Advertisement

Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!

03:19 PM Jan 07, 2025 | Team Udayavani |

ಕುಂದಾಪುರ: ಹಾಲಾಡಿ ಗ್ರಾಮದ ಚೋರಾಡಿ, ಮುದೂರು ಭಾಗದ ಜನರ ಮೊಬೈಲ್‌ಗೆ ಕರೆಯೇನೋ ಬರುತ್ತೆ. ಆದರೆ, ಫೋನ್‌ನಲ್ಲಿ ಮಾತನಾಡಬೇಕಾದರೆ ಯಾವುದೋ ಬೆಟ್ಟ ಹತ್ತಬೇಕು. ಇಲ್ಲದಿದ್ದರೆ ಎತ್ತರದ ಪ್ರದೇಶ ಹುಡುಕಿಕೊಂಡು ಹೋಗಬೇಕು. ಇಲ್ಲವೆಂದರೆ ಇವರು ಮಾತನಾಡಿದ್ದು ಅವರಿಗೆ ಕೇಳುವುದಿಲ್ಲ, ಅವರು ಮಾತನಾಡಿದ್ದು ಇವರಿಗೆ ಕೇಳುವುದಿಲ್ಲ. ಹಲೋ.. ಹಲೋ.. ಅನ್ನುವುದರಲ್ಲಿಯೇ ಕಾಲಹರಣವಾಗುತ್ತದೆ!

Advertisement

ಇದು ಕೇವಲ ಒಂದು ಫೋನ್‌ ಕರೆಗಾಗಿ ಚೋರಾಡಿ ಭಾಗದ ಜನ ಪಡುತ್ತಿರುವ ಪಾಡು. ಇನ್ನು ಇಂಟರ್‌ನೆಟ್‌ ಬಳಕೆಗಂತೂ ಕೇಳುವುದೇ ಬೇಡ!

ಹಾಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಲಾಡಿ 28 ಹಾಗೂ ಹಾಲಾಡಿ 76 ಈ ಎರಡು ಗ್ರಾಮಗಳಿದ್ದು, ಚೋರಾಡಿ, ಮುದೂರು ಸುತ್ತಮುತ್ತಲಿನ ಪ್ರದೇಶಗಳು ಈ ಎರಡೂ ಗ್ರಾಮಗಳ ವ್ಯಾಪ್ತಿಗೂ ಒಳಪಡುತ್ತದೆ. ಹಾಲಾಡಿ ಪೇಟೆ ಭಾಗ ಹಾಗೂ ಪೇಟೆಗೆ ಹೊಂದಿಕೊಂಡಂತಿರುವ ಕೆಲವು ಊರುಗಳಿಗೆ ಮಾತ್ರ ಸರಿಯಾದ ನೆಟ್ವರ್ಕ್‌ ಸೌಲಭ್ಯ ಸಿಗುತ್ತಿದ್ದು, ಉಳಿದ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಕೂಡ ಸರಿಯಾದ ನೆಟ್ವರ್ಕ್‌ ಸಂಪರ್ಕ ಸಿಗದೇ, ಜನ ಕನಿಷ್ಠ ಒಂದು ಕರೆ ಮಾಡಲು ಸಹ ಕಷ್ಟಪಡುವಂತಾಗಿದೆ.

