ಕುಂದಾಪುರ: ಸಕಲೇಶಪುರ ಸುಬ್ರಹ್ಮಣ್ಯ ಘಾಟಿ ಭಾಗದ ರೈಲು ಹಳಿಗಳ ವೇಗ ವರ್ಧನೆ, ಹೊಸ ಕ್ರಾಸಿಂಗ್ ನಿಲ್ದಾಣವಾಗಿ ಅರೆಬೆಟ್ಟ ನಿಲ್ದಾಣ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಸುಧಾರಣೆಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೇ ಸಚಿವರ ಜತೆ ಮಾತುಕತೆ ನಡೆಸಿದ್ದು, ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸಚಿವರ ಜತೆ ಸುದೀರ್ಘ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಂದಿನ ಹಲವು ವರ್ಷಗಳ ಕರಾವಳಿಯ ರೈಲು ಸೇವೆಗಳು ಮತ್ತು ಹೆದ್ದಾರಿ ಸುಧಾರಣೆಗಳ ಕುರಿತು ಕುಂದಾಪುರ ರೈಲು ಸಮಿತಿ ಸಂಸದರ ಜತೆ ವಿಚಾರ ವಿನಿಮಯ ಮಾಡಿದೆ. ರೈಲು ಮತ್ತು ಹೆದ್ದಾರಿ ಸುಧಾರಣೆ ಕುರಿತು ಹಲವು ಮಾರ್ಗೋಪಾಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಈ ಸಂದರ್ಭ ಸಂಸದರು ಸಮಿತಿಯ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದರು.
ಪಂಚಗಂಗಾ ರೈಲು ಸೇರಿದಂತೆ ಹಲವು ವಿಶೇಷ ರೈಲು ಸೇವೆಗಳು ಘಾಟಿ ಭಾಗದಲ್ಲಿ ನಿಧಾನಗತಿಯ ಕಾರಣದಿಂದ ಬೆಂಗಳೂರು ತಲುಪುವಾಗ ವಿಳಂಬವಾಗುವುದು, ಸರಿಯಾದ ಸಮಯಪಟ್ಟಿ ಸಿಗದೆ ಇರುವುದು ಹೀಗೆ ಹಲವು ಸಮಸ್ಯೆಗಳಿಗೆ ಸಿಲುಕಿವೆ. ಅದರಲ್ಲೂ ಪಂಚಗಂಗಾ ರೈಲು ಕರಾವಳಿಯ ಜೀವನಾಡಿಯಾಗಿದ್ದು, ತನ್ನ ಸಮಯ ಪಟ್ಟಿಯಿಂದಾಗಿಯೇ ಜೀವನಾಡಿ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ರೈಲು ಇನ್ನೂ ಬೇಗನೆ ಬೆಂಗಳೂರು ತಲುಪಲಿ ಎಂಬ ಬೇಡಿಕೆ ಇಂದಿಗೂ ಈಡೇರಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಬ್ರಹ್ಮಾವರ, ಕುಂದಾಪುರ ಸೇರಿದಂತೆ ಹಲವೆಡೆ ಅಪಘಾತ ವಲಯಗಳು ತುಂಬಿರುವ ರಾಷ್ಟ್ರೀಯ ಹೆದ್ದಾರಿಯ ಸಮಗ್ರ ಸುಧಾರಣೆಗೆ ತಂತ್ರಜ್ಞರ ತಂಡವನ್ನು ಕುಂದಾಪುರ, ಬ್ರಹ್ಮಾವರ, ಉಡುಪಿ ಮಧ್ಯೆ ನೇರ ವೀಕ್ಷಣೆ ಮತ್ತು ಪರಿಹಾರೋಪಾಯಗಳ ಕುರಿತು ಪ್ರಸ್ತಾವ ರಚಿಸುವ ಕುರಿತು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ದಿಲ್ಲಿಗೆ ತೆರಳಲಿರುವುದಾಗಿ ಸಂಸದರು ತಿಳಿಸಿದರು.