Advertisement

Kundapura: ಕಲ್ಲಂಗಡಿ; ಜಿಲ್ಲೆಯ ರೈತರಿಗೆ ಭಾರೀ ಆಸಕ್ತಿ!

04:38 PM Dec 29, 2024 | Team Udayavani |

ಕುಂದಾಪುರ: ಜಿಲ್ಲಾದ್ಯಂತ ಈ ಬಾರಿ ಕಲ್ಲಂಗಡಿ ಬೆಳೆಯುವ ಪ್ರದೇಶ ಕಳೆದ ವರ್ಷಕ್ಕಿಂತ ಹೆಚ್ಚಳವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 180 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದರೆ, ಈ ಬಾರಿ 228 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ.

Advertisement

ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಬೇಸಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲು ಬೆಳೆಗಾರರು ಮುಂದಾಗಿದ್ದಾರೆ. ಸೆಖೆ ಜಾಸ್ತಿಯಾದಷ್ಟು ಕಲ್ಲಂಗಡಿ ಹಣ್ಣು, ಹಣ್ಣಿನ ಜ್ಯೂಸ್‌ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕಲ್ಲಂಗಡಿ ಹಣ್ಣಿನ ದರವೂ ಹೆಚ್ಚಳವಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಮುಂದಾಗಿರುವುದು ಉತ್ತಮ ಬೆಳವಣಿಗೆ.

ಬೈಂದೂರಲ್ಲಿ ಮತ್ತಷ್ಟು ವಿಸ್ತರಣೆ
ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿಯೇ ಬಹುಪಾಲು ಕಲ್ಲಂಗಡಿ ಹಣ್ಣು ಬೆಳೆಯುವ ಪ್ರದೇಶವೆಂದರೆ ಅದು ಅವಿಭಜಿತ ಕುಂದಾಪುರ ತಾಲೂಕು. ಅದರಲ್ಲೂ ಬೈಂದೂರು ಹೋಬಳಿ. 228 ಎಕರೆ ಪ್ರದೇಶದಲ್ಲಿ ಬರೋಬ್ಬರಿ 185 ಎಕರೆಯಷ್ಟು ಪ್ರದೇಶ ಕುಂದಾಪುರದ್ದೇ ಆಗಿದೆ. ನಾಗೂರು ಒಂದೇ ಗ್ರಾಮದಲ್ಲಿ 80 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಳೆದ ಬಾರಿ ಬೈಂದೂರಿನಲ್ಲಿ 147 ಎಕರೆ ಪ್ರದೇಶಗಳಲ್ಲಿ ಬೆಳೆಯಲಾಗಿದ್ದರೆ, ಈ ಬಾರಿ 185 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿದೆ. ಅಂದರೆ 38 ಎಕರೆಯಷ್ಟು ಪ್ರದೇಶ ವಿಸ್ತರಣೆಯಾಗಿದೆ.

ಪ್ರದೇಶ ವಿಸ್ತರಣೆ
ಬೈಂದೂರು ಹೋಬಳಿಯ ಕಿರಿಮಂಜೇಶ್ವರ, ನಾಗೂರು, ನಾವುಂದ, ಕಂಬದಕೋಣೆ, ಹೇರಂ ಜಾಲು, ಕೆರ್ಗಾಲು, ಉಪ್ಪುಂದ, ಬಿಜೂರು, ನಾಯ್ಕನಕಟ್ಟೆ, ಶಿರೂರು, ನೂಜಾಡಿ, ಹೇರೂರು, ನಂದನವನ, ಪಡುಕೋಣೆ, ನಾಡ, ಹಕ್ಲಾಡಿ ಮತ್ತಿತರ ಭಾಗದಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಲ್ಲೆಲ್ಲ ಪ್ರದೇಶ ಜಾಸ್ತಿಯಾಗಿದೆ.

ಇನ್ನು ಕೋಟ, ವಡ್ಡರ್ಸೆ, ಮಣೂರು, ಮಟ್ಟು, ಹಿರಿಯಡಕ, ಕೊಕ್ಕರ್ಣೆ ಭಾಗದಲ್ಲೂ ಅಲ್ಪ ಪ್ರಮಾಣದಲ್ಲಿ ಪ್ರದೇಶ ಜಾಸ್ತಿಯಾಗಿದೆ. ಈ ಬಾರಿ ಆಲೂರು, ಅಂಪಾರು, ಭಾಗದಲ್ಲೂ ಕಲ್ಲಂಗಡಿ ಬೆಳೆಯಲು ರೈತರು ಮುಂದಾಗಿದ್ದು, ಇದರಿಂದ ಕಲ್ಲಂಗಡಿ ಬೆಳೆಯುವ ಪ್ರದೇಶ ವಿಸ್ತರಣೆಯಾಗಿದೆ. ಒಟ್ಟಾರೆ ಶೇ.20 ರಷ್ಟು ಪ್ರದೇಶ ಹೆಚ್ಚಳವಾಗಿದೆ.

