ಕುಂದಾಪುರ: “ನಿಮ್ಮ ತಂದೆ ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ ಎಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಮೃತದೇಹ ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆಂದು ಹೋದಾಗ ಅಲ್ಲಿ ಅಪ್ಪನ ಮೃತದೇಹ ನೋಡಲು ಅವಕಾಶವಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಕೊನೆಯ ಬಾರಿಗೆ ಅಪ್ಪನ ಮುಖ ನೋಡಿದ ಮಗನಿಗೆ ಕಾದಿತ್ತು ಆಘಾತ. ಕಾರಣ ಅಲ್ಲಿ ಹೆಣವಾಗಿ ಮಲಗಿದ್ದು ಅಪ್ಪನಲ್ಲ, ಬದಲಾಗಿ ಇನ್ಯಾರೋ ಯುವಕ!”
ಇದು ಉಡುಪಿ ಜಿಲ್ಲೆಯ ಕುಂದಾಪುರದ ಸ್ಮಶಾನದಲ್ಲಿ ಕಂಡುಬಂದ ವಿಚಿತ್ರ ದೃಶ್ಯ. ಯಾರದ್ದೋ ಹೆಸರಿನಲ್ಲಿ ಇಲ್ಲಿ ಬೇರೆ ಯಾರದ್ದೋ ದೇಹದ ಅಂತ್ಯ ಸಂಸ್ಕಾರಕ್ಕೆ ಇಲ್ಲಿ ಸಿದ್ದತೆ ನಡೆದಿತ್ತು.
ಕುಂದಾಪುರದ ನೇರಂಬಳ್ಳಿ ನಿವಾಸಿ 60 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಂತರ ಕೋವಿಡ್ ಪಾಸಿಟವ್ ಆಗಿದೆ ಎಂದು ಅವರನ್ನು ಉಡುಪಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಉಡುಪಿ ಆಸ್ಪತ್ರೆಯಿಂದ ವ್ಯಕ್ತಿಯ ಮನೆಗೆ ಕರೆ ಮಾಡಿ, ನಿಮ್ಮ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ನಾವೇ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದಿದ್ದರು. ನಂತರ ಮನೆಯವರ ಒತ್ತಾಯಕ್ಕೆ ಆರೋಗ್ಯ ಸಿಬ್ಬಂದಿಗಳು ಮೃತದೇಹವನ್ನು ಕುಂದಾಪುರ ಸ್ಮಶಾನಕ್ಕೆ ತಂದಿದ್ದರು.
ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲೋರ್ವ ಪಾಕ್ ಪ್ರೇಮಿ: ಪವರ್ ಆಫ್ ಪಾಕಿಸ್ತಾನ ಪೇಜ್ ಶೇರ್ ಮಾಡಿದ ಪೇದೆ
ಸ್ಮಶಾನದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆಯಲು ಮನೆಯವರು ಒತ್ತಾಯಿಸಿದಾಗ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ಐವರಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಮೃತದೇಹ ಅದಲು ಬದಲಾಗಿರುವುದು ಬೆಳಕಿಗೆ ಬಂದಿದೆ.
ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ನೂರಾರು ಮಂದಿ ಆಗಮಿಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅರೋಗ್ಯಾಧಿಕಾರಿ ನಾಗಭೂಷಣ್, ಸಹಾಯಕ ಆಯುಕ್ತ ರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಘಟನೆಯ ನಂತರ ನೇರಂಬಳ್ಳಿ ನಿವಾಸಿಯ ಮೃತದೇಹವನ್ನು ಸ್ಮಶಾನಕ್ಕೆ ತರಲಾಯಿತು. ಸ್ಮಶಾನದಲ್ಲಿ ಮನೆಯವರ ಎದುರಿಗೆ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ನಡೆಸಲಾಯಿತು.