Advertisement

Kundapura: ತುಂಡಾದ ವಿದ್ಯುತ್‌ ತಂತಿ ತಗುಲಿ ದಂಪತಿ ಮೃತ್ಯು

08:39 PM Sep 29, 2023 | Team Udayavani |

ಕುಂದಾಪುರ: ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಪತಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಹೋದ ಪತ್ನಿಯೂಬ ವಿದ್ಯುತ್‌ ಸ್ಪರ್ಶಿಸಿ, ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರು ಗ್ರಾ.ಪಂ.ವ್ಯಾಪ್ತಿಯ ಸುಳ್ಸೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಂಭವಿಸಿದೆ.

Advertisement

ಕಟ್‌ಬೆಲ್ತೂರು ಗ್ರಾಮದ ಸುಳ್ಸೆಯ ಯಕ್ಷಿ ಬ್ರಹ್ಮ ನಂದಿಕೇಶ್ವರ ದೈವಸ್ಥಾನ ಬಳಿಯ ನಿವಾಸಿ ಮಹಾಬಲ ದೇವಾಡಿಗ (55), ಅವರ ಪತ್ನಿ ಲಕ್ಷ್ಮೀ ದೇವಾಡಿಗ (48) ಸಾವನ್ನಪ್ಪಿದವರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪುತ್ರಿ ವಿದ್ಯಾಭ್ಯಾಸ ಮುಗಿಸಿ, ಮನೆಯಲ್ಲಿದ್ದು, ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಬ್ಬರು ಅನಾಥರಾಗಿದ್ದಾರೆ.

ಘಟನೆ ವಿವರ
ಮಹಾಬಲ ದೇವಾಡಿಗ ಅವರು ಅವರು ಕೂಲಿ ಕಾರ್ಮಿಕರಾಗಿದ್ದು, ಮನೆ ಸಮೀಪದ ಕರಣಿಕರ ಮನೆಯಲ್ಲಿ ನಿತ್ಯ ಕೆಲಸ ಮಾಡುತ್ತಿದ್ದು, ಈ ದಿನ ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದಿದ್ದಾಗ ಪತ್ನಿ ಲಕ್ಷ್ಮೀ ಅವರು ಗಂಡನನ್ನು ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಕಾಲುದಾರಿಯ ಬಳಿಯ ತೋಡಿನಲ್ಲಿ ಮಹಾಬಲ ಅವರು ವಿದ್ಯುತ್‌ ತಂತಿ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಇದನ್ನು ನೋಡಿದ ಲಕ್ಷ್ಮೀ ಅವರು ಜೋರಾಗಿ ಕೂಗಿಕೊಂಡು ಆಸುಪಾಸಿನವರನ್ನು ಕರೆದಿದ್ದಾರೆ. ಅಕ್ಕ-ಪಕ್ಕದ ಮನೆಯವರೆಲ್ಲ ಬರುವ ಹೊತ್ತಿಗೆ ಮರದ ಕೋಲೊಂದನ್ನು ಹಿಡಿದುಕೊಂಡು, ಮಹಾಬಲ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಲಕ್ಷ್ಮಿ ಅವರಿಗೂ ವಿದ್ಯುತ್‌ ಸ್ಪರ್ಶಿಸಿ, ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಶಾಲೆ ಮಕ್ಕಳು ತೆರಳುವ ದಾರಿ
ಈ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿರುವ ಕಾಲು ದಾರಿಯಲ್ಲಿಯೇ ಬೆಳಗ್ಗೆ ಹಾಗೂ ಸಂಜೆ ಶಾಲೆ, ಕಾಲೇಜು ಮುಗಿಸಿ, ಕೆಲಸ ಮುಗಿಸಿ ಮನೆಗೆ ತೆರಳುವವರು ಅನೇಕ ಮಂದಿಯಿದ್ದಾರೆ. ರಸ್ತೆಯಿದ್ದರೂ, ಇದು ಹತ್ತಿರದ ಕಾಲು ದಾರಿಯಾಗಿದ್ದರಿಂದ ಅನೇಕ ಮಂದಿ ಈ ಕಾಲು ದಾರಿಯನ್ನು ಆಶ್ರಯಿಸಿದ್ದಾರೆ.

ಇನ್ನು ವಿದ್ಯುತ್‌ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿದನ ಸುದ್ದಿ ತಿಳಿಯುತಿದ್ದಂತೆ ಘಟನಾ ಸ್ಥಳಕ್ಕೆ ನೂರಾರು ಮಂದಿ ಆಗಮಿಸಿ, ವೀಕ್ಷಿಸಿ ತೆರಳುತ್ತಿದ್ದರು.

Advertisement

ಡಿವೈಎಸ್‌ಪಿ ಭೇಟಿ
ಘಟನಾ ಸ್ಥಳಕ್ಕೆ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿದರು. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತನಿರೀಕ್ಷಕ ಜಯರಾಮ ಗೌಡ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು.

ಮೆಸ್ಕಾಂ ನಿರ್ಲಕ್ಷ್ಯಕ್ಕೆ ಆಕ್ರೋಶ
ಮೆಸ್ಕಾಂನವರ ನಿರ್ಲಕ್ಷ್ಯದಿಂದಲೇ ಈ ದುರ್ಘ‌ಟನೆ ಸಂಭವಿಸಿದ್ದು, ಈ ತುಂಡಾಗಿ ಬಿದ್ದಿರುವ ವಿದ್ಯುತ್‌ ತಂತಿಗೆ ಸುಮಾರು 30-35 ವರ್ಷಗಳಾಗಿರಬಹುದು. ಇಷ್ಟು ಹಳೆಯದಾದರೂ ಬದಲಿಸಿ, ಹೊಸ ತಂತಿ ಜೋಡಿಸುವುದಿಲ್ಲ. ಹೀಗೆ ತುಂಡಾಗಿ ಬಿದ್ದರೆ, ಅಲ್ಲಿಗೆ ಇನ್ನೊಂದು ಹಳೆಯ ತಂತಿ ತಂದು ಜೋಡಿಸಿ ಹೋಗುತ್ತಾರೆ. ಕಾಡು ದಾರಿ, ಗ್ರಾಮೀಣ ಪ್ರದೇಶಗಳಲ್ಲಿ ಹೀಗೆ ಮಾಡುವುದೇ ಜಾಸ್ತಿ. ಮತ್ತೆ ಹೀಗೆ ತುಂಡಾಗಿ ಬಿದ್ದು, ಇನ್ನು ಏನಾದರೂ ಅನಾಹುತಗಳಾಗುತ್ತವೆ. ಯಾರದೋ ತಪ್ಪಿಗೆ ಬಲಿಯಾಗುವುದು ಇನ್ನು ಯಾರೋ ಎನ್ನುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next