Advertisement

ಕೋಡಿ ಕಡಲತಡಿಯಲ್ಲಿ ಹಸುರು ಹೊದಿಕೆ

12:07 PM Jul 30, 2022 | Team Udayavani |

ಕುಂದಾಪುರ: ಕೋಡಿ ಕಡಲ ತೀರದಲ್ಲಿ ಔಷಧೀಯ, ಆಲಂಕಾರಿಕ, ಇತರ ಗಿಡಗಳನ್ನು ಹಾಕಿಸಲು ಪುರಸಭೆ ಮುಂದಾಗಿದೆ. ಎರಡೂವರೆ ಸಾವಿರ ಗಿಡಗಳನ್ನು ಹಾಕಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಕೋಡಿಯ ಕಡಲತೀರತದಲ್ಲಿ ಅಪೂರ್ವ ವನ ಮಾದರಿಯಲ್ಲಿ ಗಿಡ ಮರಗಳನ್ನು ಕಾಣಬಹುದು.

Advertisement

ಯಾವೆಲ್ಲ ಗಿಡಗಳು 1

ಎಕರೆ ಪ್ರದೇಶದಲ್ಲಿ ಲೈಟ್‌ಹೌಸ್‌ ಬಳಿ ರೈಟಿಯಾ ಟಿನ್‌ ಟೊರಿಯಾ, ಪಾರಿಶಾ (ಹೂವರಸಿ), ಬೆಗ್ಗರ್ಸ್‌ ಬೌಲ್‌, ಸಮುದ್ರಫ‌ಲ (ಹಿಜ್ಜಾಲ), ಅಮೂರ ರೊಹಿತಕ, ಪುತ್ರನ್‌ ಜೀವಾ ರಾಕ್ಸ್‌ಬರ್ಗ್‌, ರಕ್ತಹೊನ್ನೆ (ಬೇಂಗ), ಬಿಕ್ಸಾ, ಶ್ರೀಕುಟಜ, ಅಮೂರ, ಗಾಳಿ, ಸುರಗೆ, ಜಾರಿಗೆ, ರೆಂಬೆ (ಬಕುಳ), ಸೀತಾ ಅಶೋಕ ಹೀಗೆ ವೈವಿಧ್ಯದ ಗಿಡಗಳು ಇಲ್ಲಿ ಜೀವಪಡೆಯಲಿವೆ. ಈ ಭಾಗಕ್ಕೆ ಬರುವ ಪ್ರವಾಸಿಗರಿಗೆ ಅಪರೂಪದ ಗಿಡಗಳನ್ನು ನೋಡುವ ಅವಕಾಶವೂ ದೊರೆಯಲಿದೆ. ಗಿಡಗಳನ್ನು ನೆಟ್ಟ ಬಳಿಕ ಅವುಗಳಿಗೆ ಬೇಲಿ ಹಾಕಿ ಸಂರಕ್ಷಿಸುವ ಕಾರ್ಯವೂ ನಡೆಯಲಿದೆ.

ವಾತಾವರಣ ಸ್ನೇಹಿ

ಸಮುದ್ರದ ಬದಿಯಲ್ಲಿ ಉಪ್ಪು ನೀರಿನ ಉಪ್ಪು ಗಾಳಿಯ ವಾತಾವರಣದಲ್ಲಿ ಬೆಳೆಯುವ ನಿರ್ದಿಷ್ಟ ತಳಿಯ ಗಿಡಗಳನ್ನೇ ವಿವಿಧ ಕಡೆಗಳ ನರ್ಸರಿಯಿಂದ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ಮಣ್ಣು ಹಾಕಿಸಿ ಅದರಲ್ಲೇ ಬೆಳೆಸಲು ತೀರ್ಮಾನಿಸಲಾಗಿದೆ. ಸರಕಾರಿ ನರ್ಸರಿಯಲ್ಲಿ ದೊರೆಯುವ ವಿಶಿಷ್ಟ ಗಿಡಗಳನ್ನು ಆಯ್ದು ನೆಡಲಾಗುತ್ತಿದೆ. ಅರಣ್ಯ ಇಲಾಖೆಯ ಸರಕಾರಿ ನರ್ಸರಿಗಳಲ್ಲಿ ಪ್ರತೀವರ್ಷ ಲಕ್ಷಾಂತರ ಗಿಡಗಳನ್ನು ಬೆಳೆಸಿ ನೆಡಲು ನೀಡಿದ ಮಾಹಿತಿಯನ್ನು ತಿಳಿಸಲಾಗುತ್ತದೆ. ಅದಕ್ಕಾಗಿ ಇಲಾಖೆ ಕೋಟ್ಯಂತರ ರೂ. ವ್ಯಯಿಸುತ್ತದೆ. ಆದರೆ ಪ್ರತೀ ವರ್ಷ ನೆಟ್ಟ ಆ ಲಕ್ಷಾಂತರ ಗಿಡಗಳು ಎಲ್ಲಿ ಹೋದವು ಎಂದು ಯಾರಿಗೂ ತಿಳಿದಿರುವುದಿಲ್ಲ. ಏಕೆಂದರೆ ಹಾಗೆ ವರ್ಷವೂ ಲಕ್ಷಗಟ್ಟಲೆ ಗಿಡಗಳನ್ನು ನೆಟ್ಟರೆ ವನಮಹೋತ್ಸವ ಎಂದೋ ಅರ್ಥಪೂರ್ಣವಾಗಬೇಕಿತ್ತು. ಕಳೆದ ವರ್ಷ ಗಿಡ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಡುವ ಪ್ರಮೇಯ ಬರುತ್ತಿರಲಿಲ್ಲ. ಒಂದೊಮ್ಮೆ ಅರಣ್ಯ ಇಲಾಖೆ ನೀಡಿದ ಗಿಡಗಳು ನೆಡುವ ಕುರಿತು, ಅದು ಬೆಳೆಯುತ್ತದೆ ಎನ್ನುವ ಕುರಿತು ಸರಿಯಾದ ಸುಪರ್ದಿ ನಡೆಸಿದರೆ ಪುರಸಭೆ ಇಲ್ಲಿ ಗಿಡ ನೆಡಲು ತನ್ನ ಅನುದಾನ ವ್ಯಯಿಸಬೇಕಾದ ಅನಿವಾರ್ಯ ಬರುವುದಿಲ್ಲ.