ನೂರಕ್ಕೂ ಮಿಕ್ಕಿ ಮನೆ
ಹಾಲಾಡಿ 28 ಹಾಗೂ ಹಾಲಾಡಿ 76 ಗ್ರಾಮಗಳ ಗ್ರಾಮೀಣ ಪ್ರದೇಶವಾದ ಚೋರಾಡಿ, ಮುದೂರಿ, ಕಾಸಾಡಿ, ಚೇರ್ಕಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರುಗಳಿಗೆ ಸರಿಯಾದ ಟ್ವರ್ಕ್‌ ಸಂಪರ್ಕವೇ ಸಿಕ್ಕಿಲ್ಲ. ಈ ಭಾಗದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಮನೆಗಳಿದ್ದು, ಈ ನೆಟ್ವರ್ಕ್‌ ಸೌಲಭ್ಯವಿಲ್ಲದೇ, ಸಾವಿರಾರು ಜನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕನಿಷ್ಠ 4 -5 ಕಿ.ಮೀ. ಸಂಚಾರ
ಚೋರಾಡಿ, ಕಾಸಾಡಿ, ಮುದೂರು ಭಾಗದವರಿಗೆ ಸರಿಯಾದ ನೆಟ್ವರ್ಕ್‌ ಸೌಲಭ್ಯ ಸಿಗಬೇಕಾದರೆ ಮನೆಯಿಂದ ಕನಿಷ್ಠ 4-5 ಕಿ.ಮೀ. ದೂರ ಬರಬೇಕು. ಹಾಲಾಡಿ ಪೇಟೆಗೆ ಬರಬೇಕಾದರೆ 6-7 ಕಿ.ಮೀ. ದೂರವಿದೆ. ಈ ಎಲ್ಲ ಊರುಗಳಿಗೆ ಟವರ್‌ ಇರುವುದು ಹಾಲಾಡಿಯಲ್ಲಿ ಮಾತ್ರ. ಮೊಬೈಲ್‌ ಇಂಟರ್‌ನೆಟ್‌ ಸಹಿತ ಇನ್ನಿತರ ಸೌಲಭ್ಯ
ಗಳನ್ನು ಬಳಸಬೇಕಾದರೆ ಇಷ್ಟು ದೂರ ಬರಲೇಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದು.

Advertisement

ಇನ್ನೆಷ್ಟು ವರ್ಷ ಬೇಕು?
ನಮ್ಮ ಚೋರಾಡಿಯ ಎಷ್ಟೋ ಮನೆಗಳಿಗೆ ಇನ್ನೂ ಕೂಡ ಸರಿಯಾದ ನೆಟ್ವರ್ಕ್‌ ವ್ಯವಸ್ಥೆಯೇ ಇಲ್ಲ. ನೆಟ್ವರ್ಕ್‌ ಬೇಕೆಂದರೆ ಮುದೂರಿನಿಂದಲೂ ತುಸು ಮುಂದೆ ಬರಬೇಕು. ಸರಿಯಾಗಿ ಸಿಗಬೇಕಾದರೆ ಹಾಲಾಡಿಗೆ ಬರಬೇಕು. ಟವರ್‌ ಮಾಡಿಕೊಡುತ್ತೇವೆ ಅಂದಿದ್ರು. ಆದರೆ, ಈವರೆಗೆ ಟವರ್‌ ಮಾತ್ರ ಆಗಿಲ್ಲ. ಜನ ಇನ್ನೆಷ್ಟು ವರ್ಷ ಕಾಯಬೇಕು ಅನ್ನುವುದಾಗಿ ಪ್ರಶ್ನಿಸುತ್ತಾರೆ ಚೋರಾಡಿಯ ರೇಷ್ಮಾ ಶೆಟ್ಟಿ.

ಏನೆಲ್ಲ ಸಮಸ್ಯೆಗಳು?
ಇಲ್ಲಿನ ಜನರಿಗೆ ಕರೆಗೆ ಮಾತ್ರ ಅಲ್ಪಸ್ವಲ್ಪ ನೆಟ್ವರ್ಕ್‌ ಸಿಗುತ್ತದೆ. ಅದು ಕೂಡ ಕಷ್ಟಪಟ್ಟರೆ ಮಾತ್ರ. ಇಲ್ಲದಿದ್ದರೆ ಅದು ಕೂಡ ಇಲ್ಲ.
ಈಗ ಶಾಲೆಯಿಂದ ಮೊಬೈಲ್‌ಗ‌ಳಲ್ಲಿಯೇ ಹೆಚ್ಚಿನ ಮಾಹಿತಿ ಸಿಗುವುದು. ಅದು ಸಕಾಲದಲ್ಲಿ ತಲುಪದೇ ಮಕ್ಕಳು ತೊಂದರೆಪಟ್ಟಿದ್ದಾರೆ.

