ಕುಂದಾಪುರ: ಮರವಂತೆಯ ಅರಬಿ ಸಮುದ್ರ ಹಾಗೂ ಸೌಪರ್ಣಿಕಾ ನದಿ ತಟದಲ್ಲಿರುವ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ
ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜು.17ಕ್ಕೆಂದು ಕೆಲವು ಕ್ಯಾಲೆಂಡರ್‌ಗಳಲ್ಲಿ ತಪ್ಪಾಗಿ
ಪ್ರಕಟಗೊಂಡಿದ್ದು, ಈ ವರ್ಷ ಆ.16 ರಂದು ಮರವಂತೆ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ:Vijay: ಅಭಿಮಾನಿಗಳ ಕಣ್ತಪ್ಪಿಸಲು ಹೋಗಿ ಟ್ರಾಫಿಕ್ ರೂಲ್ಸ್ ಬ್ರೇಕ್: ದಳಪತಿಗೆ ಬಿತ್ತು ದಂಡ
ಶ್ರೀ ಮನ್ನಾರಾಯಣನ ದಶ ಅವತಾರಗಳಲ್ಲಿ ಒಂದಾದ ಶ್ರೀ ವರಾಹ ವಿಷ್ಣು ನರಸಿಂಹ ಸ್ವರೂಪದಲ್ಲಿ ಮರವಂತೆಯಲ್ಲಿ ನೆಲೆ ನಿಂತಿದ್ದು, ಇಲ್ಲಿಗೆ ಕರ್ಕಾಟಕ ಅಮಾವಾಸ್ಯೆಯಂದು ಸಹಸ್ರಾರು ಭಕ್ತರು ಆಗಮಿಸಿ, ಸಮುದ್ರ ಹಾಗೂ ನದಿಯಲ್ಲಿ ಸ್ನಾನ ಮಾಡಿ, ಶ್ರೀ ವರಾಹ, ಶ್ರೀ ಗಂಗಾಧರೇಶ್ವರ ದೇವರಿಗೆ ಅಭಿಷೇಕ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ದಿನ ಸಮುದ್ರ ಸ್ನಾನ ಮಾಡಿದರೆ ರೋಗ, ರುಜಿನಾದಿಗಳನ್ನು ದೇವರು ಪರಿಹರಿಸುತ್ತಾನೆ, ಪ್ರಕೃತಿ ವಿಕೋಪವನ್ನು ಸಹ ತಡೆಯುವ ಶಕ್ತಿ ಈ ದೇವರದ್ದು ಎನ್ನುವ ನಂಬಿಕೆಯಿದೆ. ಮತ್ಸ್ಯ ಸಂಪತ್ತು, ಮೀನುಗಾರರ ಸುರಕ್ಷತೆ, ಸಮೃದ್ಧ ಕೃಷಿಗಾಗಿಯೂ ದೇವರಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ.
ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ದಿನ ಶ್ರೀ ವರಾಹ ಸ್ವಾಮಿಯ ವಾರ್ಷಿಕ ಹಬ್ಬ ನಡೆಯುವುದು ದೇವಸ್ಥಾನದ ಪರಂಪರೆಯಾಗಿದೆ. ಆದರೆ ಕೆಲವು ಕ್ಯಾಲೆಂಡರ್ ಹಾಗೂ ಪಂಚಾಂಗದಲ್ಲಿ ಜು. 17ರಂದು ಕರ್ಕಾಟಕ ಅಮಾವಾಸ್ಯೆಯೆಂದು ತಪ್ಪಾಗಿ ಮುದ್ರಿತಗೊಂಡಿದೆ.
ಆದರೆ ಮರವಂತೆಯಲ್ಲಿ ಈ ವರ್ಷದ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಆ. 16ರಂದು ನಡೆಯಲಿದೆ. ಎಲ್ಲ ಭಕ್ತರು ಗೊಂದಲ
ಮಾಡಿಕೊಳ್ಳದೆ ಸಹಕರಿಸಬೇಕು ಎನ್ನುವುದಾಗಿ ಮರವಂತೆಯ ಶ್ರೀ ವರಾಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ. ನಾಯಕ್ ಪ್ರಕಟನೆ ಮೂಲಕ ತಿಳಿಸಿದ್ದಾರೆ.