Advertisement

ಕುಂದಾಪುರ ಪುರಸಭೆ: 57.69 ಲಕ್ಷ ರೂ. ಮಿಗತೆ ಬಜೆಟ್‌

09:00 PM Feb 12, 2022 | Team Udayavani |

ಕುಂದಾಪುರ: ಕುಂದಾಪುರ ಪುರಸಭೆಯ 2022-23ನೇ ಸಾಲಿನ ಅಂದಾಜು ಆಯವ್ಯಯವನ್ನು ಶುಕ್ರವಾರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್‌ ಮೆಂಡನ್‌ ಅವರು ಮಂಡಿಸಿದರು.

Advertisement

ಆಡಳಿತ, ಆರ್ಥಿಕ ಸುಧಾರಣೆಗೆ ಆದ್ಯತೆ, ಪರಿಸರ, ಸ್ವತ್ಛತೆಗೆ ಒತ್ತು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದ್ದು, ಒಟ್ಟು ಮುಂಬರುವ ಸಾಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಒಟ್ಟು 24,23,61,200 ರೂ. ಗಾತ್ರದ ಬಜೆಟ್‌ ಇದಾಗಿದ್ದು, 57,69,268 ರೂ.ಗಳ ಮಿಗತೆ ಬಜೆಟ್‌ ಮಂಡಿಸಲಾಗಿದೆ. 13.20 ಕೋ.ರೂ. ಆದಾಯ ನಿರೀಕ್ಷೆ ಹೊಂದಲಾಗಿದ್ದು, 8.45 ಕೋ.ರೂ. ಆರಂಭಿಕ ಶುಲ್ಕ ಸೇರಿದೆ.

24.23 ಕೋ.ರೂ. ಗಾತ್ರದ ಬಜೆಟ್‌ :

ಕಳೆದ ಬಾರಿ ಪುರಸಭೆಗೆ ಎಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ, ಎಸ್‌ಎಫ್‌ಸಿ ಪ್ರೋತ್ಸಾಹ ಧನ ಅನುದಾನ, 14ನೇ ಹಾಗೂ 15ನೇ ಹಣಕಾಸು ಅನುದಾನ, ಕುಡಿಯುವ ನೀರು ಅಭಾವ ಅನುದಾನ, ನೌಕರರ ವೇತನ, ಶಾಸಕರು, ಪರಿಷತ್‌ ಸದಸ್ಯರ ಅನುದಾನ, ಅಧಿಭಾರ ಶುಲ್ಕ, ಗಣತಿ ಅನುದಾನ, ಸ್ವತ್ಛಭಾರತ ಸೇರಿದಂತೆ ವಿವಿಧ ಅನುದಾನ ಸೇರಿದಂತೆ 6.20 ಕೋ.ರೂ. ಅನುದಾನ ಬಂದರೆ, ಪುರಸಭೆಯ ಮೂಲದಿಂದ 7 ಕೋ.ರೂ. ಸೇರಿದಂತೆ ಒಟ್ಟಾರೆ 13.20 ಕೋ.ರೂ. ಆದಾಯವಿದ್ದು, ಇನ್ನು ಅಸಾಮಾನ್ಯ ಆಯವ್ಯಯ 11.03 ಕೋ.ರೂ. ಸೇರಿದಂತೆ ಒಟ್ಟು 24.23 ಕೋ.ರೂ. ವಿನಿಯೋಗಿಸುವ ಗುರಿ ಹೊಂದಲಾಗಿದೆ.

ತೆರಿಗೆ ಹೆಚ್ಚಳವಿಲ್ಲ :

Advertisement

ತೆರಿಗೆ ಹೆಚ್ಚಿಸುವ ಹೊರೆ ನೀಡದಿರುವುದು ಜನಸಾಮಾನ್ಯರಿಗೆ ಒಂದಿಷ್ಟು ಸಮಾಧಾನ ತಂದಿದೆ. ಆದರೆ ಈ ಬಾರಿ ಅಂತಹ ಹೊಸ ಯೋಜನೆ-ಯೋಚನೆಗಳನ್ನು ಘೋಷಣೆ ಮಾಡದೇ, ನಿರ್ವಹಣ ಕಾಮಗಾರಿಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡ ಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಆಯವ್ಯಯ ದಲ್ಲಿ ಆದ್ಯತೆ ನೀಡಲಾಗಿದೆ.

