Advertisement

ಪ್ರಿಪೇಯ್ಡ್ ರಿಕ್ಷಾ ವ್ಯವಸ್ಥೆ ಆರಂಭಕ್ಕೆ ಬೇಡಿಕೆ

07:12 PM Feb 13, 2020 | Sriram |

ಕುಂದಾಪುರ: ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಬೇರೆ ಎಲ್ಲದಕ್ಕಿಂತ ರೈಲು ಪ್ರಯಾಣ ಅಗ್ಗವಾಗಿದ್ದರೂ ಕುಂದಾಪುರ ಭಾಗದ ರೈಲು ಪ್ರಯಾಣಿಕರು ಮಾತ್ರ ಮೂಡ್ಲಕಟ್ಟೆ ನಿಲ್ದಾಣದಿಂದ ಮನೆ ಸೇರಲು ದುಬಾರಿ ದರ ತೆರುವಂತಾಗಿದೆ. ಇದಕ್ಕಾಗಿ ಮೂಡ್ಲಕಟ್ಟೆಯಿಂದ ಕುಂದಾಪುರ ಸಹಿತ ಬೇರೆ ಬೇರೆ ಕಡೆಗಳಿಗೆ “ಪ್ರಿಪೇಯ್ಡ್ ರಿಕ್ಷಾ ವ್ಯವಸ್ಥೆ’ಯನ್ನು ಆರಂಭಿಸಬೇಕು ಎನ್ನುವ ಬೇಡಿಕೆ ರೈಲು ಪ್ರಯಾಣಿಕರದ್ದಾಗಿದೆ.

Advertisement

ಕಾರವಾರದಿಂದ ಕುಂದಾಪುರಕ್ಕೆ ಸ್ಥಳೀಯ (ಲೋಕಲ್‌) ರೈಲಿನಲ್ಲಿ 40 ರೂ. ಟಿಕೇಟು ದರ ಆಗಿದ್ದರೆ, ಗೋವಾದಿಂದ ಕುಂದಾಪುರಕ್ಕೆ ಕೇವಲ 60 ರೂ. ಅಷ್ಟೇ ಟಿಕೇಟ್‌ ಇದೆ. ಆದರೆ ಮೂಡ್ಲಕಟ್ಟೆಯಿಂದ ಕೇವಲ 5 ಕಿ.ಮೀ. ದೂರದ ಕುಂದಾಪುರಕ್ಕೆ ಬರಲು ರಿಕ್ಷಾಕ್ಕೆ 100 ರೂ. ವ್ಯಯಿಸಬೇಕಾದ ಅನಿವಾರ್ಯವಿದೆ. ಮೂಡ್ಲಕಟ್ಟೆ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಅಲ್ಲಿಂದ ಸುಮಾರು 1 ಕಿ.ಮೀ. ದೂರದ ಕಂದಾವರ ಗ್ರಾ.ಪಂ. ಸಮೀಪದ ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯವರೆಗೆ ನಡೆದುಕೊಂಡು ಬಂದರೆ ಕುಂದಾಪುರ ಕಡೆಗೆ ಸಂಚರಿಸುವ ಬಸ್‌ ಸಿಗುತ್ತದೆ. ಆದರೆ ದೂರ – ದೂರದ ಊರುಗಳಿಂದ ಬರುವ ಜನರು ಬ್ಯಾಗ್‌, ಮತ್ತಿತರ ಭಾರೀ ಗಾತ್ರದ ಲಗೇಜುಗಳು ಕೂಡ ಇರುವುದರಿಂದ ಅಲ್ಲಿಯವರೆಗೆ ನಡೆದುಕೊಂಡು ಹೋಗು ವುದು ತ್ರಾಸದಾಯಕವಾಗಿದೆ. ಈ ಕಾರಣಕ್ಕೆ ದುಬಾರಿ ದರ ಕೊಟ್ಟು ರಿಕ್ಷಾದಲ್ಲಿಯೇ ಪ್ರಯಾಣಿಸುವಂತಾಗಿದೆ.

ಬಸ್‌ ಸಂಚಾರವಿಲ್ಲ
ಈ ಮೊದಲು ಮೂಡ್ಲಕಟ್ಟೆ ರೈಲು ನಿಲ್ದಾಣಕ್ಕೆ 2-3 ಬಸ್‌ಗಳು ಬರುತ್ತಿದ್ದವು. ಈಗ ಬಸ್‌ ಸಂಚರಿಸುತ್ತಿಲ್ಲ, ಮುಖ್ಯ ರಸ್ತೆಯಲ್ಲಿ ಬಸ್‌ ಸಂಚರಿಸಿದರೂ ಮೂಡ್ಲಕಟ್ಟೆಯವರೆಗೆ ಯಾವುದೇ ಬಸ್‌ಗಳು ಬಂದು ಹೋಗುವುದಿಲ್ಲ.