Advertisement

ಆಸಕ್ತಿ ನಡುವೆಯೂ ಆತಂಕ!
ಕಲ್ಲಂಗಡಿ ಬೆಳೆಗೆ ಹೂವು ಬಿಡುವ ವೇಳೆಗೆ ಮೋಡ ಕವಿದ ವಾತಾವರಣ ಎದುರಾಗಿದ್ದು ಆತಂಕ ತಂದಿದೆ. ಮೋಡ ಹೆಚ್ಚಾದರೆ ಹೂವು ಕರಟುವ ಅಪಾಯವಿರುತ್ತದೆ. ಕಲ್ಲಂಗಡಿಗೆ ಇನ್ನು 15 ದಿನ ಚೆನ್ನಾಗಿ ಬಿಸಿಲು ಬೇಕು.

ಮೊಗ್ಗು ಬಾಡುವ ಭೀತಿ
2-3 ದಿನಗಳಿಂದ ಸಣ್ಣದಾಗಿ ಹೂವು ಬಿಡಲು ಆರಂಭವಾಗಿದೆ. ಇನ್ನು 15 ದಿನ ಒಳ್ಳೆಯ ಬಿಸಿಲಿನ ಅಗತ್ಯವಾಗಿದೆ. ಒಂದು ವೇಳೆ ಚಳಿ ಇಲ್ಲದಿದ್ದರೂ ಪರಾÌಗಿಲ್ಲ. ಆದರೆ ಮೋಡ ಮಾತ್ರ ಇರಬಾರದು. ಮೋಡ ಬಂದರೆ ಹೂವು ಮೊಗ್ಗಿನಲ್ಲಿಯೇ ಕರಟಿ ಹೋಗುತ್ತದೆ. ಹಿಂದಿನ ಕೆಲ ವರ್ಷಗಳಿಗಿಂತ ಕಳೆದ ಬಾರಿ ಒಳ್ಳೆಯ ಇಳುವರಿ ಬಂದಿತ್ತು. ದರವೂ ಒಳ್ಳೆಯದಿತ್ತು ಎನ್ನುತ್ತಾರೆ ನಾಗೂರಿನ ಕಲ್ಲಂಗಡಿ ಬೆಳೆಗಾರ ನರಸಿಂಹ ದೇವಾಡಿಗ.

ಈ ಬಾರಿ 8 ಎಕರೆಯಲ್ಲಿ ಕೃಷಿ
ಕಳೆದ ವರ್ಷ 3 ಎಕರೆ ಬೆಳೆದಿದ್ದೆ. 30 ಟನ್‌ ಇಳುವರಿ ಬಂದಿತ್ತು. ಒಳ್ಳೆಯ ಬೆಲೆ ಸಿಕ್ಕಿತ್ತು. ಸೀಸನ್‌ನಲ್ಲಿ ಕೆಜಿಗೆ 16 ರೂ. ಇತ್ತು. ಈ ಬಾರಿ 8 ಎಕರೆ ಬೆಳೆದಿದ್ದೇನೆ. ಎಲ್ಲವೂ ಒಮ್ಮೆಲೇ ಬೆಳೆದರೆ ಮಾರುಕಟ್ಟೆ ಇರಲ್ಲ. ಹಂತ-ಹಂತವಾಗಿ ಸ್ವಲ್ಪ ದಿನ ಬಿಟ್ಟು ಬೆಳೆಯಬೇಕು. ಆಗ ಬೇಡಿಕೆಯೂ ಜಾಸ್ತಿ ಇರುತ್ತದೆ. ನಾನು 11 ವರ್ಷದಿಂದ ಬೆಳೆಯುತ್ತಿದ್ದೇನೆ. ನಾವೇ ಸ್ವಂತ ಮಾಡುವುದರಿಂದ ನಷ್ಟ ಆಗಲ್ಲ.
– ಸುಧಾ ಬಳೆಗಾರ್‌ ಹಳಗೇರಿ, ಕಲ್ಲಂಗಡಿ ಬೆಳೆಗಾರರು

ಬೇಡಿಕೆ ಹೆಚ್ಚುವ ನಿರೀಕ್ಷೆ
ಕಳೆದ ವರ್ಷ ಕಲ್ಲಂಗಡಿ ಹಣ್ಣು ಹಾಗೂ ಎಳನೀರಿಗೆ ಭಾರೀ ಬೇಡಿಕೆ ಇತ್ತು. ಅದರಿಂದ ಈ ಬಾರಿ ಕಲ್ಲಂಗಡಿ ಬೆಳೆಯುವ ಪ್ರದೇಶ ವಿಸ್ತರಣೆಯಾಗಿದೆ. ಕಲ್ಲಂಗಡಿ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಳೆಗಾರರಿಗೆ ತೋಟಗಾರಿಕಾ ಇಲಾಖೆಯಿಂದ ಹೆಕ್ಟೇರ್‌ಗೆ 20 ಸಾವಿರ ರೂ. ಸಬ್ಸಿಡಿ ಹಣವನ್ನು ಸಹ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯಬಹುದು.
– ನಿಧೀಶ್‌ ಕೆ.ಜೆ., ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next