Advertisement

ಕುಂದಾಪುರದಲ್ಲಿ ನಿಲ್ಲದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು

04:43 PM Jul 17, 2022 | Team Udayavani |

ಕುಂದಾಪುರ: ತಿರುವನಂತಪುರಂ – ಮುಂಬಯಿ ಎಕ್ಸ್‌ಪ್ರೆಸ್‌ ರೈಲು ಕೊರೊನಾ ಸಮಯದಲ್ಲಿ ಕುಂದಾಪುರದಲ್ಲಿ ನಿಲುಗಡೆ ರದ್ದಾಗಿದ್ದು, ಇನ್ನೂ ತೆರವಾಗಿಲ್ಲ. ಅನೇಕ ಸಮಯಗಳಿಂದ ಕುಂದಾಪುರದ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೂ, ಇನ್ನೂ ಬೇಡಿಕೆ ಈಡೇರಿಲ್ಲ.

Advertisement

ಕೊಂಕಣ ರೈಲ್ವೇ ಆರಂಭವಾದ ದಿನದಿಂದಲೂ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ಇದ್ದ ತಿರುವನಂತಪುರಂ – ಮುಂಬಯಿ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿಗೆ ಕೊರೊನಾ ಸಮಯದಲ್ಲಿ ನಿಲುಗಡೆ ಸ್ಥಗಿತಗೊಳಿಸಲಾಗಿತ್ತು. ಇನ್ನೂ ಇಲ್ಲಿನ ನಿಲ್ದಾಣದಲ್ಲಿ ನಿಲುಗಡೆ ಆರಂಭವಾಗದೇ ಇರುವುದು ಪ್ರಯಾಣಿಕರಿಗೆ ಭಾರೀ ಸಮಸ್ಯೆ ತಂದೊಡ್ಡಿದೆ. ಅದರಲ್ಲೂ ಕುಂದಾಪುರದಿಂದ ಮುಂಬಯಿಗೆ ತೆರಳುವ ಹಾಗೂ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಕುಂದಾಪುರ ಭಾಗದಿಂದ ನಿರ್ದಿಷ್ಟವಾಗಿ ರಾತ್ರಿಯ ಈ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲನ್ನು ಮುಂಬಯಿ ಕಡೆಗೆ ತೆರಳಲು ಬಳಸುವ ದೊಡ್ಡ ಸಮುದಾಯವಿದೆ. ನೂರಾರು ಪ್ರವಾಸಿಗರು ಈ ರೈಲಿನಲ್ಲಿ ಕುಂದಾಪುರ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದರು. ಗೋವಾ ಭಾಗದಿಂದ ಬರುವ ಪ್ರಯಾಣಿಕರಿಗೆ ಪ್ಯಾಸೆಂಜರ್‌ ರೈಲು ಹೊರಟ ಅನಂತರ ಮರುದಿನ ಬೆಳಗ್ಗೆವರೆಗೆ ಬೇರೆ ಯಾವ ರೈಲು ಇಲ್ಲದೆ ಸಮಸ್ಯೆಯಾಗುತ್ತಿದ್ದು, ಅದಕ್ಕೆ ಶೀಘ್ರವಾಗಿ ಈ ನೇತ್ರಾವತಿ ರೈಲಿನ ನಿಲುಗಡೆ ಮರು ಆರಂಭಕ್ಕೆ ಕೊಂಕಣ ರೈಲ್ವೇ ನಿಗಮವನ್ನು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಒತ್ತಾಯಿಸಿದೆ.

ಪದೇ ಪದೆ ಕುಂದಾಪುರ ನಿಲ್ದಾಣಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನ ಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯಾವ ಮಾನದಂಡದಲ್ಲಿ ಕುಂದಾಪುರದಲ್ಲಿ ನೇತ್ರಾವತಿ ನಿಲುಗಡೆಯನ್ನು ರದ್ದು ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವೆಗೆ ಮನವಿ

Advertisement

ಕುಂದಾಪುರ ನಿಲ್ದಾಣದಲ್ಲಿ ಮತ್ತೆ ಈ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿಯವರು ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಮಾಡಿದ್ದಾರೆ.

ಕೂಡಲೇ ನಿಲುಗಡೆ ಕೊಡಿ: ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಕೊರೊನಾ ಕಾರಣದಿಂದ ರದ್ದಾಗಿತ್ತು. ಅದನ್ನು ಮರು ಆರಂಭಿಸುವಂತೆ ಕೊಂಕಣ ರೈಲ್ವೇಗೆ ಮನವಿ ಮಾಡಲಾಗಿದೆ. ನೇತ್ರಾವತಿ ಎಕ್ಸ್‌ಪ್ರೆಸ್‌ ಕುಂದಾಪುರದ ಪ್ರಮುಖ ನಿಲುಗಡೆಯ ರೈಲಾಗಿದ್ದು, ನೂರಾರು ಜನರಿಗೆ ರಾತ್ರಿ ಪ್ರಯಾಣಕ್ಕೆ ಉಪಯೋಗಿಯಾಗಿತ್ತು. ಕೂಡಲೇ ಕೊಂಕಣ ರೈಲ್ವೇಯು ಇಲ್ಲಿ ನಿಲುಗಡೆಗೆ ಕ್ರಮಕೈಗೊಳ್ಳಬೇಕು. – ಗಣೇಶ್‌ ಪುತ್ರನ್‌, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next