ಬಸ್‌ ಆರಂಭಿಸಿ
ಕಾರವಾರ ರೈಲು ನಿಲ್ದಾಣದಿಂದ ಅಲ್ಲಿನ ಬಸ್‌ ನಿಲ್ದಾಣಕ್ಕೆ ಹೋಗಲು ಶೇರಿಂಗ್‌ ಆಟೋ ವ್ಯವಸ್ಥೆಯಿದೆ. ಇದರಿಂದ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಪ್ರಯಾಣ ಸಾಧ್ಯವಾಗುತ್ತದೆ. ಅದೇ ರೀತಿ ಇಲ್ಲಿ ಸಾರಿಗೆ ನಿಯಮದಲ್ಲಿ ಅದಕ್ಕೆ ಅವಕಾಶವಿದ್ದರೆ ಕುಂದಾಪುರ – ಮೂಡ್ಲಕಟ್ಟೆಯವರೆಗೆ ಶೇರಿಂಗ್‌ (ಸರ್ವಿಸ್‌) ಆಟೋ ಕಲ್ಪಿಸಿದರೆ ಅನುಕೂಲವಾಗುತ್ತದೆ. ಈಗ ಇಲ್ಲಿಗೆ ಬಸ್‌ ವ್ಯವಸ್ಥೆಯೂ ಸರಿಯಾಗಿಲ್ಲ. ಕುಂದಾಪುರದಿಂದ ಮೂಡ್ಲಕಟ್ಟೆಗೆ ಅರ್ಧ ಗಂಟೆಗೊಂದು ಬಸ್‌ ಆರಂಭಿಸಿದರೆ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಎನ್ನುವುದು ಸಮಿತಿಯ ಜಾಯ್‌ ಕರ್ವಾಲೋ ಅಭಿಪ್ರಾಯವಾಗಿದೆ.

ಕುಂದಾಪುರ (ಮೂಡ್ಲಕಟ್ಟೆ)ದ ರೈಲು ನಿಲ್ದಾಣದಲ್ಲಿ ಈಗ ಬೆಂಗಳೂರು – ವಾಸ್ಕೋ ರೈಲಿನೊಂದಿಗೆ 19 ರೈಲುಗಳಿಗೆ ನಿಲುಗಡೆಗೆ ಅವಕಾಶ ಕಲ್ಪಿಸಿದಂತಾಗಿದೆ. ಅವುಗಳ ವಿವರ ಇಂತಿದೆ.

Advertisement

ನಿಲುಗಡೆಯಿರುವ ರೈಲುಗಳು
1. ತಿರುವನಂತಪುರ – ಮುಂಬಯಿ ಎಕ್ಸ್‌ಪ್ರೆಸ್‌
2. ಮಂಗಳೂರು – ಮಡಗಾಂವ್‌ ಪ್ಯಾಸೆಂಜರ್‌
3. ಮಂಗಳೂರು- ಮಡಗಾಂವ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌
4. ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್‌
5. ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್‌
6. ಮಂಗಳೂರು – ಮುಂಬಯಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌
7. ಮಂಗಳೂರು – ಮುಂಬಯಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌
8. ಎರ್ನಾಕುಲಂ – ದಿಲ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌
9. ಎರ್ನಾಕುಲಂ – ಪುಣೆ ಎಕ್ಸ್‌ಪ್ರೆಸ್‌
10. ಮಂಗಳೂರು – ಮಡಗಾಂವ್‌ ಪ್ಯಾಸೆಂಜರ್‌
11. ಎರ್ನಾಕುಳಂ – ಅಜೆ¾àರ್‌ ಎಕ್ಸ್‌ಪ್ರೆಸ್‌
12. ಕೊಯಮತ್ತೂರು – ಜಬಲ್‌ಪುರ್‌ ಎಕ್ಸ್‌ಪ್ರೆಸ್‌
13. ತಿರುವನಂತನಪುರ – ವೆರಾವಲ್‌ ಎಕ್ಸ್‌ಪ್ರೆಸ್‌
14. ಎರ್ನಾಕುಳಂ – ಪುಣೆ ಎಕ್ಸ್‌ಪ್ರೆಸ್‌
15. ನಗರ್‌ಕೊಯ್ಲ – ಗಾಂಧಿಧಾಮ್‌ ಎಕ್ಸ್‌ಪ್ರೆಸ್‌
16. ಎರ್ನಾಕುಳಂ – ಓಖಾ ಎಕ್ಸ್‌ಪ್ರೆಸ್‌
17. ಕೊಚುವೆಲಿ – ಗಂಗಾನಗರ ಎಕ್ಸ್‌ಪ್ರೆಸ್‌
18. ಕೊಯಮತ್ತೂರು – ಗಂಗಾನಗರ ಎಕ್ಸ್‌ಪ್ರೆಸ್‌
19. ಬೆಂಗಳೂರು – ವಾಸ್ಕೋ