ರಾತ್ರಿಯ ವೇಳೆ ಏನಾದರೂ ಶಾಲೆಗಳಿಗೆ ರಜೆ ಘೋಷಿಸಿದರೆ, ಇಲ್ಲಿನವರಿಗೆ ಅದು ತಿಳಿಯುವುದು ಮರು ದಿನ ಪೇಟೆ ಕಡೆಗೆ ಬಂದಾಗಲೇ.

ಯಾರಿಗಾದರೂ ಅನಾರೋಗ್ಯ ಉಂಟಾದರೂ ಪೇಟೆಯಿಂದ ವಾಹನ ಕರೆಸಲು ತುಂಬಾ ತೊಂದರೆ ಅನುಭವಿಸಬೇಕು.
ಕಂಪೆನಿ ಉದ್ಯೋಗಿಗಳು ಕೆಲವು ದಿನದ ಮಟ್ಟಿಗೆ ಊರಿಗೆ ಬಂದು ವರ್ಕ್‌ ಫ್ರಮ್‌ ಹೋಮ್‌ ಮಾಡಬೇಕಾದರೆ ಮನೆಯಿಂದ ಸಾಧ್ಯವಿಲ್ಲ.

ರಿಂಗ್‌ ಆಗ್ತದೆ, ಮಾತು ಕೇಳಿಸುವುದಿಲ್ಲ!
ಇಲ್ಲಿನ ಮನೆಗಳಿಗೆ ನೆಟ್ವರ್ಕ್‌ ಸಿಗುವುದೇ ಇಲ್ಲ ಅನ್ನುವ ಹಾಗೇ ಇಲ್ಲ. ಇಲ್ಲಿನವರ ನಂಬರ್‌ಗೆ ಕರೆ ಮಾಡಿದರೆ ಫೋನ್‌ ರಿಂಗಣಿಸುತ್ತದೆ. ಹಾಗಾಂತ ಅವರು ರಿಸೀವ್‌ ಮಾಡಿ ಮಾತಾಡಬೇಕಾದರೆ ಮನೆಯಿಂದ ಹೊರಬಂದು, ಯಾವುದಾದರೂ ಎತ್ತರದ ಪ್ರದೇಶ ಹುಡುಕಿಕೊಂಡು ಹೋಗಬೇಕಾಗಿದೆ. ಹಗಲು ವೇಳೆ ಹೀಗೆ ಯಾರಾದರೂ ಕರೆ ಮಾಡಿದರೆ ಎತ್ತರದ ಪ್ರದೇಶ ಹುಡುಕಿಕೊಂಡು ಹೋಗಬಹುದು. ಆದರೆ ರಾತ್ರಿ ವೇಳೆ ಸಾಧ್ಯವೇ ಇಲ್ಲ.

ಎಲ್ಲದಕ್ಕೂ ಸಮಸ್ಯೆ
ಅನೇಕ ವರ್ಷಗಳಿಂದ ಈ ಬಗ್ಗೆ ಬೇಡಿಕೆ ಇಡುತ್ತಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ನಾನು ಅಂಗನವಾಡಿ ಶಿಕ್ಷಕಿ. ಸಂಜೆ ಹೊತ್ತಿಗೆ ಏನಾದರೂ ಇಲಾಖೆಯಿಂದ ಮಾಹಿತಿ ಕಳುಹಿಸಿದರೆ, ಅದು ನನಗೆ ತಿಳಿಯುವುದು ಮರುದಿನ ಬೆಳಗ್ಗೆ. ಇದರಿಂದ ಅನೇಕ ಸಲ ತೊಂದರೆ ಅನುಭವಿಸಿದ್ದು ಇದೆ. ಚೋರಾಡಿ ಭಾಗಕ್ಕೊಂದು ಟವರ್‌ ನಿರ್ಮಾಣ ಆಗಲಿ.
– ರೇಖಾ ಚೋರಾಡಿ, ಅಂಗನವಾಡಿ ಶಿಕ್ಷಕಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next