Advertisement

ಕುಂದಾಪುರ –ಬೈಂದೂರು ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಹೆದ್ದಾರಿ : ಇದು ಕತ್ತಲ ದಾರಿ

03:26 PM Mar 16, 2022 | Team Udayavani |

ಕುಂದಾಪುರ : ಶಿರೂರು, ಬೈಂದೂರಿನಿಂದ ಕುಂದಾಪುರದವರೆಗಿನ ಹೆದ್ದಾರಿ ಬರಿ ಹೆಸರಿಗಷ್ಟೇ ಸೀಮಿತವಾದಂತಿದೆ. ಕುಂದಾಪುರದಿಂದ ಬೈಂದೂರುವರೆಗಿನ 42 ಕಿ.ಮೀ. ದೂರದವರೆಗಿನ ಬಹುತೇಕ ಕಡೆಗಳಲ್ಲಿ ಇದು ಕತ್ತಲ ದಾರಿಯಾಗಿದೆ. ಪ್ರಮುಖ ಜಂಕ್ಷನ್‌ಗಳ ಸಹಿತ ಹಲವೆಡೆಗಳಲ್ಲಿ ಇನ್ನು ಬೆಳಕಿನ ವ್ಯವಸ್ಥೆಯೇ ಆಗಿಲ್ಲ. ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ವಹಿಸಿಕೊಂಡ ಗುತ್ತಿಗೆ ಸಂಸ್ಥೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಕುಂದಾಪುರ- ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಬಹುತೇಕ ಕಾಮಗಾರಿ ಮುಗಿದಿದೆ. ಈ ಹೆದ್ದಾರಿಯಲ್ಲಿ ಸಂಚಾರಕ್ಕೆ ತೆರೆದುಕೊಂಡು ಸರಿ ಸುಮಾರು ಎರಡೂವರೆ ವರ್ಷ ಸಹ ಕಳೆದಿದೆ. ಶಿರೂರಲ್ಲಿ ಟೋಲ್‌ ಸಂಗ್ರಹ ಆರಂಭಗೊಂಡೇ 2 ವರ್ಷವಾಗುತ್ತಿದೆ. ಆದರೂ ಹೆದ್ದಾರಿ ಯುದ್ದಕ್ಕೂ ಇನ್ನೂ ಸರಿಯಾದ ಬೆಳಕಿನ ವ್ಯವಸ್ಥೆಯನ್ನು ಮಾತ್ರ ಅಳವಡಿಸಿಲ್ಲ. ಇದರಿಂದ ಕೆಲವೊಂದು ಜಂಕ್ಷನ್‌ಗಳು ರಾತ್ರಿ ವೇಳೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ಇನ್ನೆಷ್ಟು ದಿನ ಕಗ್ಗತ್ತಲ ಹಾದಿ?
ಕುಂದಾಪುರದ ಸಂಗಮ್‌ನಿಂದ ಶಿರೂರುವರೆಗಿನ 42 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2015 ರಿಂದ ಆರಂಭಗೊಂಡಿದೆ. 2018 ರೊಳಗೆ ಮುಗಿಯಬೇಕಿತ್ತು. 2020 ರಲ್ಲಿ ಅಂತೂ ಇಂತು ಒಂದಷ್ಟು ಕಾಮಗಾರಿ ಮುಗಿಸಿ, ಎರಡೂ ಬದಿಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇನ್ನು ಕೆಲವೆಡೆಗಳಲ್ಲಿ ಹೊರತುಪಡಿಸಿ,
ಬಹುತೇಕ ಕಡೆಗಳಲ್ಲಿ ಇನ್ನು ಸಹ ವಿದ್ಯುತ್‌ ದೀಪ ಅಳವಡಿಸುವ ಕಾರ್ಯ ಆಗಿಲ್ಲ. ಇದು ಹೆದ್ದಾರಿಯಾಗಿದ್ದರೂ ಸಹ ನಾವು ಇನ್ನೆಷ್ಟು ದಿನ ಕಗ್ಗತ್ತಲ ಹಾದಿಯಲ್ಲೇ ಸಂಚರಿಸಬೇಕು ಎನ್ನುವುದಾಗಿ ಜನ ಪ್ರಶ್ನಿಸುವಂತಾಗಿದೆ.

ಅಪಘಾತಕ್ಕೆ ರಹದಾರಿ : ಕತ್ತಲ ಹಾದಿಯಾಗಿರುವ ಈ ಹೆದ್ದಾರಿಯು ಈಗ ಕತ್ತಲ ವೇಳೆಯಲ್ಲಿ ಅಪಘಾತಕ್ಕೆ ರಹದಾರಿಯಾದಂತಿದೆ. ಸರಿಯಾದ ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆ ಅಪಘಾತಗಳು ಹೆಚ್ಚುತ್ತಿದೆ. ಕೆಲವೊಮ್ಮೆ ದಣಿವಾರಿಸಿಕೊಳ್ಳಲು ಬರುವ ಬೀಡಾಡಿ ದನಗಳು ತಿಳಿಯದೇ ವಾಹನ ಢಿಕ್ಕಿ ಹೊಡೆದ ನಿದರ್ಶನಗಳು ಇವೆ. ಸೈಕಲ್‌ ಸವಾರರು, ಪಾದಚಾರಿಗಳಿಗೂ ಈ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ದೀಪ ಉರಿಯದಿದ್ದ ಮೇಲೆ ಕಂಬ ಯಾಕೆ ಹಾಕಿರುವುದು ಎನ್ನುವುದು ವಾಹನ ಸವಾರರ ಪ್ರಶ್ನೆ.