Advertisement

ಹಸುರು ಕೋಡಿ

ಕೋಡಿ ಬ್ಯಾರೀಸ್‌ ಶಿಕ್ಷಣ ಸಂಸ್ಥೆಯವರು ಹಸುರು ಕೋಡಿ ಅಭಿಯಾನ ಹಮ್ಮಿಕೊಂಡಿದ್ದು ಪ್ರತೀ ವಾರ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ವಿವಿಧ ಶಾಲೆ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೌರ್ಯ ತಂಡ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಸಲ್ಪಡುತ್ತಿರುವ ಶೌರ್ಯ ತಂಡದವರು ಕೂಡ ಬೀಚ್‌ ಸ್ವಚ್ಛತೆ ನಡೆಸಿದ್ದಾರೆ. ಹೀಗೆ ಅನೇಕ ಸಂಘ ಸಂಸ್ಥೆಗಳು, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಜೆಸಿಐಯಂತಹ ಸಂಸ್ಥೆಗಳ ಸದಸ್ಯರು ಬೀಚ್‌ ಸ್ವಚ್ಛತೆಯಲ್ಲಿ ಆಗಾಗ ಭಾಗವಹಿಸುತ್ತಿದ್ದಾರೆ.

ಕ್ಲೀನ್ ಕುಂದಾಪುರ

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಎಂಹ ಹೆಸರಿನಲ್ಲಿ ಸಮಾನಾಸಕ್ತರ ತಂಡ ಕಳೆದ 150 ವಾರಗಳಿಂದ ಕೋಡಿಯಲ್ಲಿ ಬೀಚ್‌ ಸ್ವಚ್ಛತೆ ನಡೆಸುತ್ತಿದೆ. ಇದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಸರಕಾರಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವಕೀಲರು, ವೈದ್ಯರು, ಉಪನ್ಯಾಸಕರು, ಅರಣ್ಯ ಪೊಲೀಸ್‌ ಇಲಾಖೆಯವರು ಎಂದು ವಿವಿಧ ವರ್ಗದವರು ಪ್ರತಿ ವಾರ ಭಾಗವಹಿಸುತ್ತಿದ್ದಾರೆ. ಲೋಡುಗಟ್ಟಲೆ ತ್ಯಾಜ್ಯ ಪ್ರತಿ ವಾರ ಸಂಗ್ರಹವಾಗುತ್ತದೆ. ಇದನ್ನು ಪುರಸಭೆ ವಿಲೇವಾರಿ ಮಾಡುತ್ತದೆ. ‌

ಪ್ರವಾಸಿ ತಾಣ

ಕೋಡಿಯಲ್ಲಿ ಸೀವಾಕ್‌, ಲೈಟ್‌ಹೌಸ್‌ ಇರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿಯವರು ಇಲ್ಲಿ ಬೋಟಿಂಗ್‌, ಕಯಾಕಿಂಗ್‌ ಹಾಗೂ ಮರಳ ಆಟಗಳು, ಬೈಕಿಂಗ್‌ ನಡೆಸುತ್ತಿರುವ ಕಾರಣ ಪ್ರವಾಸಿಗರ ಆಕರ್ಷಣೆ ಹೆಚ್ಚಾಗಿದೆ. ಈ ಪರಿಸರದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸಂಚಾರಿ ಶೌಚಾಲಯ ಅಳವಡಿಸಲಾಗಿದ್ದರೂ ಸಮರ್ಪಕ ನಿರ್ವಹಣೆ ಮಾಡಿಲ್ಲ.

ವೈವಿಧ್ಯಮಯ ಗಿಡಗಳು: ಸಮುದ್ರದ ಬದಿಯ ವಾತಾವರಣದಲ್ಲಿ ಬೆಳೆಯುವ ಗಿಡಗಳನ್ನೇ ಆಯ್ಕೆ ಮಾಡಿ ನೆಡಲು ತೀರ್ಮಾನಿಸಲಾಗಿದೆ. 1 ಎಕರೆ ಜಾಗದಲ್ಲಿ ಅಮೂಲ್ಯ ಗಿಡಗಳನ್ನು ನೆಡಲು ಆಡಳಿತ ಮಂಡಳಿ ಸಮ್ಮತಿಸಿದೆ. ಇದಕ್ಕಾಗಿ ಪುರಸಭೆ ನಿಧಿಯನ್ನು ಉಪಯೋಗಿಸಲಾಗುತ್ತದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next