ಕುಂದಾಪುರ: ಕುಂದಾಪುರ ತಾಲೂಕಿನ ಜನ ಕರ್ನಾಟಕಕ್ಕೆ , ಭಾರತಕ್ಕೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲಿ ಗಂಗೊಳ್ಳಿಯೂ ಸೇರಿದೆ. ವೈದ್ಯರು, ಕಥೆ, ಕಾದಂಬರಿ, ಪ್ರವಾಸಿ ಕಥನಗಳ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ. ಹೋಟೆಲ್ ಉದ್ಯಮ, ಬ್ಯಾಂಕ್ ಸ್ಥಾಪನೆ, ಕಲೆ, ಸಂಸ್ಕೃತಿ, ರಂಗ ಚಟುವಟಿಕೆಯಲ್ಲಿ ನಮ್ಮವರ ಸಾಧನೆ ದೊಡ್ಡದು…ಇದು ಕುಂದಾಪುರ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಅಂಕಣಕಾರ ಕೋ.ಶಿವಾನಂದ ಕಾರಂತ್ ಅವರ ನುಡಿಯಾಗಿದೆ.
ಅವರು ರವಿವಾರ (ಫೆ.19) ಗಂಗೊಳ್ಳಿಯ ಸರಸ್ವತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಂಗೊಳ್ಳಿ ವಿಠಲ ಶೆಣೈ ಸಭಾಂಗಣ, ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ವೇದಿಕೆಯಲ್ಲಿ ಉದ್ಘಾಟನೆಗೊಂಡ ಕುಂದಾಪುರ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ 300ಕ್ಕೂ ಅಧಿಕ ಗ್ರಾಮದ, 15ಲಕ್ಷಕ್ಕೂ ಹೆಚ್ಚು ಮಂದಿ ಮಾತನಾಡುವ ಕುಂದಾಪುರ ಭಾಷೆಗೆ ಸರಕಾರ ವಿಶೇಷವಾದ ಸ್ಥಾನಮಾನ ನೀಡಬೇಕು. ಕುಂದಾಪುರ ಕನ್ನಡ ಅಕಾಡೆಮಿ ಹಾಗೂ ಕುಂದಾಪುರ ಕನ್ನಡ ಪೀಠ ಸ್ಥಾಪನೆಯಾಗಬೇಕು. ಆದರೆ ನಮ್ಮ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಲಿ, ಶಾಸಕರಾಗಲಿ ಈ ವಿಚಾರದಲ್ಲಿ ಗಂಭೀರ ಪ್ರಯತ್ನ ನಡೆಸದಿರುವುದು ಬೇಸರದ ಸಂಗತಿಯಾಗಿದೆ. ಯುವ ಜನಾಂಗ ಈ ವಿಚಾರದಲ್ಲಿ ಹೋರಾಟ ನಡೆಸಲಿ ಎಂದು ಇವರೆಲ್ಲಾ ಬಯಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ ಎಂದು ಹೇಳಿದರು.
ಬೆಂಗಳೂರು ಹೋಟೆಲ್ ಉದ್ಯಮಿ ಜಗನ್ನಾಥ್ ವಿ.ಪೈ ಗಂಗೊಳ್ಳಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ನುಡಿಗಳನ್ನಾಡಿದರು.ಬೆಳಗೋಡು ರಮೇಶ್ ಭಟ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಗಣೇಶ್ ಕಾಮತ್, ಸಮ್ಮೇಳನದ ಕಾರ್ಯದರ್ಶಿ ಯು.ಎಸ್.ಶೆಣೈ, ಸರಸ್ವತಿ ಪ.ಪೀ.ಕಾಲೇಜಿನ ಪ್ರಿನ್ಸಿಪಾಲ್ ಎಮ್.ಸಿ.ಕವಿತಾ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಕ.ಸಾ.ಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಕೋಶಾಧ್ಯಕ್ಷ ಮನೋಹರ್ ಪಿ, ಕುಸುಮಾ ಕಾರಂತ್, ಬೈಂದೂರು ಕ.ಸಾ.ಪ. ಅಧ್ಯಕ್ಷ ರಘು ನಾಯ್ಕ್, ಬ್ರಹ್ಮಾವರ ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಅಕ್ಷತಾ ಗಿರೀಶ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಕೋ.ಶಿ.ಕಾರಂತರ ವ್ಯಕ್ತಿ ಚಿತ್ರಣದ ವಾಗ್ ವೈಖರಿ ಹಾಗೂ ಹತ್ತು ಮುತ್ತುಗಳು, ಅರಿವಿಗೆ ಬಾರದವರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಸಾಹಿತ್ಯ ಸಮ್ಮೇಳನ ಉದ್ಘಾಟನೆಗೂ ಮುನ್ನ ಗಂಗೊಳ್ಳಿಯ ರಾಮ ಮಂದಿರದಿಂದ ಎಸ್ ವಿ. ಪ.ಪೂ. ಕಾಲೇಜು ಆವರಣದವರೆಗೆ ಸಮ್ಮೇಳನಾಧ್ಯಕ್ಷ ಕೋ.ಶಿ. ಕಾರಂತರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.ಸಭಾ ಕಾರ್ಯಕ್ರಮಕ್ಕೂ ಮೊದಲು ಗಣೇಶ್ ಗಂಗೊಳ್ಳಿ ಮತ್ತು ತಂಡ ನಾಡಗೀತೆ ಹಾಡಿದ್ದು, ಎಸ್.ವಿ ವಿದ್ಯಾರ್ಥಿಗಳು ರೈತಗೀತೆ ಹಾಡಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ಮಂಜುನಾಥ್ ಕೆಎಸ್ ವಂದಿಸಿದರು. ದಿನಕರ.ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊಂಚಾಡಿ ರಾಧಾ ಶೆಣೈ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಉಮೇಶ್ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.