Advertisement
ಕೆರಾಡಿ ಗ್ರಾಮದ ಕಾರಿಬೈಲು ಹಾಗೂ ಹಳ್ಳಿಹೊಳೆ ಗ್ರಾಮದ ಇರಿಗೆ ಪ್ರದೇಶದ ನೂರಾರು ಮನೆಗಳು ಟವರ್ ಇದ್ದರೂ ನೆಟ್ವರ್ಕ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಟವರ್ ಇಲ್ಲದೇ ಒಂದು ಸಮಸ್ಯೆಯಾಗಿದ್ದರೆ, ಇಲ್ಲಿ ಟವರ್ ಇದ್ದರೂ, ಹತ್ತಾರು ಸಮಸ್ಯೆ ಅನುಭವಿಸುವಂತಾಗಿದೆ ಕಾಡಂಚಿನ ಜನರ ಪರಿಸ್ಥಿತಿ. ಪರಿಸ್ಥಿತಿ ಹೇಗಿದೆ ಎಂದರೆ ಟವರ್‌ನ ಬುಡದಲ್ಲೇ ಇಲ್ಲಿ ನೆಟ್ವರ್ಕ್ ಇಲ್ಲ!
ಇರಿಗೆ ಹಾಗೂ ಕಾರಿಬೈಲಿನಲ್ಲಿ ಅನೇಕ ವರ್ಷಗಳ ಬೇಡಿಕೆ, ಹೋರಾಟ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ 2 ವರ್ಷಗಳ ಹಿಂದೆ ಎರಡು ಬಿಸ್ಸೆನ್ನೆಲ್ ಟವರ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸಂಸದರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಟವರ್ ಕಾಮಗಾರಿ ತ್ವರಿತಗತಿಗೆ ಆಗಾಗ್ಗೆ ಸೂಚನೆ ನೀಡುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿ ವರ್ಗದವರು ಗಂಭೀರವಾಗಿ ಪರಿಗಣಿಸದೇ ವಿಳಂಬ ಆಗಿತ್ತು. ಕೊನೆಗೂ ಕಳೆದ ವರ್ಷದ ಆ. 15ಕ್ಕೆ ಈ ಎರಡೂ ಟವರ್‌ಗಳು ಕಾರ್ಯಾರಂಭ ಮಾಡಿದವು. ಆದರೆ ಸರಿಯಾದ ರೀತಿಯಲ್ಲಿ ಸಂಬಂಧಪಟ್ಟ ಬಿಸ್ಸೆನ್ನೆಲ್ ಸಂಸ್ಥೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕಾರಣ ಟವರ್ ಆದರೂ ಇಲ್ಲಿನ ಜನರ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಟವರ್ ಹೆಸರಿಗಷ್ಟೇ ಅನ್ನುವ ಮಾತುಗಳು ಇಲ್ಲಿನ ಜನರಿಂದ ವ್ಯಕ್ತವಾಗುತ್ತಿವೆ. 600ಕ್ಕೂ ಮಿಕ್ಕಿ ಮನೆ
ಇರಿಗೆ ಸಹಿತ ಸುತ್ತಮುತ್ತಲಿನ ಪ್ರದೇಶಗಳಾದ ಕಲ್ಸಂಕ, ಕೊಳೆಕೊಡು, ಬಿಂಜ್ರಿ, ಭಗವಂತನಪಾಲು, ಬಿರಿಗೆ, ಮಾವಿನಕುಂಬ್ರಿ, ದೊಡಬೀಸು, ಕುದ್ರಕಾಡು, ತೆಂಕನಮಕ್ಕಿ ಸಹಿತ ಹತ್ತಾರು ಊರುಗಳಿಗೆ ನೆಟ್ವರ್ಕ್ ಸಮಸ್ಯೆಯಿದೆ. ಇಲ್ಲಿನ ಸುಮಾರು 300 ರಿಂದ 350 ಮನೆಗಳಿಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ. ಇನ್ನು ಕಾರಿಬೈಲು ಆಸುಪಾಸಿನ ಮಾವಿನಜೆಡ್ಡು, ಹೊಸಮಠ, ನಂದಿಕೊಡ್ಲು, ಮೇಳ್ಯಾ ಮುದ್ರಾಣಿ, ಕುಂದಲಬೈಲು, ವಾಟೆಬಚ್ಚಲು, ದಾಸನಕೊಡ್ಲು, ಗರಡಿಪಾಲು ಭಾಗದ ಸುಮಾರು 300ಕ್ಕೂ ಮಿಕ್ಕಿ ಮನೆಗಳಿಗೆ ಟವರ್ ಇದ್ದರೂ, ನೆಟ್ವರ್ಕ್ ಸಿಗುತ್ತಿಲ್ಲ.
