Advertisement

Kundapura: ಪತಿ-ಪತ್ನಿ ಜಗಳ: ನದಿಗೆ ಹಾರಿದ ಪತಿ ನಾಪತ್ತೆ!

11:31 PM Jul 16, 2024 | Team Udayavani |

ಕುಂದಾಪುರ: ಪತಿ-ಪತ್ನಿಯ ನಡುವಿನ ಕೌಟುಂಬಿಕ ಕಲಹದಿಂದಾಗಿ ಪತಿಯು ತುಂಬಿ ಹರಿಯುತ್ತಿದ್ದ ವಾರಾಹಿ ನದಿಗೆ ಹಾರಿ ನೀರಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದ ಘಟನೆ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಕಂಡ್ಲೂರು ಸಮೀಪ ಸಂಭವಿಸಿದೆ.

Advertisement

ಕಾಳಾವರ ಗ್ರಾಮದ ಹರೀಶ್‌ (44) ನದಿಗೆ ಹಾರಿ ನಾಪತ್ತೆಯಾದವರು. ಅವರು ವೀಡಿಯೋಗ್ರಾಫರ್‌ ಆಗಿ ಕೆಲಸ ಮಾಡಿಕೊಂಡಿದ್ದರು.

ತಾಯತ ಎಸೆಯುವುದಾಗಿ ಹೇಳಿ ನದಿಗೆ ಹಾರಿದರು
ಪತಿ-ಪತ್ನಿಯ ಜಗಳದ ಹಿನ್ನೆಲೆಯಲ್ಲಿ ಕಂಡ್ಲೂರು ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್‌ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದರು. ಸ್ಥಳದಲ್ಲಿ ಕೆಲವು ಮಂದಿ ಇದ್ದರೂ ಭಾರೀ ಮಳೆಯ ಕಾರಣ ತುಂಬಿ ಹರಿಯುತ್ತಿದ್ದ ನದಿಗೆ ಇಳಿದು ರಕ್ಷಣೆ ಮಾಡುವುದು ಕಷ್ಟವಾಗಿತ್ತು.

ಮಾಹಿತಿ ತಿಳಿದ ಕಂಡ್ಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಕುಂದಾಪುರದ ಅಗ್ನಿಶಾಮಕ ದಳದವರು, ವಿಪತ್ತು ನಿರ್ವಹಣ ಪಡೆಯವರು ದೋಣಿ ಬಳಸಿ ಹುಡುಕಾಟ ನಡೆಸಿದರು. ಸ್ಥಳೀಯ ದೋಣಿಯವರೂ ಸಹಕರಿಸಿದರು. ಸಂಜೆಯ ವರೆಗೂ ಹುಡುಕಿದರೂ ಹರೀಶ್‌ ಅವರ ಲಭಿಸಿಲ್ಲ.

ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ ಗೌಡ ಭೇಟಿ ನೀಡಿದರು. ಕಂಡ್ಲೂರು ಠಾಣೆಯ ಎಸ್‌ಐ ನೂತನ್‌ ಹಾಗೂ ಸಿಬಂದಿ ಸ್ಥಳದಲ್ಲಿದ್ದರು.

Advertisement

ಘಟನೆ ಹಿನ್ನೆಲೆ

ಹರೀಶ್‌ (44) ಹಾಗೂ ನಾಗರತ್ನ (33) ಅವರದು ಅಂತರ್ಜಾತಿ ಪ್ರೇಮ ವಿವಾಹ. ಮದುವೆಯಾಗಿ 13 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲವು ಸಮಯದಿಂದ ಇವರಿಬ್ಬರ ಮಧ್ಯೆ ಎಲ್ಲ ವಿಚಾರಕ್ಕೂ ಜಗಳ ಆಗುತ್ತಿತ್ತು. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ನಾಗರತ್ನಾ ಅವರು ಪತಿಯನ್ನು ಕರೆಸಿ ಬುದ್ಧಿವಾದ ಹೇಳುವಂತೆ ಕಂಡ್ಲೂರು ಠಾಣೆಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅದರಂತೆ ಮಂಗಳವಾರ ಹರೀಶ್‌, ಅವರ ಪತ್ನಿ, ತಾಯಿ, ಅಕ್ಕನನ್ನು ಠಾಣೆಗೆ ಕರೆಸಿ ಎಲ್ಲರ ಸಮ್ಮುಖದಲ್ಲಿ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಠಾಣೆಯಿಂದ ಮರಳಿ ಬರುತ್ತಿದ್ದ ವೇಳೆ ಹರೀಶ್‌ ಅವರು ಈ ನದಿಗೆ ಹಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next