಿವರು ಹೇಳಿದ್ದು, ಅದರಂತೆ ಕಂಚುಗೋಡು ಸಹಿತ ವಿವಿಧೆಡೆಗಳ ಪಟ್ಟಿ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದೀಗ ಎಲ್ಲ ಕಡೆಯಿಂದಲೂ ಅನುಮೋದನೆ ಸಿಕ್ಕಿ, ಆರ್ಥಿಕ ಇಲಾಖೆಯಲ್ಲಿದೆ. ಅಲ್ಲಿ ಮಂಜೂರಾತಿ ಸಿಕ್ಕರೆ ಹಣ ಬಿಡುಗಡೆಯಾಗಲಿದೆ.
– ಶೋಭಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

ಕಡಲ ಮುಂದೆ ಕಣ್ಣೀರ ಕತೆ
ನಾವೇನು ಮಾಡುವುದು?

ರಾತ್ರಿ ನಿದ್ದೆಯೇ ಬರುವುದಿಲ್ಲ ಮೊನ್ನೆ ಸುಮಾರು ಮೇಲೆ ನೀರು ಬಂದಿತ್ತು. ಯಾರ್ಯಾರೋ ಬಂದು ಹೋದರು. ಮಾಡುತ್ತೇವೆ ಅಂತ ಹೇಳಿ ಹೋಗುತ್ತಾರೆ. ಮತ್ತೆ ಏನು ಮಾಡುವುದೇ ಇಲ್ಲ. ಈ ರೀತಿ ಗಾಳಿ, ಅಲೆಗಳ ಅಬ್ಬರ, ಚಂಡಮಾರುತ ಬಂದರೆ ನಾವು ಏನು ಮಾಡುವುದು? ಬಾಕಿ ಎಲ್ಲ ಬದಿಗೆ ಕಲ್ಲು ಹಾಕಿದ್ದಾರೆ. ಇಲ್ಲಿ ಮಾತ್ರ ಏನು ಮಾಡಿಲ್ಲ ಎನ್ನುವುದಾಗಿ ಕಂಚುಗೋಡಿನ ಸುಶೀಲಾ ಖಾರ್ವಿ ಅಳಲು ತೋಡಿಕೊಳ್ಳುತ್ತಾರೆ.

ಇರಲು ಭಯವಾಗುತ್ತದೆ..
ತೌಖ್ತೆ ಚಂಡಮಾರುತದ ವೇಳೆ ಬಚ್ಚಲು ಮನೆಯೂ ಕೊಚ್ಚಿ ಹೋಗಿತ್ತು. ಇಲ್ಲಿಗೆ ತಡೆಗೋಡೆ ಮಾಡಿಕೊಡಲಿ. ನಮ್ಮ ಬದುಕು ರಕ್ಷಿಸಲಿ ಎನ್ನುತ್ತಾ ಸಂಕಷ್ಟ ತೋಡಿಕೊಂಡರು ಅಲ್ಲಿನ ಶಾಂತಿ ಖಾರ್ವಿ.

ಎಲ್ಲ ಬಂದರೂ ಕೆಲಸ ಆಗಿಲ್ಲ
ಮಕ್ಕಳು, ಹಿರಿಯರನ್ನು ಕರೆದುಕೊಂಡು ರಾತ್ರಿ ಎಲ್ಲಿಗೆ ಅಂತ ಹೋಗುವುದು. ಸುಮಾರು ವರ್ಷಗಳಿಂದ ಶಾಶ್ವತ ತಡೆಗೋಡೆಗಾಗಿ ಹೋರಾಟ ಮಾಡುತ್ತಿದ್ದೇವೆ. ಸಾಕಾಯಿತು. ಆದರೆ ಈವರೆಗೆ ನಮ್ಮ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಯಾರೊಬ್ಬರು ಈವರೆಗೆ ಸ್ಪಂದಿಸಿಲ್ಲ, ಇಲ್ಲಿಗೆ ಡಿಸಿ, ಅಧಿಕಾರಿಗಳು, ಸಂಸದರು, ಶಾಸಕರು ಎಲ್ಲರೂ ಬಂದರೂ ಯಾವ ಕೆಲಸವೂ ಆಗಿಲ್ಲ. 500 ಮೀ. ನಷ್ಟು ತಡೆಗೋಡೆ ಬೇಕು ಎನ್ನುತ್ತಾರೆ ಶಿವರಾಜ್‌ ಖಾರ್ವಿ ಕಂಚುಗೋಡು.

ಕಡಲ್ಕೊರೆತದಿಂದ ದಡದಲ್ಲಿಟ್ಟ ದೋಣಿ ಮರಳಿನಲ್ಲಿ ಹುದುಗಿರುವುದು.

Advertisement

Udayavani is now on Telegram. Click here to join our channel and stay updated with the latest news.

Next