ಪ್ರವಾಸೋದ್ಯಮ: ಆದಾಯ ನಿರೀಕ್ಷೆ :

ಕೋಡಿ ಸೀವಾಕ್‌, ಕೋಡಿ ಕಡಲ ಕಿನಾರೆ ಸಹಿತ ಪುರಸಭೆ ವ್ಯಾಪ್ತಿಯ ಪ್ರವಾಸೋ ದ್ಯಮ ತಾಣಗಳನ್ನು ಶಾಸಕರ 40 ಲಕ್ಷ ರೂ. ಸಹಿತ ವಿವಿಧ ಅನುದಾನಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ವಿದ್ಯುತ್‌ ದೀಪ ಅಳವಡಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಸಾರ್ವ ಜನಿಕ ಶೌಚಾಲಯ ಸಹಿತ ಅನೇಕ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಜತೆಗೆ ಪುರಸಭೆಗೆ ಆದಾಯದ ನಿರೀಕ್ಷೆ ಹೊಂದಲಾಗಿದೆ.

ನೀರು ಪೂರೈಕೆ: ಹೊರೆ :

ಈವರೆಗೆ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ 8 ಗಂಟೆಗಳ ಕಾಲ ನೀರು ಮಾಡಲಾಗುತ್ತಿದ್ದು, ಇದರಿಂದ ನೀರಿನ ತೆರಿಗೆ ಸಂಗ್ರಹದಿಂದ 60 ರಿಂದ 70 ಲಕ್ಷ ರೂ. ಉಳಿತಾಯವಾಗುತ್ತಿತ್ತು. ಆದರೆ ಇನ್ನು ನಿರಂತರ 24 ಗಂಟೆಗಳ ಕಾಲ ನೀರು ಪೂರೈಕೆಯ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದ್ದು, ಇದರಿಂದ ನಿರ್ವಹಣೆ, ವಿದ್ಯುತ್‌ ಬಿಲ್‌ ಸೇರಿದಂತೆ ಇನ್ನಿತರ ವೆಚ್ಚಕ್ಕಾಗಿ 1.50 ಕೋ.ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆಯಿದೆ.

ಪ್ರತ್ಯೇಕ ಶ್ರೇಯೋಭಿವೃದ್ಧಿಗೆ 21.57 ಲಕ್ಷ ರೂ. :

2022-23ನೇ ಸಾಲಿನಲ್ಲಿ ಶೇ. 36.35 ದಷ್ಟಿರುವ ಪ್ರತ್ಯೇಕ ವರ್ಗದವರ ಶ್ರೇಯೋಭಿವೃದ್ಧಿಗೆ 21.57 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಶೇ.24.10ರಷ್ಟಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಶ್ರೇಯೋಭಿವೃದ್ಧಿಗೆ ಎಸ್‌ಎಫ್‌ಸಿ ಹಾಗೂ ಎಂಎಫ್‌ ನಿಧಿಯಡಿ 16.16 ಲಕ್ಷ ರೂ., ಶೇ.7.25ರಷ್ಟಿರುವ ಇತರ ವರ್ಗದವರ ಶ್ರೇಯೋಭಿವೃದ್ಧಿಗೆ 3.20 ಲಕ್ಷ ರೂ. ಹಾಗೂ ಶೇ. 3 ರಷ್ಟಿರುವ ದಿವ್ಯಾಂಗರ ಕಲ್ಯಾಣಕ್ಕೆ 2.20 ಲಕ್ಷ ರೂ. ತೆಗೆದಿರಿಸಲಾಗಿದೆ.

ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್‌ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ದುರಸ್ತಿ, ನಿರ್ವಹಣೆಗೆ ವೆಚ್ಚ ವಿಂಗಡಣೆ :

ಘನ ತ್ಯಾಜ್ಯ ನಿರ್ವಹಣೆ   82 ಲಕ್ಷ ರೂ.

ಬೀದಿ ದೀಪ ನಿರ್ವಹಣೆ   30 ಲಕ್ಷ ರೂ.

ನೀರು ಸರಬರಾಜು ನಿರ್ವಹಣೆ    20 ಲಕ್ಷ ರೂ.

ಕಟ್ಟಡ ದುರಸ್ತಿ            10 ಲಕ್ಷ ರೂ.

ರಸ್ತೆ ದುರಸ್ತಿ                    10 ಲಕ್ಷ ರೂ.

ಚರಂಡಿ ದುರಸ್ತಿ                          10 ಲಕ್ಷ ರೂ.

ವಿದ್ಯುತ್‌ ನಿರ್ವಹಣೆ ದುರಸ್ತಿ       10 ಲಕ್ಷ ರೂ.

ಕುಡ್ಸೆಂಪ್‌ ಸಾಲ ಮರು ಪಾವತಿ    1   ಕೋ.ರೂ.

Advertisement

Udayavani is now on Telegram. Click here to join our channel and stay updated with the latest news.

Next