ಉಡುಪಿ : ಕುಂದಾಪುರ ತಾಲೂಕಿನ ಮನೆಯೊಂದರಲ್ಲಿ ಕೆಲಸ ಮಾಡುತ್ತ ತಾಯಿಯೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಹಾವೇರಿ ಮೂಲದ ಹನುಮಂತ (55) ನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 20 ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿ ತನ್ನ ತಾಯಿ ಜತೆ ತೋಟದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಅದೇ ತೋಟದಲ್ಲಿ ಆರೋಪಿ ಕೆಲಸ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸಿಸುತ್ತಿದ್ದನು. ಹನುಮಂತ 2021ರ ಜನವರಿ ತಿಂಗಳಲ್ಲಿ ಬಾಲಕಿ ಒಬ್ಬಳೇ ಮನೆಯಲ್ಲಿರುವಾಗ ಅತ್ಯಾಚಾರ ಎಸಗಿದ್ದನು. ಈ ಕುರಿತು ನೊಂದ ಬಾಲಕಿ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನೊಂದ ಬಾಲಕಿಯ ತಾಯಿ ಆರೋಪಿ ವಿರುದ್ಧ ನೀಡಿದ ದೂರಿನಂತೆ ಆಗಿನ ಕುಂದಾಪುರ ಠಾಣಾ ಎಸ್‌ಐ ಸದಾಶಿವ ಗವರೋಜಿ ಪ್ರಕರಣ ದಾಖಲಿಸಿಕೊಂಡು, ಅನಂತರ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಸಂಪೂರ್ಣ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ : ಅಂಜನಾದ್ರಿಗೆ ಭೂಸ್ವಾಧೀನ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ, ಹೆಚ್ಚಿನ ಪರಿಹಾರಕ್ಕೆ ಪಟ್ಟು
ಪ್ರಕರಣದ 18 ಸಾಕ್ಷಿಗಳ ಪೈಕಿ 12 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ಸಾಕ್ಷಿ ಮತ್ತು ನೊಂದ ಬಾಲಕಿ ಹಾಗೂ ಇತರ ಸಾಕ್ಷಿಗಳು ಹೇಳಿದ ಸಾಕ್ಷ್ಯಾಧಾರಗಳು ಅಭಿಯೋಜನೆಗೆ ಪರವಾಗಿದ್ದು, ಆರೋಪಿ ಹನುಮಂತ ಅತ್ಯಾಚಾರ ಎಸಗಿದಕ್ಕಾಗಿ 20ವರ್ಷ ಕಠಿನ ಜೈಲು ಶಿಕ್ಷೆ ಮತ್ತು 25ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷಗಳ ಸಾದಾ ಶಿಕ್ಷೆ ಮತ್ತು ಒಟ್ಟು ದಂಡದಲ್ಲಿ 40 ಸಾವಿರ ರೂ. ಬಾಲಕಿಗೆ ಮತ್ತು 5000 ರೂ. ಸರಕಾರಕ್ಕೆ ಪಾವತಿಸಬೇಕು ಮತ್ತು ನೊಂದ ಬಾಲಕಿಗೆ 5 ಲ.ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.