Related Articles
ಇನ್ನೊಂದು ಬಹುಮುಖ್ಯ ಸಮಸ್ಯೆಯೆಂದರೆ ಇಲ್ಲಿ 4ಜಿ ಹಾಗೂ 5ಜಿ ಟವರ್‌ಗಳನ್ನು ಮಾಡಲಾಗಿದೆ. ಇರಿಗೆ ಹಾಗೂ ಕಾರಿಬೈಲು ಪ್ರದೇಶದ ಬಹುತೇಕ ಅಂದರೆ ಶೇ. 75ರಷ್ಟು ಜನರಲ್ಲಿ ಇರುವುದು ಬೇಸಿಕ್ ಮೊಬೈಲ್. ಹಳ್ಳಿ ಪ್ರದೇಶವೇ ಜಾಸ್ತಿ ಇರುವುದರಿಂದ ಆ್ಯಂಡ್ರಾಯ್ಡ ಮೊಬೈಲ್ ಬಹುತೇಕರಲ್ಲಿ ಇಲ್ಲ. ಅದರ ಬಳಕೆಯೂ ಗೊತ್ತಿಲ್ಲದವರೇ ಹೆಚ್ಚಿನವರು ಇದ್ದಾರೆ. ಬೇಸಿಕ್ ಮೊಬೈಲ್‌ಗೆ ಈ ಟವರ್ ನೆಟ್ವರ್ಕ್ ಬಳಸಲು ಅವಕಾಶವಿಲ್ಲ. ಬೇಸಿಕ್ ಮೊಬೈಲ್ ಬಳಸುವವರು ಹೊಸದಾಗಿ ಅಂದರೆ ಕನಿಷ್ಠ 4,500 ರೂ. ಗಿಂತ ಹೆಚ್ಚಿನ ಹಣ ನೀಡಿ, ಹೊಸ ಮೊಬೈಲ್ ಖರೀದಿಸಬೇಕಿದೆ. ಒಟ್ಟಿನಲ್ಲಿ ಟವರ್ ಆಯಿತೆಂದು ಖುಷಿಯಲ್ಲಿದ್ದ ಜನ ಈಗ ಟವರ್‌ಗಾಗಿ ಮೊಬೈಲ್ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದಂತಾಗಿದೆ. ಇನ್ನು ಇದು 5ಜಿ ಟವರ್ ಆಗಿದ್ದರೂ ಕನಿಷ್ಠ 2ಜಿ ಸಹ ಸಿಗುತ್ತಿಲ್ಲ ಅನ್ನುವುದು 4ಜಿ ಮೊಬೈಲ್ ಬಳಸುವವರ ವಾದ.