ಏನಿದು ಪ್ರಿಪೇಯ್ಡ ಆಟೋ
ರೈಲು ನಿಲ್ದಾಣದ ಸಮೀಪ ರಿಕ್ಷಾ ನಿಲ್ದಾಣ ನಿರ್ಮಿಸಿ, ಅಲ್ಲಿರುವ ರಿಕ್ಷಾವನ್ನು ಮೊದಲೇ ಹಣ (ಕಿ.ಮೀ.ಗೆ ಇಂತಿಷ್ಟು ದರ ಮೊದಲೇ ನಿಗದಿಪಡಿಸಿ) ಪಾವತಿಸಿ ಬಾಡಿಗೆ ಮಾಡುವುದೇ ಪ್ರಿಪೇಯ್ಡ ಆಟೋ ಸಿಸ್ಟಂ. ಮಂಗಳೂರು ಮತ್ತಿತರ ಕಡೆಗಳ ರೈಲು ನಿಲ್ದಾಣಗಳಲ್ಲಿ ಈ ರೀತಿಯ ವ್ಯವಸ್ಥೆಯಿದೆ. ಇದರಿಂದ ಎಲ್ಲ ರಿಕ್ಷಾಗಳಿಗೂ ಸರಾಸರಿ ಬಾಡಿಗೆ ಸಿಗುವುದರ ಜತೆಗೆ ಪ್ರಯಾಣಿಕರಿಗೂ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗುತ್ತದೆ.

ದರ ಇಳಿದರೆ ಅನುಕೂಲ
ಬೆಂಗಳೂರಿನಿಂದ ಕುಂದಾಪುರಕ್ಕೆ 180 ರೂ. ನೀಡಿ ರೈಲಿನಲ್ಲಿ ಬಂದರೆ ಇಲ್ಲಿಂದ ಅವರ ಮನೆಗೆ ಹೋಗಬೇಕಾದರೆ ರಿಕ್ಷಾ ಅಥವಾ ಕಾರಿಗೆ ದುಬಾರಿ ಹಣ ನೀಡಿ ಪ್ರಯಾಣಿಸಬೇಕಾಗಿದೆ. ರಿಕ್ಷಾ ಅಥವಾ ಕಾರಿನವರು ತಮ್ಮ ಬಾಡಿಗೆ ದರವನ್ನು ಇಳಿಸಿದರೆ ಅನುಕೂಲವಾಗುತ್ತದೆ. ಬೇರೆ ಕಡೆಗಳಲ್ಲಿ ಇರುವಂತೆ ಪ್ರಿಪೇಯ್ಡ ವ್ಯವಸ್ಥೆ ಮಾಡಿದರೆ ಬಹಳಷ್ಟು ಪ್ರಯೋಜನವಾಗಲಿದೆ.
– ಗಣೇಶ್‌ ಪುತ್ರನ್‌, ಅಧ್ಯಕ್ಷರು, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ

ನಮ್ಮ ಸಹಮತವಿದೆ
ಕೆಲವರು ಒಂದೊಂದು ರೀತಿಯ ದರ ವಿಧಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಆ ಕಾರಣಕ್ಕೆ ಪ್ರಿಪೇಯ್ಡ್ ಆಟೋ ಸಿಸ್ಟಂ ಮಾಡಿದರೆ ಉತ್ತಮ. ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಸಹಮತ ಕೂಡ ಇದೆ. ಇದರಿಂದ ಎಲ್ಲರೂ ಒಂದೇ ರೀತಿಯ ದರ ನಿಗದಿಪಡಿಸಿದಂತಾಗುತ್ತದೆ.
ವಿಲ್ಫೆಡ್‌ ಡಿ’ಸೋಜಾ, ರಿಕ್ಷಾ ಚಾಲಕರು

ಸರ್ವಿಸ್‌ಗೆ ಅವಕಾಶವಿಲ್ಲ
ಪ್ರಾದೇಶಿಕ ಸಾರಿಗೆ ಇಲಾಖೆಯ ಕಾನೂನಿನ್ವಯ ರಿಕ್ಷಾ ಬಾಡಿಗೆ ಮಾಡಲು ಅವಕಾಶವಿದೆ. ಆದರೆ ಶೇರಿಂಗ್‌ (ಸರ್ವಿಸ್‌) ಆಟೋಗೆ ಅನುಮತಿ ಇಲ್ಲ. ಆದರೆ ಪ್ರಯಾಣಿಕರು ಒಪ್ಪಿದರೆ ಗರಿಷ್ಠ 3 ಮಂದಿ ಪ್ರಯಾಣಿಸಬಹುದು. ಬಸ್‌ ಸೌಕರ್ಯ ಕುರಿತಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು.
– ರಾಮಕೃಷ್ಣ ರೈ, ಸಾರಿಗೆ ಆಯುಕ್ತರು, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next