Advertisement

Bengaluru: ಪತಿಯಿಂದ ತಿಂಗಳಿಗೆ ಬರೋಬ್ಬರಿ 6 ಲಕ್ಷ ಜೀವನಾಂಶ ಕೇಳಿದ ಪತ್ನಿ!

11:59 AM Aug 23, 2024 | Team Udayavani |

ಬೆಂಗಳೂರು: ಪತ್ನಿಯೊಬ್ಬಳು ತನ್ನ ಪತಿಯಿಂದ ಪ್ರತಿ ತಿಂಗಳಿಗೆ ಬರೋಬ್ಬರಿ 6.16 ಲಕ್ಷ ರೂ. ಜೀವನಾಂಶ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂತಹ ಪ್ರಸಂಗ ನಡೆದಿದ್ದು ಹೈಕೋರ್ಟ್‌ನಲ್ಲಿ.

Advertisement

ಜೀವನಾಂಶಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ನಡೆದಿದೆ. ಈ ವೇಳೆ ಪತ್ನಿ ಮಾಸಿಕವಾಗಿ 6.16 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ತಿಂಗಳಿಗೆ ಅಷ್ಟೊಂದು ಹಣ ಖರ್ಚು ಮಾಡುತ್ತಾರಾ ಎಂದು ಪ್ರಶ್ನಿಸಿದೆ. ಆನ್‌ಲೈನ್‌ನಲ್ಲಿ ವಿಚಾರಣೆ ನಡೆದಿರುವುದರಿಂದ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಆಗುತ್ತಿದೆ.

ವಿಚಾರಣೆ ವೇಳೆ ಪತ್ನಿ ಪರ ವಕೀಲರು, ಅರ್ಜಿದಾರರಿಗೆ ಶೂ, ಡ್ರೆಸ್‌, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂಪಾಯಿ ಮತ್ತು ಮನೆಯಲ್ಲಿ ಊಟಕ್ಕೆ 60,000 ರೂಪಾಯಿ ಬೇಕು, ಪ್ರತಿ ತಿಂಗಳು ಕಾನೂನು ಸಲಹೆಗಾರರಿಗೆ ನೀಡಲು 50 ಸಾವಿರ ರೂ. ಅಗತ್ಯವಿದೆ. ಜತೆಗೆ ಮಹಿಳೆಯ ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂಪಾಯಿ ಅಗತ್ಯವಿದೆ. ಒಟ್ಟಾರೆಯಾಗಿ ಪತಿ ತಿಂಗಳಿಗೆ 6,16,300 ಜೀವನಾಂಶ ನೀಡಬೇಕು. ಆ ಕುರಿತು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏನಿದು ಓರ್ವ ವ್ಯಕ್ತಿಗೆ ಮಾಸಿಕವಾಗಿ ಇಷ್ಟು ಮೊತ್ತದ ಅನಿವಾರ್ಯತೆ ಇದೆಯೇ? ಅದೂ ತಿಂಗಳಿಗೆ 6,16,300 ರೂ. ಅಗತ್ಯವಿದೆಯೇ, ಯಾರಾದರೂ ಅಷ್ಟು ಹಣ ಖರ್ಚು ಮಾಡುತ್ತಾರೆಯೇ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೆ ಅಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ ಆಕೆಯೇ ದುಡಿದು ಸಂಪಾದಿಸಬಹುದೇ ಹೊರತು, ಈ ರೀತಿ ಜೀವನಾಂಶ ಪಡೆಯುವುದರಿಂದ ಅಲ್ಲ ಎಂದು ಹೇಳಿದೆ.

ಜತೆಗೆ ಅರ್ಜಿದಾರರ ಮಹಿಳೆಗೆ ಕುಟುಂಬದ ಬೇರಾವ ಜವಾಬ್ದಾರಿ ಇಲ್ಲವೇ? ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ಆದರೂ ಸಹ ಸ್ವಂತ ಖರ್ಚಿಗೆ ಈ ರೀತಿಯಲ್ಲಿ ದೊಡ್ಡ ಮೊತ್ತದ ನಿರೀಕ್ಷೆ ಮಾಡುತ್ತಿದ್ದಾರೆ. ಓರ್ವ ವ್ಯಕ್ತಿಯ ಜೀವನ ನಿರ್ವಹಣೆಗೆ ನಿಜಕ್ಕೂ ಎಷ್ಟು ಹಣ ಬೇಕಾಗಿರುವುದು ಎಂದು ಹೇಳಿ. ಅದಕ್ಕೆ ಸೂಕ್ತ ಕಾರಣಗಳನ್ನು ನೀಡಿ, ನೀವು ನೀಡುವ ಕಾರಣವೂ ಸಮಂಜಸವಾಗಿರಬೇಕು. ಈ ರೀತಿ ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಮಾಡಿಕೊಳ್ಳುವುದು ಕಂಡು ಬಂದರೆ, ಕೋರ್ಟ್‌ ಆಗ ಬೇರೆ ರೀತಿಯಲ್ಲಿಯೇ ಆದೇಶ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ಹೇಳಿದೆ.

Advertisement

ಪತಿಯ ಪರ ವಕೀಲರು, ಅರ್ಜಿದಾರರು ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದ್ದು ಅವರಿಗೆ ಸೇರಿದ ಸುಮಾರು 63 ಲಕ್ಷ ಹಣ ಚಲಾವಣೆಯಲ್ಲಿದೆ ಎಂದರು. ಅದನ್ನು ಪತ್ನಿಯ ಪರ ವಕೀಲರು ನಿರಾಕರಿಸಿದರು. ಕೊನೆಗೆ ನ್ಯಾಯಾಲಯ, ಪತಿ ತನ್ನ ವೇತನ, ಆಸ್ತಿ ಮತ್ತಿತರ ವಿವರಗಳನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಬೇಕು, ಪತ್ನಿ ತನಗೆ ತಿಂಗಳ ಖರ್ಚಿಗೆ ನಿಜವಾಗಿಯೂ ಎಷ್ಟು ಹಣದ ಅಗತ್ಯವಿದೆ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕೆಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ತಿಂಗಳಿಗೆ ವ್ಯಯಿಸುವ ವಿವರ ನೀಡಿದ ಪತ್ನಿ

 ಶೂ, ಡ್ರೆಸ್‌, ಬಳೆ ಖರೀದಿಗೆ 15 ಸಾವಿರ

 ಮನೆಯಲ್ಲಿ ಊಟಕ್ಕಾಗಿ 60 ಸಾವಿರ ರೂ.

 ಕಾನೂನು ಸಲಹೆಗಾರರಿಗೆ 50 ಸಾವಿರ

 ಔಷಧ, ವೈದ್ಯಕೀಯ ವೆಚ್ಚಕ್ಕಾಗಿ 5 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next