Advertisement
ಅವರು ಬುಧವಾರ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ರಂಗ ಮಂದಿರದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳಿಗೆ ಮತದಾರರ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.ಈ ಬಾರಿಯ ಚುನಾವಣೆಯಲ್ಲಿ ಒಳಗೊಳ್ಳುವ ಚುನಾವಣೆ ಅಂದರೆ ಎಲ್ಲರೂ ಮುಕ್ತವಾಗಿ ಮತ ಚಲಾಯಿಸು ವಂತಾಗಬೇಕು, ಸುಗಮ ಮತದಾನ ಅಂದರೆ ವಿಶೇಷ ಚೇತನರು, ಹಿರಿಯರು ಹೀಗೆ ಎಲ್ಲರೂ ಮತದಾನಕ್ಕೆ ಬರಲು ಅನುಕೂಲ ಹಾಗೂ ನೈತಿಕ ಮತದಾನ ಅಂದರೆ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಹಾಕಬೇಕು ಎನ್ನುವುದರ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದವರು ಹೇಳಿದರು.
ಬೂತ್ ಮಟ್ಟದ ಜಾಗೃತಿ ಗ್ರೂಪ್ (ಬ್ಯಾಗ್-ಆಅಎ) ನ ಮುಖ್ಯಸ್ಥರು ಆ ಭಾಗದ ಬಿಎಲ್‌ಒಗಳೇ ಆಗಿರುತ್ತಾರೆ. ಅವರು ಎಲ್ಲ ಚುನಾವಣಾ ಪ್ರಕ್ರಿಯೆ, ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳನ್ನು ಪತ್ತೆ ಹಚ್ಚಬೇಕು. ಎ. 8ರಂದು ನಡೆಯುವ ಮಿಂಚಿನ ನೋಂದಣಿ ಮಾಡಿಸುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಪಾತ್ರ ಮಹತ್ತರವಾಗಿದೆ. ಆದಷ್ಟು ಹೆಚ್ಚಿನ ಸಂಖ್ಯೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಶ್ರಮವಹಿಸಿ ಎಂದು ಸಿಇಒ ಸಲಹೆ ನೀಡಿದರು. ಪ್ರತಿಜ್ಞಾ ವಿಧಿ ಬೋಧನೆ
ಇದೇ ವೇಳೆ ಸ್ವೀಪ್ ಸಮಿತಿ ಕೈಗೊಂಡಿರುವ ಮತದಾರರ ಜಾಗೃತಿ ಅಭಿಯಾನದಡಿ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು, ನಿರ್ಭೀತಿಯಿಂದ, ಧರ್ಮ, ಜನಾಂಗ, ಜಾತಿ, ಭಾಷೆ ಅಥವಾ ಯಾವುದೇ ಪ್ರೇರಣೆಗಳಿಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಸಮಿತಿಯ ಅಧ್ಯಕ್ಷ ಶಿವಾನಂದ ಕಾಪಶಿ ಬೋಧಿಸಿದರು.
Related Articles
Advertisement
26 ಪರ್ಯಾಯ ದಾಖಲೆಗಳುಮೇ 12ರಂದು ನಡೆಯುವ ಮತದಾನಕ್ಕೆ ವೋಟರ್ ಐಡಿ ಮಾತ್ರವಲ್ಲದೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಭಾವಚಿತ್ರವಿರುವ ಇತರ ಗುರುತಿನ ಚೀಟಿಗಳ ಸಹಿತ ಒಟ್ಟು 26 ಪರ್ಯಾಯ ದಾಖಲೆಗಳನ್ನು ತೋರಿಸಿದರೆ ಮತದಾನ ಮಾಡಲು ಅವಕಾಶ ನೀಡಬಹುದು. ಅದಲ್ಲದೆ ಮತದಾನಕ್ಕೆ 8 ದಿನ ಮುಂಚಿತವಾಗಿ ವೋಟರ್ ಸ್ಲಿಪ್ಸ್ ಎಲ್ಲ ಬೂತ್‌ಗಳಿಗೂ ತಲುಪಿಸಲಾಗುತ್ತಿದ್ದು, ಮತದಾನದ 4 ದಿನ ಮೊದಲು ಎಲ್ಲ ವೋಟರ್‌ಚೀಟಿಗಳನ್ನು ಮತದಾರರಿಗೆ ತಲುಪಿಸಿ. ಬಾಕಿ ಉಳಿದವರಿಗೆ ಮತದಾನದ ದಿನ ನೀಡಿ ಎಂದು ಸಿಇಒ ಶಿವಾನಂದ ಕಾಪಶಿ ತಿಳಿಸಿದರು. ಮಾದರಿ ನೀತಿ ಸಂಹಿತೆ ಕುರಿತ ಮಾಹಿತಿ
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ, ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಟಿ. ಭೂಬಾಲನ್ ಅವರು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು.
