ಕುಂದಾಪುರ: ಗಂಗೊಳ್ಳಿ ನಿವಾಸಿ ಮಹಿಳೆಯೊಬ್ಬರಿಗೆ ಹೆರಿಗೆ ವೇಳೆ ಮಗು ಸಾವಿಗೀಡಾಗಿದ್ದು ವೈದ್ಯರ ನಿರ್ಲಕ್ಷé ಕಾರಣ ಎಂದು ಆರೋಪಿಸಿ ಸೋಮವಾರ ಸಂಜೆ ವೇಳೆ ಇಲ್ಲಿನ ಸರಕಾರಿ ಆಸ್ಪತ್ರೆ ಎದುರು ಸಾರ್ವಜನಿಕರು ಮೌನ ಪ್ರತಿಭಟನೆ ನಡೆಸಿದರು.
ನ. 17ರಂದು ರಾತ್ರಿ 10.30ರ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಅವರ ಪತ್ನಿ ಜ್ಯೋತಿ ಖಾರ್ವಿ ಅವರು ಹೆರಿಗೆ ನೋವಿನಿಂದ ದಾಖಲಾಗಿದ್ದರು. ಮೂರು ದಿನ ನೋಡಿ ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿ, ಜನನ ವೇಳೆ ಗಂಡು ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ವೈದ್ಯರ ನಿರ್ಲಕ್ಷéದಿಂದ ಆದ ಸಾವು ಎಂದು ಮನೆಯವರು ಹಾಗೂ ಊರವರು ಆರೋಪಿಸಿದ್ದಾರೆ.
ಘಟನೆ ತಿಳಿದು ಊರವರು ಹಾಗೂ ಮನೆಯವರು ಆಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಿದರು. ವೈದ್ಯರ ಅಮಾನತು ನಡೆಸಬೇಕು, ತನಿಖೆ ನಡೆಸಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕು. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು. ಬಡ ಮೀನುಗಾರರಿಗೆ ಆದ ಅನ್ಯಾಯ ಇತರರಿಗೆ ಆಗಬಾರದು ಎಂದು ಒತ್ತಾಯಿಸಿದರು.
ಮಾಧ್ಯಮ ಜತೆ ಮಾತನಾಡಿದ ಪ್ರತಿಭಟನಕಾರರು, ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಗಣನೆಗೆ ತೆಗೆದುಕೊಳ್ಳಲಿಲ್ಲ. ವೈದ್ಯರು ಒರಟಾಗಿ ಮಾತನಾಡುತ್ತಾರೆ. ರಾತ್ರಿ ವೇಳೆ ಕೆಲವೊಮ್ಮೆ ವೈದ್ಯರೇ ಇರುವುದಿಲ್ಲ ಎಂದು ಆರೋಪಿಸಿದರು.
ಉಪವಿಭಾಗ ಆಸ್ಪತ್ರೆಯ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಪ್ರತಿಭಟನಕಾರರ ಮನ ಒಲಿಸಲು ನೋಡಿದರು. ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈದ್ಯರೂ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ. ಬೇಕೆಂದೇ ನಿರ್ಲಕ್ಷé ಮಾಡುವುದಿಲ್ಲ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿಗಳು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರೂ ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಲಿಲ್ಲ.
ಜನ ಜಮಾವಣೆ ಆಗುತ್ತಿದ್ದಂತೆಯೇ ಸ್ಥಳದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ನಂದಕುಮಾರ್, ಎಸ್‌ಐ ಪ್ರಸಾದ್, ಸಂಚಾರ ಠಾಣೆ ಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಂದೋ ಬಸ್ತ್ ಮಾಡಲಾಗಿತ್ತು. ಮಗುವನ್ನು ಮಣಿಪಾಲದ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.