Advertisement

ಸಕಾಲ ನಿರ್ವಹಣೆಯಲ್ಲಿ ಕುಂದಾಪುರ ಪುರಸಭೆಯೇ ಮುಂದೆ

10:50 PM Feb 25, 2022 | Team Udayavani |

ಕುಂದಾಪುರ: ಕಡತ ವಿಲೇವಾರಿ ಕುರಿತು ಎಲ್ಲೆಡೆಯಿಂದ ದೂರುಗಳು ಕೇಳಿಬರುತ್ತಿದ್ದರೆ ಕುಂದಾಪುರ ಪುರಸಭೆ ಸಕಾಲದಲ್ಲಿ ಕಡತ ವಿಲೇ ಮಾಡಿ ರಾಜ್ಯದ 122 ಸಂಸ್ಥೆಗಳ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

Advertisement

ಜಿಲ್ಲೆಯಲ್ಲಿ ನಂ.1
ಜನವರಿ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ಕಡತಗಳನ್ನು ನಿರ್ವಹಿಸುವ ಪುರಸಭೆಗಳ ಪೈಕಿ ಕುಂದಾಪುರ ಮೊದಲ ಸ್ಥಾನದಲ್ಲಿದೆ. ಕಾಪು ಅನಂತರ ಕಾರ್ಕಳ ಆ ಬಳಿಕದ ಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ಕಾಪು, ಕುಂದಾಪುರ, ಕಾರ್ಕಳ ಕ್ರಮವಾಗಿ ಸ್ಥಾನ ಹಂಚಿಕೊಂಡಿದ್ದವು.

ರಾಜ್ಯದಲ್ಲಿ 10ನೇ ಸ್ಥಾನ
ಈ ವರ್ಷ ಜನವರಿಯ ಲೆಕ್ಕಾಚಾರದಲ್ಲಿ ರಾಜ್ಯದ 122 ಪುರಸಭೆಗಳಲ್ಲಿ ಕುಂದಾ ಪುರಕ್ಕೆ ಸಕಾಲದ ಒಟ್ಟು ನಿರ್ವಹಣೆ ಯಲ್ಲಿ 10ನೇ ಸ್ಥಾನ ಇದೆ. ಸಕಾಲಿಕವಾಗಿ ನಿರ್ವಹಣೆ ಮಾಡುವುದರಲ್ಲಿ 16ನೇ ಸ್ಥಾನ ಪಡೆದಿದೆ.

ಮೂಡಬಿದಿರೆ ಸಮಗ್ರ ನಿರ್ವಹಣೆ ಯಲ್ಲಿ ನಂ.1, ಸಮಯದಲ್ಲಿ ಕಡ ವಿಲೇಯಲ್ಲಿ 11ನೇ ಸ್ಥಾನ, ಬಂಟ್ವಾಳ ಪುರಸಭೆ ನಂ. 1 ಸ್ಥಾನದಲ್ಲಿದ್ದು ಒಟ್ಟು ನಿರ್ವಹಣೆಯಲ್ಲಿ 12ನೇ ಸ್ಥಾನ ಪಡೆದಿದೆ. ಕಾರ್ಕಳ 62ನೇ ಸ್ಥಾನದಲ್ಲಿದ್ದು ಸಮಗ್ರ ನಿರ್ವಹಣೆಯಲ್ಲಿ 35ನೇ ಸ್ಥಾನದಲ್ಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂಡು ಬಿದಿರೆ ಸಮಗ್ರ ನಿರ್ವಹಣೆಗೆ 5, ಬಂಟ್ವಾಳ 11, ಕುಂದಾಪುರ 25ನೆಯ ಸ್ಥಾನದಲ್ಲಿತ್ತು.

ಸಿಬಂದಿ ಕೊರತೆ
ಪುರಸಭೆಯಲ್ಲಿ ಸಿಬಂದಿ ಕೊರತೆ ಇದೆ. ಇದ್ದವರೂ ವರ್ಗವಾಗಿದ್ದಾರೆ. ಇನ್ನು ಕೆಲವರು ನಿಯೋಜನೆ ಮೇಲಿದ್ದಾರೆ. ಮತ್ತೆ ಕೆಲವರು ಎರಡು ಕಡೆ ಕೆಲಸ ನಿರ್ವಹಿಸಬೇಕಾಗಿ ಬಂದು ವಾರಕ್ಕಿಷ್ಟು ದಿನ ಎಂಬಂತೆ ಇದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆ ಪುರಸಭೆ ಕಡತ ವಿಲೇವಾರಿಯನ್ನು ಸಕಾಲ ಯೋಜನೆಯಡಿ ಸಮಯಕ್ಕೆ ಸರಿಯಾಗಿ ಮಾಡಿ ಗುರುತಿಸಿಕೊಂಡಿದೆ.

Advertisement

ಬಾಕಿ ಕಡಿಮೆ
ಫೆಬ್ರವರಿ ತಿಂಗಳಲ್ಲಿ ಕೂಡ ಕಡತ ವಿಲೇಯಲ್ಲಿ ಸಮಗ್ರ ಸಾಧನೆಗಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. 23 ದಿನ ಗಳಲ್ಲಿ 431 ಕಡತಗಳ ವಿಲೇವಾರಿ ನಡೆದಿದೆ. ತಾಂತ್ರಿಕ ಕಾರಣದಿಂದ 3 ಅರ್ಜಿಗಳು ಬಾಕಿ ಇವೆ. ಜನನ ಪ್ರಮಾಣ ಪತ್ರದಲ್ಲಿ ಹೆಸರು, ದಿನಾಂಕ ಬದಲಾವಣೆಗೆ ಅತಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದು ಡಿಸೆಂಬರ್‌ನಲ್ಲಿ 283, ಜನವರಿಯಲ್ಲಿ 354 ಅರ್ಜಿಗಳು, ಫೆಬ್ರವರಿಯಲ್ಲಿ 281 ಅರ್ಜಿಗಳು ಸಲ್ಲಿಕೆಯಾಗಿವೆ.

ಬಾಕಿ ಇಡುವುದಿಲ್ಲ
ತಾಂತ್ರಿಕ ಕಾರಣಗಳನ್ನು ಹೊರತಾದ, ಹಣ ಪಾವತಿಸದ, ದಾಖಲೆ ಇಲ್ಲದ ಇತ್ಯಾದಿ ಕಾರಣಗಳಿಲ್ಲದ ಯಾವುದೇ ಕಡತಗಳನ್ನು ನಮ್ಮ ಕಚೇರಿಯಲ್ಲಿ ಬಾಕಿ ಇಡುವುದಿಲ್ಲ. ಸರಿಯಾದ ಕಾಲದಲ್ಲಿ ಸಕಾಲ ಯೋಜನೆಯಲ್ಲಿ ಸೂಕ್ತ ವಿಲೇವಾರಿ ಮಾಡಲಾಗುತ್ತಿದೆ.
-ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಕುಂದಾಪುರ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next