Advertisement

Kundapura: ಕೋಡಿ ಸೀವಾಕ್‌ ತುದಿ ಮತ್ತಷ್ಟು ಕುಸಿತ

11:18 AM Oct 25, 2024 | Team Udayavani |

ಕುಂದಾಪುರ: ಕೆಲವು ವರ್ಷಗಳಿಂದ ಸಹಸ್ರಾರು ಪ್ರವಾಸಿಗರ ಜನಾಕರ್ಷಣೆಯ ತಾಣವಾದ ಕೋಡಿ ಸೀವಾಕ್‌ನ ತುದಿಯು ಅಲೆಗಳ ಅಬ್ಬರಕ್ಕೆ ದಿನೇದಿನೇ ಕುಸಿಯುತ್ತಿದ್ದು, ಬೀಳುವ ಆತಂಕ ಎದುರಾಗಿದೆ. ಕಳೆದ ಮಳೆಗಾಲದಲ್ಲಿಯೇ ಸೀವಾಕ್‌ನ ಬುಡದಲ್ಲಿದ್ದ ಕಲ್ಲುಗಳು, ವಿಶಿಷ್ಟ ವಿನ್ಯಾಸದ ಕಾಂಕ್ರೀಟ್‌ ಸ್ಲ್ಯಾಬ್‌ (ಟೆಟ್ರಾಫೈಡ್‌) ಗಳು ಜಾರಲು ಆರಂಭವಾಗಿತ್ತು. ಕೆಲವು ದಿನಗಳಿಂದ ಉಂಟಾಗು ತ್ತಿರುವ ತೂಫಾನ್‌ ಅಬ್ಬರಕ್ಕೆ ಸೀವಾಕ್‌ ಹಾಗೂ ಸೀವಾಕ್‌ನ ತುದಿಯು ಬಿರುಕು ಬಿಟ್ಟು, ಬೇರ್ಪಟ್ಟ ಸ್ಥಿತಿಯಲ್ಲಿ ಕಾಣುತ್ತಿದೆ.

Advertisement

8 ವರ್ಷಗಳ ಹಿಂದೆ ಕಾಮಗಾರಿ
2016ರಲ್ಲಿ ಗಂಗೊಳ್ಳಿ ಹಾಗೂ ಕೋಡಿಯ ಅಳಿವೆ ಬಾಗಿಲು ಪ್ರದೇಶದಲ್ಲಿ 102 ಕೋ.ರೂ. ವೆಚ್ಚದಲ್ಲಿ ತಡೆಗೋಡೆ (ಬ್ರೇಕ್‌ವಾಟರ್‌) ನಿರ್ಮಾಣ ಆರಂಭಗೊಂಡಿತ್ತು. ಕೋಡಿ ಭಾಗದಲ್ಲಿ 1 ಸಾವಿರ ಮೀ. ಹಾಗೂ ಗಂಗೊಳ್ಳಿ ಭಾಗದಲ್ಲಿ 900 ಮೀ. ಉದ್ದದ ತಡೆಗೋಡೆ ನಿರ್ಮಿಸಲಾಗಿದೆ. ಆ ಬಳಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ಈ ತಡೆಗೋಡೆಯನ್ನು ಸೀವಾಕ್‌ ಆಗಿ ಪರಿವರ್ತಿಸಿತ್ತು.

ಕಳೆದ ವರ್ಷ ಮಳೆಗಾಲದಲ್ಲಿಯೇ ಸೀವಾಕ್‌ನ ಕಲ್ಲುಗಳು, ಸ್ಲ್ಯಾಬ್‌ಗಳು ಕುಸಿಯುತ್ತಿದ್ದ ಬಗ್ಗೆ ಸಾರ್ವಜನಿಕರು, ಮೀನುಗಾರರು ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಗಮನಕ್ಕೆ ತಂದಿದ್ದರು. ಶಾಸಕರು ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಈ ಬಾರಿಯೂ ಸಮಸ್ಯೆ ಮುಂದುವರಿದಿತ್ತು. ಅಧಿಕಾರಿಗಳು ಮಳೆ ಕಡಿಮೆಯಾದ ಬಳಿಕ ದುರಸ್ತಿ ಮಾಡುವುದಾಗಿ ತಿಳಿಸಿದ್ದರು.

ಈಗಲಾದರೂ ಸರಿಪಡಿಸಲಿ
ಸೀವಾಕ್‌ ಅಪಾಯದಲ್ಲಿರುವ ಬಗ್ಗೆ ಸಂಬಂಧ ಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ. ಮಳೆ ಕಡಿಮೆಯಾದ ಬಳಿಕ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದರು. ಇನ್ನಾದರೂ ಸೀವಾಕ್‌ ದುರಸ್ತಿ ಮಾಡದಿದ್ದರೆ ಬಿರುಕು ಬಿಟ್ಟ ಸೀವಾಕ್‌ ಕಡಲಿಗೆ ಕುಸಿದು ಬೀಳುವ ಸಾಧ್ಯತೆಯಿದೆ ಎನ್ನುತ್ತಾರೆ ಕೋಡಿ ಅಶೋಕ್‌ ಪೂಜಾರಿ.

