Advertisement

ಕುಂದಾಪುರ : ಪ್ರೀತಿ ಎಂದು ನಂಬಿ ಮೋಸ ಹೋದ ಯುವತಿ ಆತ್ಮಹತ್ಯೆ : ಲವ್‌ ಜೆಹಾದ್‌ ಆರೋಪ

11:15 PM May 25, 2022 | Team Udayavani |

ಕುಂದಾಪುರ : ಉಪ್ಪಿನಕುದ್ರು ಮೂಲದ ಶಿಲ್ಪಾ (25) ಅವರು ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಬುಧವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Advertisement

ಈಕೆ ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್‌ (32) ಎಂಬಾತನ ಪ್ರೀತಿಗೆ ಬಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಜೀಜ್‌ ಹಾಗೂ ಆತನ ಪತ್ನಿ ಸಲ್ಮಾ ವಿರುದ್ಧ ಮೃತರ ಸಹೋದರ ದೂರು ನೀಡಿದ್ದಾರೆ.

ಹಂಗಳೂರಿನ ಸಲ್ಮಾ (30) ರನ್ನು ಐದಾರು ವರ್ಷದ ಹಿಂದೆ ವಿವಾಹವಾಗಿದ್ದ ಅಜೀಜ್‌, ತಲ್ಲೂರಿನ ಜವುಳಿ ಅಂಗಡಿಯಲ್ಲಿ 3 ವರ್ಷಗಳಿಂದ ಉದ್ಯೋಗಕ್ಕಿದ್ದ ಶಿಲ್ಪಾರನ್ನು ಅದಕ್ಕೂ ಮೊದಲು ಟ್ಯುಟೋರಿಯಲ್‌ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸುತ್ತೇನೆ ಎಂದಿದ್ದ. ಆರೋಪಿ ವಾಟ್ಸ್‌ಆ್ಯಪ್‌ ಮೂಲಕ ಯುವತಿಗೆ ಸಂದೇಶ ಕಳುಹಿಸಿ, ಫೋಟೋಗಳನ್ನು ಕಳುಹಿಸಿ, ಪುಸಲಾಯಿಸಿ ಕೋಟೇಶ್ವರ ಸಮೀಪದ ತನ್ನ ಫ್ಲಾಟ್‌ಗೆ ಆಗಾಗ ಕರೆಯಿಸಿಕೊಳ್ಳುತ್ತಿದ್ದ. ಪ್ರೀತಿಯೆಂದು ನಂಬಿಸಿ ಮದುವೆಯಾಗುವುದಾಗಿ ಹೇಳಿದ್ದ ಅಜೀಜ್‌ನ ಮಾತು ನಂಬಿದ್ದ ಯುವತಿ ಆತನೊಡನೆ ಆತ್ಮೀಯ ಸಂಪರ್ಕದಲ್ಲಿದ್ದರು. ಆಕೆಯ ಜತೆಗೂ ಅನೇಕ ಫೋಟೊಗಳನ್ನು ಸೆರೆಹಿಡಿದಿದ್ದ ಆರೋಪಿ ಮದುವೆಗೆ ಒಪ್ಪಿರಲಿಲ್ಲ. ಆಕೆಯಿದ್ದ ಅಂಗಡಿಗೆ ಹೋಗಿ ನೀನು ಎಲ್ಲಾದರೂ ಸಾಯಿ ಎಂದಿದ್ದನಂತೆ. ಆತನ ಕಪಟ ಪ್ರೀತಿಯ ಕರಾಳ ಮುಖದ ಅರಿವಾದ ಯುವತಿ ಸೋಮವಾರ ರಾತ್ರಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಬುಧವಾರ ಮೃತಪಟ್ಟಿದ್ದಾರೆ.

ಮನವಿ
ಘಟನೆ ಬಯಲಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸ್‌ ಠಾಣೆಯ ಬಳಿ ಜಮಾಯಿಸಿದರು. ಶಿಲ್ಪಾ ಪೋಷಕರಿಗೆ ನೈತಿಕ ಬೆಂಬಲ ನೀಡಿದ ಹಿಂದೂ ಸಂಘಟನೆ ಮುಖಂಡರು ಆರೋಪಿಯನ್ನು ಕೂಡಲೇ ಬಂಧಿಸಿ ಜೈಲಿಗಟ್ಟಿ, ಬಲಿಯಾದ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಮತಾಂತರ ಕುರಿತಾದ ಮಾಹಿತಿಯನ್ನು ಯೂಟ್ಯೂಬ್‌ ಮೂಲಕ ನೋಡಿದ್ದು ಆಕೆಯ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಆದ್ದರಿಂದ ಲವ್‌ ಜೆಹಾದ್‌ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಎಸ್‌ಐ ಸದಾಶಿವ ಗವರೋಜಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

Advertisement

ಮನವಿ ನೀಡುವಾಗ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಾ.ಪಂ. ಮಾಜಿ ಸದಸ್ಯ ಕರಣ್‌ ಪೂಜಾರಿ, ತಲ್ಲೂರು ಪಂಚಾಯತ್‌ ಉಪಾಧ್ಯಕ್ಷ ಗಿರೀಶ್‌, ರಾಧಾಕೃಷ್ಣ ಶೇರಿಗಾರ್‌, ಡಿಎಸ್‌ಎಸ್‌ ಭೀಮಘರ್ಜನೆ ರಾಜ್ಯಾಧ್ಯಕ್ಷ ಉದಯ ಕುಮಾರ್‌ ತಲ್ಲೂರು, ಸುಧಾಕರ ಶೆಟ್ಟಿ ನೆಲ್ಯಾಡಿ, ವಿಹಿಂಪ ಜಿಲ್ಲಾ ಸಂಪರ್ಕ ಪ್ರಮುಖ್‌ ಸುರೇಂದ್ರ ಮಾರ್ಕೋಡು, ವಾಸು ದೇವಾಡಿಗ ಗಂಗೊಳ್ಳಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next