- ಕುಂದಾಪುರದ ಯಾವ ಗ್ರಾಮದಲ್ಲೂ ಜಾಹೀರಾತು ವಲಯ ಇಲ್ಲವಾಗಿದ್ದು, ಆದ್ದರಿಂದ ಯಾವುದೇ ಪಕ್ಷಗಳು, ಖಾಸಗಿ ವ್ಯಕ್ತಿಗಳು ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ಹಾಕದಂತೆ ಪಿಡಿಒಗಳು ನೋಡಿಕೊಳ್ಳಬೇಕು. ಖಾಸಗಿ ಜಾಗ, ಜಾತ್ರೆ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಮತಿ ಪಡೆದು ಹಾಕಬೇಕು.
- ಯಾವುದೇ ಪಕ್ಷವನ್ನು ಬೆಂಬಲಿಸಿ ಗೋಡೆಬರಹಗಳಿದ್ದರೆ ಅದು ಕಾಣದಂತೆ ಬಣ್ಣ ಬಳಿಯಬೇಕು.
- ರಾಜಕೀಯ ಪಕ್ಷಗಳು ಹೊಸದಾಗಿ ಪ್ರಚಾರಕ್ಕಾಗಿ ಕಚೇರಿ ಮಾಡುವುದಾದರೂ ಅನುಮತಿ ಅಗತ್ಯ. ಪಕ್ಷಗಳ ಸಭೆ ನಡೆಯುವುದಾದರೂ ಏಕಗವಾಕ್ಷಿ ಕೇಂದ್ರದ ಅನುಮತಿ ಪಡೆಯುವುದು ಅಗತ್ಯ. ಆದರೆ ರಾತ್ರಿ 10 ಗಂಟೆಯ ಅನಂತರ ನಡೆಸುವಂತಿಲ್ಲ.
- ಮನೆಯಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅನುಮತಿ ಬೇಡ. ಆದರೆ ಹಾಲ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮದುವೆ, ಇತ್ಯಾದಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯ. ರಾಜಕೀಯ ನಾಯಕರ ಕುಟುಂಬಸ್ಥರ ಮದುವೆಯಾದರೆ ಅನುಮತಿ ಅಗತ್ಯ. ಯಾವ ಮದುವೆ ಸಮಾರಂಭಗಳಲ್ಲಿಯೂ ಪಕ್ಷದ ಚಿಹ್ನೆ, ರಾಜಕೀಯ ವ್ಯಕ್ತಿಗಳ ಭಾವಚಿತ್ರ ಹಾಕುವಂತಿಲ್ಲ.
- ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಲೌಡ್ ಸ್ಪೀಕರ್ ಬಳಸಲು ಅವಕಾಶವಿಲ್ಲ.
- ರಾಜಕೀಯ ಸಭೆಗಳಲ್ಲಿಯೂ ಕೋಮು ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ.
- ಬೈಕ್ ರ್ಯಾಲಿ, ಮೆರವಣಿಗೆಗೆ ಅನುಮತಿ ಅಗತ್ಯ. ಒಟ್ಟಾಗಿ 10 ಕ್ಕಿಂತ ವಾಹನಗಳು (ಸೈಕಲ್, ದ್ವಿಚಕ್ರ ಸೇರಿಸಿ) ಹೋಗುವುದಾದರೂ ಅನುಮತಿ ಪಡೆಯಬೇಕು.