ಬ್ಯಾರಿಕೇಡ್‌ ಇಟ್ಟರೂ ನಿರ್ಲಕ್ಷ್ಯ
ಈಗ ಸೀವಾಕ್‌ ಹಾಗೂ ಸೀವಾಕ್‌ನ ತುದಿ ಬೇರ್ಪಟ್ಟಿದ್ದು, ಸೀವಾಕ್‌ನ ತುದಿ ಭಾಗವು ಮತ್ತಷ್ಟು ಕಡಲಿಗೆ ಜಾರಿದಂತಿದೆ. ಅದನ್ನು ದಾಟಿ ಮುಂದಕ್ಕೆ ತೆರಳದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಇಲಾಖೆಯಿಂದ ಬ್ಯಾರಿಕೇಡ್‌ ಇಡಲಾಗಿದೆ. ಅದಾಗಿಯೂ ಕೆಲವು ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೇ, ಬ್ಯಾರಿಕೇಡ್‌ ದಾಟಿ ಮುಂದೆ ಹೋಗಿ ಜಾರಿದ ತಡೆಗೋಡೆ ಮೇಲೆ ಹತ್ತಿ ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

Advertisement

ಆಳ ಮಾಡಿ ಸ್ಲ್ಯಾಬ್‌ ಹಾಕಬೇಕಿತ್ತು
ಪಂಚಗಂಗಾವಳಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರುವ ಅಳಿವೆ ಬಾಗಿಲಿನಲ್ಲಿ ಅಲೆಗಳ ಅಬ್ಬರ, ನದಿಗಳ ನೀರಿನ ಒತ್ತಡವನ್ನು ನಿಯಂತ್ರಿಸುವ ಸಲುವಾಗಿ, ಮೀನುಗಾರಿಕಾ ಬೋಟುಗಳು ಸುಲಭವಾಗಿ ಬಂದರಿನೊಳಗೆ ಬರುವಂತಾಗಲು ಕೋಡಿ ಹಾಗೂ ಗಂಗೊಳ್ಳಿ ಎರಡೂ ಭಾಗದಲ್ಲೂ ತಡೆಗೋಡೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಪುಣೆಯ ಸಿಎಂಎಫ್‌ಆರ್‌ಐ ತಂಡವು ಅಧ್ಯಯನ ನಡೆಸಿ, ಹೆಚ್ಚಿನ ನೀರಿನ ಒತ್ತಡ ತಡೆಗೆ ಟೆಟ್ರಾಫೈಡ್‌ (ಸ್ಲ್ಯಾಬ್‌)ಗಳನ್ನು ನೀರಿನ ಮಟ್ಟದಿಂದ ಕೆಳಗೆ 5 ಮೀ. ಆಳ ತೆಗೆದು ಹಾಕಲು ಸೂಚಿಸಲಾಗಿತ್ತು. ಆದರೆ ಇದನ್ನು ಪರಿಗಣಿಸದೇ ಕೇವಲ 1 ಮೀ. ಆಳದಲ್ಲಿ ಈ ಸ್ಲ್ಯಾಬ್‌ಗಳನ್ನು ಹಾಕಿದ್ದರಿಂದ ಹೀಗೆ ಕುಸಿಯುಲು ಆರಂಭವಾಗಿದೆ ಎನ್ನುತ್ತಾರೆ ಗಂಗೊಳ್ಳಿಯ ಮೀನುಗಾರ ಮುಖಂಡ ರಮೇಶ್‌ ಕುಂದರ್‌.

ಮೇಲಧಿಕಾರಿಗಳಿಗೆ ಅಂದಾಜು ಪಟ್ಟಿ ಸಲ್ಲಿಕೆ
ಕೋಡಿ ಸೀವಾಕ್‌ ಕಲ್ಲುಗಳು ಜಾರಿದ, ಸೀವಾಕ್‌ ಕುಸಿದ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೂ ತಿಳಿಸಲಾಗಿದೆ. ದುರಸ್ತಿ ಸಂಬಂಧ ಪರಿಶೀಲಿಸಿ, ಅಂದಾಜು ಪಟ್ಟಿ ಸಲ್ಲಿಸಲು ಸೂಚಿಸಿದ್ದು, ಅದರಂತೆ ಈಗ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. – ಶೋಭಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next