Advertisement

ಕುಂದಾಪುರ: ತಾ|ಸಾಹಿತ್ಯ ಸಮ್ಮೇಳನ ಅನಿಶ್ಚಿತತೆಯಲ್ಲಿ

08:57 PM Jan 08, 2021 | Team Udayavani |

ಕುಂದಾಪುರ : ಜಿಲ್ಲೆಯ ವಿವಿಧೆಡೆ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ದಿನ ನಿಗದಿಯಾಗಿದೆ. ಜಿಲ್ಲಾ ಸಮ್ಮೇಳನಕ್ಕೂ ಮುಹೂರ್ತ ವಾಗಿದೆ. ಕೋವಿಡ್ ಆತಂಕದ ನಡುವೆ ಕನ್ನಡದ ಕಂಪು ಹರಡಲು ಹಿರಿ-ಕಿರಿಯ ಸಾಹಿತಿಗಳು ಕಾತರರಾಗಿದ್ದಾರೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಅನಿಶ್ಚಿತತೆಯಲ್ಲಿದೆ.

Advertisement

ಅನುದಾನ ರದ್ದು :

2019ರಲ್ಲಿ ಭೀಕರ ನೆರೆಗೆ ತುತ್ತಾದ ಉತ್ತರ ಕರ್ನಾಟಕ ಭಾಗದ ಪುನಶ್ಚೇತನಕ್ಕೆ ಪರಿಹಾರ ನೀಡುವ ಕಾರಣಕ್ಕೆ ಈ ಬಾರಿ ರಾಜ್ಯ ಸರಕಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ 2019ರಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಸಮ್ಮೇಳನ ನಡೆಯಲಿಲ್ಲ. 2018ರಲ್ಲಿ ಹೊಸಾಡು ಶಾಲೆಯಲ್ಲಿ ಕುಂದಾಪುರ ತಾಲೂಕಿನ 17 ನೇ ಸಾಹಿತ್ಯ ಸಮ್ಮೇಳನ ನಡೆದಿದ್ದರೆ, ಕಂಬದಕೋಣೆಯ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೈಂದೂರು ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.

ಕೋವಿಡ್ :

ಕಳೆದ ವರ್ಷ ಕೋವಿಡ್ ಕಾರಣದಿಂದ ಸಮ್ಮೇಳನ ನಡೆಯಲಿಲ್ಲ. ಜತೆಗೆ ಸರಕಾರ ಅನುದಾನ ನೀಡುವುದು ಘೋಷಣೆಯಾಗಿರದಿದ್ದ ಕಾರಣ ಸರಕಾರಿ ಹಣವನ್ನು ನಂಬದೇ ಕಾರ್ಕಳ ಹಾಗೂ ಕಾಪು ತಾಲೂಕಿನಲ್ಲಷ್ಟೇ ಸಮ್ಮೇಳನ ನಡೆದಿತ್ತು. ಜಿಲ್ಲಾ ಸಮ್ಮೇಳನ ಮಾಬುಕಳದಲ್ಲಿ ನಡೆಯುವುದು ಎಂದು ನಿಗದಿಯಾಗಿದ್ದರೂ ಕೋವಿಡ್ ಕಾರಣದಿಂದ ನಡೆದಿರಲಿಲ್ಲ. ಆದರೆ ಸಮ್ಮೇಳನ ನಡೆಸಿದ ಕಾಪು ಹಾಗೂ ಕಾರ್ಕಳದ ಸಾಹಿತ್ಯ ಪರಿಷತ್ತು ಘಟಕಗಳಿಗೆ ತಲಾ 1 ಲಕ್ಷ ರೂ.ಗಳನ್ನು ಪರಿಷತ್ತು ನೀಡಿದೆ.

Advertisement

ತಾಲೂಕು ಸಮ್ಮೇಳನ :

ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ ಜ.24ರಂದು, ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಜ.26ರಂದು, ಕಾಪು ತಾಲೂಕು ಸಾಹಿತ್ಯ ಸಮ್ಮೇಳನ ಜ.29ರಂದು, ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ಜ.30ರಂದು, ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ ಜ.31ರಂದು ನಡೆಯಲಿದೆ. ಬೈಂದೂರು ಹಾಗೂ ಕುಂದಾಪುರದ ಸಮ್ಮೇಳನದ ದಿನಾಂಕ ನಿಗದಿಯಾಗಿಲ್ಲ. ಈ ಕುರಿತು ಯಾವುದೇ ಪೂರ್ವಭಾವಿ ಸಮಾಲೋಚನೆ ಯಾವುದೂ ನಡೆದಿಲ್ಲ.

ಅನುದಾನ :

ಪ್ರತಿ ವರ್ಷ ರಾಜ್ಯ ಸರಕಾರವು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತಾಲೂಕು ಸಂಘಗಳಿಗೆ ತಲಾ 1 ಲಕ್ಷ ರೂ. ನೀಡುತ್ತಿತ್ತು. ಆದರೆ 2019 ರಲ್ಲಿ ಬಾರಿ ಆ ಹಣವನ್ನು ಪ್ರಾಕೃತಿಕ ವಿಕೋಪದ ಪರಿಹಾರಕ್ಕಾಗಿ ವಿನಿಯೋಗಿಸಲು ಸರಕಾರ ಮುಂದಾಗಿತ್ತು. 2020 ರಲ್ಲಿ ಕೋವಿಡ್   ಬಂದಿತ್ತು. ಈ ವರ್ಷವಾದರೂ ಅನುದಾನ ದೊರೆಯಲಿದೆಯೇ ಎನ್ನುವ ಕುರಿತು ಇನ್ನೂ ಮಾಹಿತಿ ಬಂದಿಲ್ಲ. ಈ ಬಗ್ಗೆ ಈ ವಾರದಲ್ಲಿ ರಾಜ್ಯ ಸಾಹಿತ್ಯ ಪರಿಷತ್ತು ಸಭೆ ನಡೆಯಲಿದ್ದು ಅದರಲ್ಲಿ ಪೂರ್ಣ ಮಾಹಿತಿ ದೊರೆಯಲಿದೆ.

ಸರಕಾರದಿಂದ ಅನುದಾನ ಬರುವ ಕುರಿತು ಇನ್ನೂ ಮಾಹಿತಿ ಬಂದಿಲ್ಲ. ತಾಲೂಕು ಸಮ್ಮೇಳನಕ್ಕೆ ಸರಕಾರ ಹಣ ಕೊಟ್ಟರೂ ಕೊಡದೇ ಇದ್ದರೂ ಊರವರು, ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಮಾಡಬಹುದು. ಈಗ ಎಲ್ಲ ತಾಲೂಕುಗಳಲ್ಲಿ ಅದೇ ರೀತಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಂದಾಪುರ, ಬೈಂದೂರಿನಲ್ಲಿ ನಡೆಸುವ ಕುರಿತು ದಿನಾಂಕ ನಿಗದಿಯಾಗಲಿದೆ.   ನೀಲಾವರ ಸುರೇಂದ್ರ ಅಡಿಗ,  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next