Advertisement
ಏನೆಲ್ಲ ಸಮಸ್ಯೆಗಳು?ಕಳೆದ ಆ.15 ರಿಂದ ಟವರ್ ಕಾರ್ಯಾರಂಭ ಮಾಡಿದೆ. ಆದರೆ ಆಗಾಗ್ಗೆ ನೆಟ್ವರ್ಕ್ ಕೈಕೊಡುತ್ತಿದ್ದು, ಒಮೊಮ್ಮೆ ನೆಟ್ವರ್ಕ್ ಹೋದರೆ 4 ದಿನ, 2 ದಿನ ಮತ್ತೆ ಇರುವುದೇ ಇಲ್ಲ. ಜನ ಕಾದು – ಕಾದು ಸುಸ್ತಾಗಿ ಬೇಸತ್ತು ಹೋಗುವಂತಾಗಿದೆ. ಇನ್ನುಈ ಟವರ್‌ಗಳಿಗೆ ವಿದ್ಯುತ್ ಬದಲು ಸೋಲಾರ್ ಪ್ಯಾನೆಲ್ ಅಳವಡಿಸಿದ್ದು, ಅದು ಎಲ್ಲ ಕಾಲದಲ್ಲೂ ಸಾಕಾಗುತ್ತಾ ಅಥವಾ ಸಾಕಾಗದೇ ಆಗಾಗ್ಗೆ ನೆಟ್ವರ್ಕ್ ಕೈಕೊಡುತ್ತಿದೆಯೇ ಅನ್ನುವ ಅನುಮಾನ ಜನರದ್ದು. ದೂರು ಕೊಟ್ಟರೂ ಆಗಿಲ್ಲ
ಇರಿಗೆಯಲ್ಲಿ ಟವರ್ ಆದರೂ ಏನೂ ಪ್ರಯೋಜನವಾಗಿಲ್ಲ, ನಮ್ಮ ಮನೆಯಿಂದ ಒಂದು ಫರ್ಲಾಂಗು ದೂರವಿಲ್ಲ, ಆದರೂ ನೆಟ್ವರ್ಕ್ ಸಿಗುತ್ತಿಲ್ಲ. ಟವರ್ ಅಡಿಯಲ್ಲೇ ಹಾಲಿನ ಡೈರಿಯಿದೆ. ಅವರಿಗೂ ನೆಟ್ವರ್ಕ್ ಸಿಗುತ್ತಿಲ್ಲ. ನಮ್ಮ ಬಹಳಷ್ಟು ಹೋರಾಟದ ಫಲವಾಗಿ ಟವರ್ ಆಗಿದೆ. ತಾಳ್ಮೆಯಿಂದ ಕಾದು, ಟವರ್ ಆಗಿದ್ದಷ್ಟೇ ಖುಷಿ. ರಾತ್ರಿ ಟವರ್‌ದು ಲೈಟ್ ನೋಡಲು ಮಾತ್ರ ಇದ್ದಂತಿದೆ. ಶಾಸಕರಿಗೆ, ಬಿಸ್ಸೆನ್ನೆಲ್ ಪ್ರಮುಖರಿಗೆ ದೂರು ಕೊಟ್ಟಿದ್ದೇವೆ. 4ಜಿ ಸಿಮ್ ಇದ್ದರೂ ಸಿಗುತ್ತಿಲ್ಲ.
– ರಾಘವೇಂದ್ರ ರಾವ್ ಇರಿಗೆ, ಸ್ಥಳೀಯರು ಟವರ್ ಇದ್ದೂ ಏನೂ ಪ್ರಯೋಜನ?
ಇರಿಗೆ ಹಾಗೂ ಕಾರಿಬೈಲಿನಲ್ಲಿ ಟವರ್ ಆದ ನಂತರವೂ ಮೊದಲಿದ್ದ ಪರಿಸ್ಥಿತಿ ಏನು ಬದಲಾಗಿಲ್ಲ. ಯಾವ ಮೊಬೈಲ್‌ನಿಂದಲೂ ಕನಿಷ್ಠ ಒಂದು ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಅಂದರೆ ಟವರ್ ಇದ್ದರೂ ಏನೂ ಪ್ರಯೋಜನ? ಇಲ್ಲಿನ ಬಹುತೇಕ ಎಲ್ಲರಿಗೂ ಇದೇ ಸಮಸ್ಯೆ. 3 ಶಾಲೆಗಳಿದ್ದು, ಬಿಸಿಯೂಟದ ದಾಖಲಾತಿ ಮಾಡಿ ಕಳುಹಿಸಲು ಆಗುತ್ತಿಲ್ಲ. ಎಲ್ಲದಕ್ಕೂ ಸಮಸ್ಯೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆ ನಿವಾರಿಸಲಿ.
-ನವೀನ್ ಕೆ.ಸಿ., ಕಾರಿಬೈಲು ಶಾಲೆ ಶಿಕ್ಷಕರು -ಪ್ರಶಾಂತ್ ಪಾದೆ