ಎಲ್ಲೆಲ್ಲ ಇಲ್ಲ?
ಕುಂದಾಪುರದಿಂದ ಆರಂಭಗೊಂಡು ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಮರವಂತೆ, ನಾವುಂದದವರೆಗೆ ಇನ್ನು ಬೆಳಕಿನ ವ್ಯವಸ್ಥೆಯನ್ನೇ ಮಾಡಿಲ್ಲ. ಕೆಲವೆಡೆಗಳಲ್ಲಿ ಕಂಬ ಹಾಕಿ, ದೀಪ ಅಳವಡಿಸಿದರೆ, ಅದಕ್ಕಿನ್ನು ವಿದ್ಯುತ್‌ ಸಂಪರ್ಕವನ್ನೇ ಕಲ್ಪಿಸಿಲ್ಲ. ಇನ್ನು ಶಿರೂರು ಪೇಟೆ, ಬೈಂದೂರು, ಉಪ್ಪುಂದ, ಬಿಜೂರು, ಕಂಬದಕೋಣೆ, ಅರೆಹೊಳೆ ಕ್ರಾಸ್‌ನಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದ್ದರೂ, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಟ್ಟಿನಲ್ಲಿ ಕುಂದಾಪುರ – ಬೈಂದೂರು ಹೆದ್ದಾರಿಯುದ್ದಕ್ಕೂ ಕತ್ತಲ ದಾರಿಯಾದಂತಿದೆ. ಇನ್ನು ಕುಂದಾಪುರದ ಫ್ಲೆ$çಓವರ್‌ ಹಾಗೂ ಅಂಡರ್‌ಪಾಸ್‌ನಲ್ಲಿಯೂ ಬೆಳಕಿನ ವ್ಯವಸ್ಥೆಯಿಲ್ಲ. ಇದರಿಂದಾಗಿಯೇ ಅಪಘಾತ ಸಂಭವಿಸಿದ ನಿದರ್ಶನಗಳಿವೆ. ಆದರೂ ಸಂಬಂಧಪಟ್ಟವರು ಮಾತ್ರ ಇನ್ನು ಎಚ್ಚೆತ್ತುಕೊಂಡಿಲ್ಲ.

Advertisement

ಇದನ್ನೂ ಓದಿ : ಹಿಜಾಬ್‌ ವಿವಾದ : ಶಾಂತವಾಗಿ ತೀರ್ಪು ಸ್ವೀಕರಿಸಿದ ಉಡುಪಿ ಜನತೆ

ಇದಕ್ಕೆ ಹೊಣೆ ಯಾರು
ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ರಾತ್ರಿ ವೇಳೆ ಕತ್ತಲಿದೆ. ನಮ್ಮ ನಾವುಂದದ ಶಾಲೆಯಂದ ಮಸ್ಕಿ ದೇವಸ್ಥಾನದವರೆಗೆ ಬೆಳಕಿಲ್ಲದೆ, ಕತ್ತಲ ಕೂಪದಂತಾಗಿದೆ. ಇಲ್ಲಿನ ಜನಸಾಮಾನ್ಯರ ಬೇಡಿಕೆಗೆ ಮನ್ನಣೆಯೇ ಇಲ್ಲದಂತಾಗಿದೆ. ಇಷ್ಟು ವರ್ಷವಾದರೂ ಇನ್ನು ಬೀದಿ ದೀಪ ಹಾಕಿಲ್ಲ. ಇದರಿಂದಾಗಿಯೇ ಅಪಘಾತ ಸಂಭವಿಸಿದರೆ, ಇದಕ್ಕೆ ಯಾರು ಹೊಣೆ?

– ಸತೀಶ್‌ ನಾವುಂದ, ಸ್ಥಳೀಯರು.

ಅಳವಡಿಕೆಗೆ ಸೂಚನೆ
ಕುಂದಾಪುರದಿಂದ ಬೈಂದೂರುವರೆಗಿನ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಕೆಗೆ ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಇನ್ನು ಆ ಬಗ್ಗೆ ಕಾರ್ಯಪ್ರವೃತ್ತರಾಗಿಲ್ಲ. ಇನ್ನೊಮ್ಮೆ ಈ ಬಗ್ಗೆ ಪ್ರಾಧಿಕಾರದವರಿಗೆ ಹಾಗೂ ಗುತ್ತಿಗೆ ಸಂಸ್ಥೆಯವರಿಗೆ ಸೂಚನೆ, ನೀಡಿ ಅಳವಡಿಕೆಗೆ ವ್ಯವಸ್ಥೆ ಮಾಡಲಾಗುವುದು.
– ರಾಜು ಕೆ., ಸಹಾಯಕ ಆಯುಕ್ತರು, ಕುಂದಾಪುರ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next