Advertisement

4.5 ಕೋ.ರೂ. ವೆಚ್ಚದಲ್ಲಿ ಡಿಪೋ ಮರು ನಿರ್ಮಾಣ

02:05 AM Nov 17, 2018 | Team Udayavani |

ಕುಂದಾಪುರ: ಇಲ್ಲಿನ ಕೆಎಸ್‌ಆರ್‌ಟಿಸಿ ಘಟಕವನ್ನು 4.5 ಕೋ.ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು. ಅವರು ಶುಕ್ರವಾರ ಕುಂದಾಪುರದ ಕೆಎಸ್‌ಆರ್‌ಟಿಸಿ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ, ನಿರ್ವಹಣೆ ಹಾಗೂ ನೌಕರರ ಸಮಸ್ಯೆ ಆಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಈಗ ಇರುವ ಜಾಗದಲ್ಲೇ ಸುಸಜ್ಜಿತ, ಹೆಚ್ಚಿನ ಬಸ್‌ ನಿಲ್ಲಿಸಲು ಅನುಕೂಲ ವಾಗುವಂತೆ ಡಿಪೋ ಪುನರ್‌ ನಿರ್ಮಾಣ ಮಾಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯಿಂದ ಸುಮಾರು 46 ಕೋ.ರೂ. ವೆಚ್ಚದಲ್ಲಿ ಬಸ್‌ ನಿಲ್ದಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

Advertisement

ನಿಲ್ದಾಣದಲ್ಲೇ ಸರಕಾರಿ ಕಚೇರಿ
ಬೈಂದೂರಿನ ಯಡ್ತರೆಯಲ್ಲಿ ನಿರ್ಮಾಣವಾಗುತ್ತಿರುವ ಬಸ್‌ ನಿಲ್ದಾಣದ ಮೇಲಿನ ಮಹಡಿಯಲ್ಲಿ ಸರಕಾರಿ ಕಚೇರಿಗಳನ್ನು ತೆರೆಯಲಾಗುವುದು. ಇದರಿಂದ ಗ್ರಾಮೀಣ ಭಾಗದಿಂದ ಬರುವ  ಸಾರ್ವ ಜನಿಕರಿಗೆ ಅನುಕೂಲವಾಗಲಿದೆ ಎಂದರು.

ಆದ್ಯತೆ ನೆಲೆಯಲ್ಲಿ ಬಸ್‌
ಕುಂದಾಪುರ, ಬೈಂದೂರು ಗ್ರಾಮೀಣ ಭಾಗಕ್ಕೆ ಆದ್ಯತೆ ನೆಲೆಯಲ್ಲಿ ಸರಕಾರಿ ಬಸ್‌ ಸೇವೆ ಆರಂಭಿಸಲಾಗುವುದು. ಕೆಲವೊಂದು ಕಡೆ ಬಸ್‌ಗಳು ಮಂಜೂರಾಗಿದ್ದರೂ ಕೂಡ ಆರ್‌ಟಿಒ ಕಡೆಯಿಂದ ಸಮಯ ನಿಗದಿಯಾಗದೇ ಬಾಕಿಯಾಗಿದೆ. ಹಿಂದಿನ ಶಾಸಕರು ಆರಂಭಿಸಿದ ಬಸ್‌ಗಳ ಪೈಕಿ ಕೆಲವನ್ನು ಸ್ಥಗಿತಗೊಳಿಸಿರುವುದರ ಬಗ್ಗೆ ಮಾಜಿ ಶಾಸಕರಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಶಂಕರನಾರಾಯಣದಲ್ಲಿ ಪಂಚಾಯತ್‌ ವತಿಯಿಂದ ಜಾಗ ಕಾಯ್ದಿರಿಸಲಾಗಿದ್ದು, ಕೆಎಸ್‌ಆರ್‌ಟಿಸಿ ಡಿಪೋ ತೆರೆಯಬೇಕು ಎಂದು ಅಲ್ಲಿನ ಹೋರಾಟ ಸಮಿತಿ ಮನವಿ ಸಲ್ಲಿಸಿತು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್‌, ಉಡುಪಿಯ ಪ್ರಾದೇಶಿಕ ಸಾರಿಗೆ ಆಯುಕ್ತ ರಮೇಶ್‌ ವರ್ಣೇಕರ್‌, ಡಿಟಿಒ ಜೈಶಾಂತ್‌, ಮುಖ್ಯ ಎಂಜಿನಿಯರ್‌ ಜಗದೀಶ್‌ ಚಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್‌ ಪಾಲನೇತ್ರ, ವ್ಯವಸ್ಥಾಪಕ ರಾಜೇಶ್‌, ಜೆಡಿಎಸ್‌ ಮುಖಂಡ ಹುಸೇನ್‌ ಹೈಕಾಡಿ ಮತ್ತಿತರರು ಉಪಸ್ಥಿತರಿದ್ದರು.

7-8 ಹೊಸ ಸ್ಲೀಪರ್‌ ಬಸ್‌
ಈಗಾಗಲೇ ಕುಂದಾಪುರದಿಂದ 4 ಸ್ಲೀಪರ್‌ ಕೋಚ್‌ ಬಸ್‌ಗಳನ್ನು ಆರಂಭಿಸಲಾಗಿದೆ. ಹೊಸದಾಗಿ ಖರೀದಿ ಮಾಡಲಾದ 16 ಬಸ್‌ಗಳಲ್ಲಿ 7-8 ಬಸ್‌ಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಕುಂದಾಪುರಕ್ಕೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

3 ಸಾವಿರ ಮಂದಿ ನೇಮಕಾತಿ 
ಇಲಾಖೆಯಲ್ಲಿ ಸಿಬಂದಿ ಕೊರತೆಯಿದ್ದು, 2014ರಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಿದವರ ಸಂದರ್ಶನ ಈಗ ನಡೆಯುತ್ತಿದೆ. ಹೊಸದಾಗಿ 3 ಸಾವಿರ ಜನರ ನೇಮಕಾತಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next