Advertisement

ಕುಂದಾಪುರ: ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿ

10:58 PM Sep 26, 2021 | Team Udayavani |

ಇಂದು ಪ್ರವಾಸೋದ್ಯಮ ದಿನ. ಕುಂದಾಪುರ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈ ಹಿಂದೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅನೇಕ ಚಲನಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ. ಈ ಮೂಲಕ ಕುಂದಾಪುರದ ಕಡಲತಡಿ ಸಹಿತ ಬಹುತೇಕ ಪ್ರವಾಸಿ ತಾಣಗಳು ಜನರನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ತಲುಪಿದೆ. ಈಗಂತೂ ಸಾಮಾಜಿಕ ಜಾಲತಾಣಗಳಿಂದಾಗಿ ಸಣ್ಣ ಸಣ್ಣ ತಾಣಗಳು ಕೂಡ ಬಹಳ ಬೇಗನೆ ಜನರನ್ನು ತಲುಪಬಲ್ಲವು. ಹಾಗಾಗಿ ಈ ನಿಟ್ಟಿನಲ್ಲಿ ಆಡಳಿತ ಯಂತ್ರ ಸ್ವಲ್ಪವೇ ಮುತುವರ್ಜಿ ವಹಿಸಿದರೂ ಯಾವುದೇ ಪ್ರವಾಸಿ ತಾಣವನ್ನು ಬಹಳ ಬೇಗ ಜನಪ್ರಿಯ ಸ್ಥಳ ಆಗಿ ಮಾರ್ಪಾಡು ಮಾಡಬಹುದು.

Advertisement

ಕೋವಿಡ್‌ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿರುವುದರಿಂದ ಜನರು ಮತ್ತೆ ಕೋವಿಡ್‌ ಪೂರ್ವ ಕಾಲದಂತೆ ಪ್ರವಾಸ ಹೊರಡುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಎರಡು ವರ್ಷಗಳಿಂದ ನಿರ್ವಹಣ ಕೆಲಸ ಕಾರ್ಯಗಳೇ ಆಗಿಲ್ಲ. ಕೆಲವು ತಾಣ ಗಳಿಗೆ ಹೋಗುವ ದಾರಿಯೂ ಸರಿಯಾಗಿಲ್ಲ. ಕೇವಲ ನಡೆದಾಡುವ ದಾರಿಯಷ್ಟೇ ಇರುವ ಪ್ರದೇಶಗಳಲ್ಲಿ ಗಿಡಗಂಟಿ ಬೆಳೆದು ದಾರಿ ಕಾಣದಂತಹ ಸ್ಥಿತಿ ಇದೆ. ಆದುದರಿಂದ ಈ ಪ್ರದೇಶಗಳನ್ನು ಮತ್ತೆ ಸ್ವತ್ಛಗೊಳಿಸಬೇಕಾಗಿದೆ. ಕನಿಷ್ಠ ಮೂಲಕ ಸೌಕರ್ಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅವಶ್ಯವಿರುವಲ್ಲಿಗೆ ದಾರಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಕೊರೊನೋತ್ತರ ಪ್ರಪಂಚವೇ ಬದಲಾಗಿದೆ. ಹಿಂದೆ ನಗರಗಳಲ್ಲಿ ಜನರ ಓಡಾಟ ಹೆಚ್ಚಿತ್ತು. ಹಿಂದೆ ಸಂಜೆ ವೇಳೆಗೆ ತಿರುಗಾಟಕ್ಕೆಂದು ನಗರಕ್ಕೆ ಬರುವವರ ಸಂಖ್ಯೆ ಸಾಕಷ್ಟಿತ್ತು. ಹೊಟೇಲ್‌, ಮಾಲ್‌, ಎಲೆಕ್ಟ್ರಾನಿಕ್‌ ಮಳಿಗೆಗಳು, ಬಟ್ಟೆ ಮಳಿಗೆಗಳಿಗೆ ವೀಕೆಂಡ್‌ ಶಾಪಿಂಗ್‌ ಎಂದು ಹೋಗುತ್ತಿದ್ದರು. ಈಗ ಅದೆಲ್ಲವೂ ಹೆಚ್ಚಾಗಿ ಶನಿವಾರವೇ ನಡೆಯುತ್ತಿದೆ. ರವಿವಾರ ಸಂಜೆಯ ವೇಳೆ ಕುಟುಂಬ ಸಹಿತವಾಗಿ ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂಪ್ರದಾಯ ಆರಂಭವಾಗಿದೆ.

ದೂರದ ಪ್ರವಾಸಿ ತಾಣಗಳಿಗಿಂತ ಹತ್ತಿರದ ಪ್ರವಾಸಿ ತಾಣವೇ ಜನರಿಗೆ ಇಷ್ಟವಾಗತೊಡಗಿದೆ. ಜನ ಜಂಜಾಟದಿಂದ ದೂರವಿದ್ದು, ಪ್ರಶಾಂತ ತಾಣದಲ್ಲಿ ಕಾಲ ಕಳೆಯುವ ಹವ್ಯಾಸ ಹೆಚ್ಚುತ್ತಿದೆ.

Advertisement

ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಬೆಳವಣಿಗೆ ಕುರಿತು ಸ್ಥಳೀಯಾಡಳಿತಗಳೂ ಮನಸ್ಸು ಮಾಡಬೇಕಿವೆ. ಪ್ರವಾಸೋದ್ಯಮ ಇಲಾಖೆ ಯೂ ಗಮನ ಹರಿಸಬೇಕಿದೆ. ರಾಜ್ಯ ಸರಕಾರ ಪ್ರವಾಸಿಗರ ಆಕರ್ಷಣೆಗೆ ಕ್ರಮ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ. ಹಾಗೆ ಜನ ಬಂದಾಗ ಸ್ವತ್ಛತೆಗೆ ಆದ್ಯ ಗಮನ ನೀಡಬೇಕಿದೆ. ಇದಲ್ಲದ ಹೊರತು ಪ್ರವಾಸಿಗರು ಬಂದರೆ ಆ ಊರಿಗೆ ಶಾಪ. ಹಾಗಾಗದಂತೆ ಜಾಗೃತಿಯ ಅವಶ್ಯವೂ ಇದೆ. ನಗರಕ್ಕೆ ಆತುಕೊಂಡಿರುವ ಪಂಚಗಂಗಾವಳಿ, ಕೋಡಿ, ಬಬ್ಬುಕುದ್ರು ಮೊದಲಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆ ತಯಾರಾಗಲಿ. ಅದಕ್ಕೆ ಅಗತ್ಯ ಬಜೆಟ್‌ ಸರಕಾರದಿಂದ ದೊರೆಯಲಿ. ಅಲ್ಲಿನ ವ್ಯವಸ್ಥೆಗಳೆಲ್ಲ ಉತ್ತಮಗೊಳ್ಳಲಿ. ಆಗ ಒಂದಷ್ಟು ಆರ್ಥಿಕ ಚೇತರಿಕೆಯೂ ಕಂಡು ಬಂದೀತು.

-ಸಂ

Advertisement

Udayavani is now on Telegram. Click here to join our channel and stay updated with the latest news.

Next