Advertisement

ಕುಂದಾಪುರ: ಹಲವೆಡೆ ಹೆಚ್ಚುತ್ತಿದೆ ಚಿರತೆ ಹಾವಳಿ: ಕಾಡಂಚಿನ ಜನರಲ್ಲಿ ಭಯದ ವಾತಾವರಣ

09:43 PM Dec 29, 2022 | Team Udayavani |

ಕುಂದಾಪುರ: ಮೂಕಾಂಬಿಕಾ ಹಾಗೂ ಸೋಮೇಶ್ವರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕುಂದಾಪುರ, ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ಕಳೆದ ಕೆಲವು ಸಮಯದಿಂದ ಚಿರತೆ ಹಾವಳಿ ಹೆಚ್ಚುತ್ತಿದೆ. ನಾಯಿ, ದನ ಸಹಿತ ಸಾಕುಗಳ ಮೇಲೆ ದಾಳಿ ಮಾಡುತ್ತಿರುವ ಚಿರತೆಗಳು ಕಾಡಂಚಿನ ಜನರ ನಿದ್ದೆಗೆಡಿಸಿದೆ.

Advertisement

ಕಾಡಿನಿಂದ ನಾಡಿಗೆ ಆಹಾರವನ್ನು ಅರಸಿಕೊಂಡು ಬರುತ್ತಿರುವ ಚಿರತೆಗಳು ಜನರು, ಸಾಕು ಪ್ರಾಣಿಗಳ ಪ್ರಾಣಕ್ಕೆ ಎರವಾಗುವ ಭೀತಿಯನ್ನು ಸೃಷ್ಟಿಸಿದೆ. ಅದರಲ್ಲೂ ಕಾಡ ಹಾದಿಯಲ್ಲಿ ಜನ ನಡೆದುಕೊಂಡು ಹೋಗಲು ಭಯಪಡುವಂತಾಗಿದೆ. ಹಿಂದೆ ಇಂತಹ ಪ್ರಕರಣಗಳು ವಿರಳವಾಗಿದ್ದರೆ, ಈಗ ಎಲ್ಲ ಕಡೆಗಳಲ್ಲಿ ಕಂಡು ಬರುತ್ತಿರುವುದು ಆತಂಕದ ಸಂಗತಿ.

ಎಲ್ಲೆಲ್ಲ ಚಿರತೆ ಹಾವಳಿ?
ತೆಕ್ಕಟ್ಟೆ, ಮಾಲಾಡಿ ಪರಿಸರದಲ್ಲಿ ಆಗಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಅಲ್ಲಿ ಈಗಾಗಲೇ ಒಂದೆರಡು ಸಲ ಚಿರತೆಯನ್ನು ರಕ್ಷಿಸಿ, ಸುರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು. ಈಗಲೂ ಅಲ್ಲಿ ಚಿರತೆ ಹಿಡಿಯಲು ಬೋನುಗಳನ್ನು ಇಡಲಾಗಿದೆ. ಆದರೂ ಭೀತಿ ಮಾತ್ರ ಕಡಿಮೆಯಾಗಿಲ್ಲ. ಇನ್ನು ಹಳ್ಳಿಹೊಳೆ ಗ್ರಾಮದಲ್ಲಿ ಕಳೆದ 2 ತಿಂಗಳಿನಿಂದ ನಿತ್ಯವೂ ಚಿರತೆ ಕಾಟ ಹೆಚ್ಚುತ್ತಿದೆ. ಅಲ್ಲಿನ ಹಲವು ಮನೆಗಳ ನಾಯಿಗಳನ್ನು ಹಿಡಿದು ತಿಂದ ನಿದರ್ಶನಗಳು ಇವೆ. 10 ಕ್ಕೂ ಮಿಕ್ಕಿ ದನಗಳನ್ನು ಸಹ ನಿರ್ದಯಿ ಚಿರತೆ ಬಲಿ ಪಡೆದಿರುವ ಬಗ್ಗೆ ಅಲ್ಲಿನ ನಿವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಹಳ್ಳಿಹೊಳೆಯ ಬಿ.ಸಿ.ರೋಡ್‌, ಕೆರೆಮುಲ್ಲಿ, ನಡುಮುದ್ರೆ, ಭಟ್ರಮಕ್ಕಿ, ಕೆರೆಕಾಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ಜನರನ್ನು ಚಿಂತೆಗೀಡು ಮಾಡಿದೆ.

