ತೆಕ್ಕಟ್ಟೆ: ಕಲಿಕೆಯ ಜತೆಗೆ ಮಕ್ಕಳಿಗೆ ಸಂತಸದ ವಾತಾವರಣ ಕಲ್ಪಿಸುವುದು ಬಹಳ ಮುಖ್ಯವಾಗಿದೆ. ಸ್ವರ್ಗದಿಂದ ಈ ಜಗತ್ತಿಗೆ ಧರೆಗಿಳಿದ ವಿಶ್ವದೊಡೆಯ ಯೇಸು ದೇವ ಜಗತ್ತಿಗೆ ಶಾಂತಿ ಹಾಗೂ ಪ್ರೀತಿಯನ್ನು ನೀಡಿದ್ದಾನೆ. ದೇವ ಕಂದ ಯೇಸು ಕ್ರಿಸ್ತರ ಹಬ್ಬ ಕ್ರಿಸ್‌ಮಸ್‌ನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ ಎಂದು ಪ್ಯಾರಿಷ್ ಪ್ರೀಸ್ಟ್ ಸೇಂಟ್. ಪಿಯುಸ್ ಚರ್ಚ್ ಹಂಗಳೂರು ಇದರ ರೆ.ಫಾ. ಆಲ್ಬರ್ಟ್ ಕ್ರಾಸ್ಟಾ ಅವರು ಹೇಳಿದರು.
ಅವರು ಡಿ.24 ರಂದು ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಕುಂದಾಪುರದ ಸುಜ್ಞಾನ್ ಪಿಯು ಕಾಲೇಜು, ವಿದ್ಯಾರಣ್ಯ (ಲಿಟಲ್ ಸ್ಟಾರ್) ಇಂಗ್ಲಿಷ್ ಮೀಡಿಯಂ ಸ್ಕೂಲ್, ಯುನಿಟ್ಸ್ ಆಫ್ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಆಯೋಜಿಸಿದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ರಿಸ್‌ಮಸ್ ಎಂದರೆ ದೇವರು, ಆ ದೈವತ್ವವನ್ನು ಹಂಚಿಕೊಳ್ಳುವಿಕೆ. ಈ ನಿಟ್ಟಿನಲ್ಲಿ ದೈವತ್ವದಲ್ಲಿ ಪ್ರೀತಿ ಮತ್ತು ಶಾಂತಿ ಅಡಕವಾಗಿದ್ದು, ನಮ್ಮಲ್ಲಿ ಮನುಷತ್ವ,ಆಧ್ಯಾತ್ಮಿಕತೆ, ಮೌಲ್ಯಗಳಿಂದ ಉತ್ತುಂಗಕ್ಕೆ ಏರಿಸಲು ದೇವ ಕಂದ ಯೇಸು ಈ ಧರೆಗೆ ಇಳಿದಿದ್ದಾನೆ. ಎಲ್ಲಕ್ಕಿಂತ ಸರ್ವ ಶ್ರೇಷ್ಠವಾದುದು, ಪ್ರೀತಿಯಿಂದ ಎಲ್ಲವನ್ನು ಸಾಧಿಸಬಹುದು. ಪ್ರೀತಿ ಇದ್ದರೆ ಶಾಂತಿ ಸಮಾಧಾನ, ಪ್ರೀತಿ ಇದ್ದರೆ ಮಾತ್ರ ಜೀವನ. ಕ್ರಿಸ್‌ಮಸ್ ಹಬ್ಬ ಪ್ರೀತಿಯ ಹಂಚಿಕೆಯ ಹಬ್ಬವಾಗಿದೆ ಎಂದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ತ್ರಿವಿಕ್ರಮರು ಸವಾಲುಗಳನ್ನು ಎದುರಿಸಿ ಶಿಕ್ಷಣದಲ್ಲಿ ಸಾಧನೆ ಹಾದಿಯೆಡೆಗೆ ಸಾಗುತ್ತಿದ್ದಾರೆ. ಅದೆಷ್ಟೊ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣರಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಕ್ರ.ಪೂ. ದಲ್ಲಿ ಈ ಸಮಾಜದಲ್ಲಿದ್ದ ಮೂಡನಂಬಿಕೆಯನ್ನು ಹೋಗಲಾಡಿಸಿ, ಸಮಾಜದಲ್ಲಿ ವೈಚಾರಿಕವಾದ ಬದಲಾವಣೆ ತಂದವನು ಯೇಸು ದೇವ ಎಂದು ಹೇಳಿದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಸುಜ್ಞಾನ್ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಪರಿಸರದಲ್ಲಿ ಸೃಜನಶೀಲವಾದ ಕ್ರಿಸ್ತನ ಜನನ- ಸಂದೇಶವನ್ನು ಸಮಗ್ರವಾಗಿ ಬಿಂಬಿಸುವ ಆಕರ್ಷಕವಾದ ಗೋದಲಿ ಎಲ್ಲರ ಗಮನ ಸೆಳೆಯಿತು. ಸಂತಕ್ಲಾಸ್ ವೇಷ ಭೂಷಣವನ್ನು ತೊಟ್ಟ ವಿದ್ಯಾರ್ಥಿಗಳು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
ಪ್ರಾವ್ಯ ಶೆಟ್ಟಿ ಸ್ವಾಗತಿಸಿ, ಫಾತಿಮಾ ನಝೀಫಾ ನಿರೂಪಿಸಿ, ಶಿಕ್ಷಕಿ ಸಹನಾ ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕಿ ರೋಸಾ ಕ್ರಿಸ್‌ಮಸ್ ಸಂದೇಶ ಸಾರಿದರು. ಅನೀಶ್ ವಂದಿಸಿದರು.
ಸಮಾಜದ ಹಿರಿಯರು ಹಾಗೂ ಒಳ್ಳೆಯ ಮನಸ್ಸುಗಳ ಆಶೀರ್ವಾದವಿದೆ. ಗುರುಗಳು ದೇವರಿಗೆ ಸಮಾನ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಂದೇಶ ನೀಡಬೇಕು ಎನ್ನುವ ನಿಟ್ಟಿನಿಂದ ನಮ್ಮ ಸಂಸ್ಥೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಜತೆಗೆ ಒಳ್ಳೆಯ ಮನಸ್ಸುಗಳನ್ನು ಕಟ್ಟುವಂತಹ ಸಂಸ್ಕಾರಯುತವಾದ ಶಿಕ್ಷಣ ನೀಡುತ್ತಿದ್ದೇವೆ. ನಮ್ಮ ನಿಸ್ವಾರ್ಥವಾದ ಸೇವೆಗೆ ಹಾಗೂ ಗ್ರಾಮೀಣ ಭಾಗದಲ್ಲಿ ಬೆಳೆಯುತ್ತಿರುವ ಈ ಸಂಸ್ಥೆಗೆ ಸಮಾಜದ ಹಿರಿಯರು ಹಾಗೂ ಒಳ್ಳೆಯ ಮನಸ್ಸುಗಳ ಆಶೀರ್ವಾದವಿದೆ. – ಡಾ| ರಮೇಶ್ ಶೆಟ್ಟಿ ಅಧ್ಯಕ್ಷರು, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ (ರಿ.)