ಇನ್ನೂ ನಾಡ ಗ್ರಾ.ಪಂ. ವ್ಯಾಪ್ತಿಯ ಜಡ್ಡಾಡಿ, ಕೋಣಿR, ಬಡಾಕೆರೆ ಆಸುಪಾಸಿನ ಪ್ರದೇಶಗಳಲ್ಲಿ ಚಿರತೆ ಓಡಾಟವಿದ್ದು, ದನದ ಹಟ್ಟಿಗೆ ನುಗ್ಗಿ, ಜಾನುವಾರುಗಳನ್ನು ಕೊಂಡೊಯ್ದ ಘಟನೆಯೂ ನಡೆದಿದೆ. ಈ ಭಾಗದಲ್ಲಿ 4-5 ದನಗಳು ಚಿರತೆಗೆ ಬಲಿಯಾಗಿದೆ. ಇದಲ್ಲದೆ ಕೆರಾಡಿ, ಆಲೂರು, ಹಕ್ಲಾಡಿ, ಕುಂದಬಾರಂದಾಡಿ, ನೂಜಾಡಿ, ಮುದೂರು, ಆಜ್ರಿ ಸೇರಿದಂತೆ ವಿವಿಧೆಡೆಗಳಲ್ಲಿ ಚಿರತೆ ಭೀತಿಯಿದೆ.

Advertisement

ಯಾರು ಹೊಣೆ?
ಹಳ್ಳಿಹೊಳೆ ಗ್ರಾಮದ ವಿವಿಧ ಕಡೆಗಳಲ್ಲಿ ಕಳೆದ ಕೆಲವು ಸಮಯದಿಂದ ಚಿರತೆ ಕಾಟ ವಿಪರೀತವಾಗಿದೆ. ಕಳೆದ ಡಿಸಿ ಗ್ರಾಮ ವಾಸ್ತವ್ಯದಲ್ಲೂ ಈ ಬಗ್ಗೆ ಗಮನಕ್ಕೆ ತರಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಲವು ಮನೆಗಳ ದನ, ನಾಯಿಗಳನ್ನು ಚಿರತೆ ಹೊತ್ತೂಯ್ದಿದೆ. ಪ್ರಾಣ ಹಾನಿಯಾದರೆ ಇದಕ್ಕೆ ಯಾರು ಹೊಣೆ?
– ಪ್ರದೀಪ್‌ ಕೊಠಾರಿ, ಅಧ್ಯಕ್ಷರು, ಹಳ್ಳಿಹೊಳೆ ಗ್ರಾ.ಪಂ.

ಎಚ್ಚರ ವಹಿಸಿ
ಕಳೆದ 6 ತಿಂಗಳಲ್ಲಿ ಕುಂದಾಪುರ ಭಾಗದಲ್ಲಿ ಕೆದೂರು, ತೆಕ್ಕಟ್ಟೆ, ಮಾಲಾಡಿ ಸಹಿತ 4 ಚಿರತೆಗಳನ್ನು ಹಿಡಿದು ಸುರಕ್ಷಿತಾರಣ್ಯಕ್ಕೆ ಬಿಡಲಾಗಿದೆ. 4-5 ಕಡೆಗಳಲ್ಲಿ ಚಿರತೆಗಾಗಿ ಬೋನು ಇಡಲಾಗಿದೆ. ಚಿರತೆ ಹಿಡಿಯಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಜನರು ಎಚ್ಚರ ವಹಿಸಬೇಕು. ಕಾಡು ದಾರಿಯಲ್ಲಿ ಒಂಟಿಯಾಗಿ ಹೋಗದಿರುವುದು ಉತ್ತಮ.
– ಕಿರಣ್‌ ಬಾಬು, ಕುಂದಾಪುರ ವಲಯ ಅರಣ್ಯಾಧಿಕಾರಿ

ಸೂಕ್ತ ಕ್ರಮಕ್ಕೆ ಆಗ್ರಹ 
ಅಲ್ಲಲ್ಲಿ ನಾಡಿಗೆ ಲಗ್ಗೆಯಿಡುವ ಚಿರತೆಗಳು ಸಾಕು ಪ್ರಾಣಿಗಳು, ಮನುಷ್ಯರ ಮೇಲೆ ದಾಳಿ ಮಾಡು ತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಾರ್ಯಾಚರಣೆ ನಡೆಸಿ, ಚಿರತೆಗಳನ್ನು ಹಿಡಿದು, ಜನರಲ್ಲಿನ ಭಯವನ್ನು ನಿವಾರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next